Asianet Suvarna News Asianet Suvarna News

’ಕೈ’ ಅತೃಪ್ತರ ವಿಶ್ವಾಸ ಗಳಿಸಲು ಸಿಎಂ ಯತ್ನ

ಕಾಂಗ್ರೆಸ್‌ ಅತೃಪ್ತರ ವಿಶ್ವಾಸ ಗಳಿಸಲು ಸಿಎಂ ಯತ್ನ | ರಮೇಶ್‌ ಜಾರಕಿಹೊಳಿ ಮನೆಗೆ ತೆರಳಿ ಸುದೀರ್ಘ ಮಾತುಕತೆ |  ನಾಗೇಂದ್ರ, ಕುಮಟಳ್ಳಿಯಿಂದ ಅಹವಾಲು ಆಲಿಕೆ |  ಉಮೇಶ್‌ ಜಾಧವ್‌ ಬಿಜೆಪಿ ಸೇರುತ್ತಿದ್ದಂತೆ ಎಚ್ಚೆತ್ತ ಎಚ್‌ಡಿಕೆ
 

CM Kumaraswamy trying to take confidence of congress MLAs
Author
Bengaluru, First Published Mar 7, 2019, 7:58 AM IST

ಬೆಂಗಳೂರು (ಮಾ. 07):  ಕಾಂಗ್ರೆಸ್‌ ವಿರುದ್ಧ ಬಂಡಾಯ ಸಾರಿರುವ ಚಿಂಚೋಳಿ ಶಾಸಕ ಉಮೇಶ್‌ ಜಾಧವ್‌ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಂತೆ ಎಚ್ಚೆತ್ತುಗೊಂಡ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರೇ ಅಖಾಡಕ್ಕೆ ಇಳಿದು ಮಿತ್ರ ಪಕ್ಷ ಕಾಂಗ್ರೆಸ್ಸಿನ ಅತೃಪ್ತ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ನಡೆಸಿದ್ದಾರೆ.

ಬುಧವಾರ ದಿಢೀರನೆ ಮಾಜಿ ಸಚಿವ ಹಾಗೂ ಹಾಲಿ ಶಾಸಕ ರಮೇಶ್‌ ಜಾರಕಿಹೊಳಿ ಅವರು ತಂಗಿರುವ ಸರ್ಕಾರಿ ನಿವಾಸಕ್ಕೆ ತೆರಳಿದ ಕುಮಾರಸ್ವಾಮಿ ಅವರು ರಮೇಶ್‌ ಸೇರಿದಂತೆ ಇತರ ಅತೃಪ್ತ ಶಾಸಕರಾದ ಬಿ.ನಾಗೇಂದ್ರ ಹಾಗೂ ಮಹೇಶ್‌ ಕುಮಟಳ್ಳಿ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿ ಅವರ ಅಹವಾಲುಗಳನ್ನು ಆಲಿಸಿದರು.

ಮೊದಲಿನಿಂದಲೂ ಈ ಮೂವರು ಸೇರಿದಂತೆ ಕಾಂಗ್ರೆಸ್ಸಿನ ಅತೃಪ್ತ ಶಾಸಕರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಕಾಂಗ್ರೆಸ್ಸಿನ ಅತೃಪ್ತ ಶಾಸಕರು ಅವರ ಪಕ್ಷದ ನಾಯಕರೊಂದಿಗೆ ಎಷ್ಟು ಸಂಪರ್ಕದಲ್ಲಿದ್ದಾರೊ ಗೊತ್ತಿಲ್ಲ. ಆದರೆ, ನನ್ನೊಂದಿಗೆ ಸತತ ಸಂಪರ್ಕದಲ್ಲಿದ್ದಾರೆ ಎಂದು ಕುಮಾರಸ್ವಾಮಿ ಅವರು ಹಲವು ಬಾರಿ ಹೇಳಿದ್ದರು.

ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಕಲಬುರಗಿಯಲ್ಲಿ ಉಮೇಶ್‌ ಜಾಧವ್‌ ಬಿಜೆಪಿಗೆ ಸೇರ್ಪಡೆಯಾದ ಬಳಿಕ ಮತ್ತಷ್ಟುಕಾಂಗ್ರೆಸ್‌ ಶಾಸಕರು ಕಮಲದ ತೆಕ್ಕೆಗೆ ಹೋಗಬಹುದು ವದಂತಿಗಳ ಹಿನ್ನೆಲೆಯಲ್ಲಿ ರಮೇಶ್‌ ಜಾರಕಿಹೊಳಿ ಅವರ ಮನವೊಲಿಸುವ ಕೆಲಸವನ್ನು ಮುಖ್ಯಮಂತ್ರಿ ನಡೆಸಿದರು. ರಾಜೀನಾಮೆ ನೀಡುವ ಸಾಧ್ಯತೆಯ ಮೇರೆಗೆ ತೆರಳಿ ಮನವೊಲಿಸುವ ಕೆಲಸ ಮಾಡಿದರು. ರಮೇಶ್‌ ಜಾರಕಿಹೊಳಿ ಮತ್ತವರ ತಂಡದವರ ಕ್ಷೇತ್ರ ಹಾಗೂ ಅವರ ಕೆಲಸಗಳನ್ನು ಸರ್ಕಾರ ಮಟ್ಟದಲ್ಲಿ ಮಾಡಿಕೊಡುವ ಭರವಸೆಗಳನ್ನು ನೀಡಿದರು. ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಗಳನ್ನು ಕೈ ಬಿಡುವಂತೆ ಮನವಿ ಮಾಡಿದರು ಎಂದು ಮೂಲಗಳು ತಿಳಿಸಿವೆ.

ಬೆಳಗಾವಿ ಮತ್ತು ಬಳ್ಳಾರಿ ಜಿಲ್ಲೆಗಳ ಅಭಿವೃದ್ಧಿ ಮತ್ತು ಸಮಸ್ಯೆಗಳಿಗೆ ಸಂಬಂಧಿಸಿದಂತೆ ಇನ್ನು ಮುಂದೆ ತಾವೇ ಖುದ್ದು ಆಸಕ್ತಿ ವಹಿಸಿ ಗಮನಹರಿಸುತ್ತೇನೆ. ಯಾವುದಕ್ಕೂ ಪಕ್ಷ ತೊರೆಯುವ ಕಠಿಣ ನಿಲುವುಗಳನ್ನು ಕೈಗೊಳ್ಳುವುದು ಬೇಡ ಎಂಬ ಅಭಯವನ್ನೂ ಕುಮಾರಸ್ವಾಮಿ ನೀಡಿದರು ಎನ್ನಲಾಗಿದೆ.

ಸಚಿವ ಸ್ಥಾನದಿಂದ ಕೈಬಿಟ್ಟಬಳಿಕ ರಾಜ್ಯದಲ್ಲಿ ಆಗಿರುವ ರಾಜಕೀಯ ಬೆಳವಣಿಗೆಗಳು ಹಲವು ಸಮಸ್ಯೆಗಳಿಗೆ ಎಡೆಮಾಡಿಕೊಟ್ಟಿವೆ. ಮತ್ತೆ ಅಂತಹ ಪರಿಸ್ಥಿತಿ ತಲೆದೋರಬಾರದು. ಇದಕ್ಕೆ ಆಸ್ಪದ ನೀಡಬಾರದು. ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರವು ಕೈ ಜೋಡಿಸಲಿದೆ ಎಂದು ಆಶ್ವಾಸನೆ ನೀಡಿದರು ಎಂದು ಹೇಳಲಾಗಿದೆ. ಈ ವೇಳೆ ಜಾರಕಿಹೊಳಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಶಾಸಕಿ ಲಕ್ಷ್ಮೇ ಹೆಬ್ಬಾಳ್ಕರ್‌ ಕ್ಷೇತ್ರಕ್ಕೆ ನೂರಾರು ಕೋಟಿ ರು. ಅನುದಾನ ನೀಡಲಾಗುತ್ತದೆ. ಆದರೆ, ನಮ್ಮ ಕ್ಷೇತ್ರಗಳಿಗೆ ಕೆಲವೇ ಕೋಟಿ ಲೆಕ್ಕದಲ್ಲಿ ಬರುತ್ತದೆ. ಅವರ ಕೆಲಸ ಸುಲಭವಾಗಿ ಆದರೆ, ನಮ್ಮ ಕೆಲಸಗಳಿಗೆ ಮಣೆ ಹಾಕುವುದಿಲ್ಲ. ನಮ್ಮ ಕೆಲಸಗಳು ಆಗದಿದ್ದರೆ ಕ್ಷೇತ್ರದಲ್ಲಿ, ಜಿಲ್ಲೆಯಲ್ಲಿ ಹೇಗೆ ತಿರುಗಾಡುವುದು ಎಂದು ಪ್ರಶ್ನಿಸಿದರು ಎನ್ನಲಾಗಿದೆ.

ಕ್ಷೇತ್ರ, ಜಿಲ್ಲೆಯ ಸಮಸ್ಯೆ ಬಗ್ಗೆ ಚರ್ಚೆ- ಸಿಎಂ:

ಮಾತುಕತೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಭೇಟಿಯಲ್ಲಿ ಯಾವುದೇ ವಿಶೇಷ ಇಲ್ಲ. ಅವರ ಮನವೊಲಿಸಲು ಸಮಸ್ಯೆಯಾದರೂ ಎಲ್ಲಿದೆ? ತಿಂಡಿಗೆ ಕರೆದಿದ್ದರು. ಹೀಗಾಗಿ ಬಂದು ರುಚಿಕರ ಉಪ್ಪಿಟ್ಟು ತಿಂದಿದ್ದೇನೆ. ರಾಜಕೀಯ ಮಾತನಾಡಲು ಬಂದಿಲ್ಲ. ಬದಲಿಗೆ ಕ್ಷೇತ್ರದ ಮತ್ತು ಜಿಲ್ಲೆಯ ಅಭಿವೃದ್ಧಿ ಸಮಸ್ಯೆ ಕುರಿತು ಚರ್ಚೆ ಮಾಡಲಾಗಿದೆ. ಸ್ಥಳೀಯ ಸಮಸ್ಯೆಗಳನ್ನು ಕಾಂಗ್ರೆಸ್‌ ನಾಯಕರು ಬಗೆಹರಿಸಲಿದ್ದು, ನನ್ನ ಜವಾಬ್ದಾರಿಯನ್ನು ನಾನು ನಿಭಾಯಿಸುತ್ತಿದ್ದೇನೆ ಎಂದು ಹೇಳಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಬಿಜೆಪಿಯ ಕೆಲವರೂ ನನ್ನ ಜತೆ ಸಂಕರ್ಪದಲ್ಲಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಬಿ.ಎಸ್‌.ಯಡಿಯೂರಪ್ಪ ಎರಡೆರಡು ಬಾರಿ ಭೇಟಿಯಾಗಿದ್ದಾರೆ. ಅದರಲ್ಲಿ ಏನು ವಿಶೇಷ ಇಲ್ಲ. ಭೇಟಿ ಸಾಮಾನ್ಯವಾಗಿರುತ್ತದೆ. ಎಲ್ಲದಕ್ಕೂ ರಾಜಕೀಯ ಬಣ್ಣ ಹಚ್ಚುವ ಅಗತ್ಯ ಇಲ್ಲ ಎಂದರು.

ಕಾಂಗ್ರೆಸ್‌ ಶಾಸಕ ನಾಗೇಂದ್ರ ಮಾತನಾಡಿ, ಮುಖ್ಯಮಂತ್ರಿಗಳು ಭೇಟಿ ಮಾಡಿರುವುದರಲ್ಲಿ ಯಾವುದೇ ವಿಶೇಷತೆ ಇಲ್ಲ. ನಾವೆಲ್ಲಾ ಕಾಂಗ್ರೆಸ್‌ ಪಕ್ಷದಲ್ಲಿಯೇ ಇದ್ದೇವೆ. ಬಳ್ಳಾರಿ, ಬೆಳಗಾವಿ ರಾಜಕಾರಣಕ್ಕೆ ಸಂಬಂಧಪಟ್ಟಂತೆ ಅಸಮಾಧಾನ ಇದ್ದು, ಈ ವಿಚಾರ ಕುರಿತು ಚರ್ಚಿಸಲಾಗಿದೆ. ರಾಜಕೀಯಕ್ಕಿಂತ ಅಭಿವೃದ್ಧಿ ಚರ್ಚೆಯಾಗಿದೆ. ಬಳ್ಳಾರಿ ಉಸ್ತುವಾರಿಗೆ ಸಚಿವ ಡಿ.ಕೆ.ಶಿವಕುಮಾರ್‌ ಸಶಕ್ತರಾಗಿದ್ದಾರೆ. ಹೀಗಾಗಿ ಹೈಕಮಾಂಡ್‌ ಅವರಿಗೆ ಜವಾಬ್ದಾರಿ ನೀಡಿದೆ ಎಂದು ತಿಳಿಸಿದರು.

-----

ಅಸಮಾಧಾನವಿದ್ದರೂ ಪಕ್ಷ ತೊರೆಯಲ್ಲ: ಜಾರಕಿಹೊಳಿ

ಕಾಂಗ್ರೆಸ್‌ ಪಕ್ಷದ ಮೇಲೆ ಅಸಮಾಧಾನ ಇದೆಯಾದರೂ ಪಕ್ಷವನ್ನು ತೊರೆಯುವುದಿಲ್ಲ ಎಂದು ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.

ತಮ್ಮ ಅಸಮಾಧಾನಕ್ಕೆ ತಾವೇ ಕಾರಣವಾಗಿದ್ದು, ಈ ವೇಳೆ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಕಾಂಗ್ರೆಸ್‌ ಮುಖಂಡ ಉಮೇಶ್‌ ಜಾಧವ್‌ ರಾಜೀನಾಮೆಗೂ, ನಮಗೂ ಯಾವುದೇ ಸಂಬಂಧ ಇಲ್ಲ. ಕಾಂಗ್ರೆಸ್‌ ಬಗ್ಗೆ ತಮಗಿರುವ ಅಸಮಾಧಾನ ಕುರಿತು ಹೈಕಮಾಂಡ್‌ಗೆ ತಿಳಿಸಲಾಗಿದೆ. ಅಲ್ಲಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ಹೇಳಿದರು.

ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಕುಟುಂಬ ಮತ್ತು ನನ್ನ ಸಂಬಂಧ ತುಂಬ ಹಳೆಯದು. ಹಲವು ವಿಚಾರದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲಾಗಿದೆ. ಕಳೆದ 2-3 ತಿಂಗಳಲ್ಲಿ ರಾಜಕೀಯದಲ್ಲಿ ಸಾಕಷ್ಟುಬೆಳವಣಿಗೆಯಾಗಿವೆ. ಪಕ್ಷದ ಬಗ್ಗೆ ಅಸಮಾಧಾನ ಇದ್ದರೂ ಪಕ್ಷವನ್ನು ತೊರೆಯುವುದಿಲ್ಲ ಎಂದರು.
 

Follow Us:
Download App:
  • android
  • ios