ಸಾಲಮನ್ನಾ ರಹಸ್ಯ ಬಹಿರಂಗ : ಕುಮಾರಸ್ವಾಮಿ ಬಜೆಟ್ ನಲ್ಲಿ ಏನಿದೆ..?

CM Kumaraswamy to present Karnataka budget today, all eyes on farm loan waiver package
Highlights

ಎದುರಾಗಿದ್ದ ಹಲವು ಅಡ್ಡಿ ಆತಂಕಗಳನ್ನು ನಿವಾರಿಸಿಕೊಂಡ ಹಿನ್ನೆಲೆಯಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್‌ ಇಂದು ಮಂಡನೆಯಾಗಲಿದೆ.
 

ಬೆಂಗಳೂರು :  ಎದುರಾಗಿದ್ದ ಹಲವು ಅಡ್ಡಿ ಆತಂಕಗಳನ್ನು ನಿವಾರಿಸಿಕೊಂಡ ಹಿನ್ನೆಲೆಯಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್‌ ಇಂದು ಮಂಡನೆಯಾಗಲಿದೆ.

ಹಣಕಾಸು ಖಾತೆಯ ಹೊಣೆ ಹೊತ್ತಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಬೆಳಗ್ಗೆ 11.30ಕ್ಕೆ ಬಜೆಟ್‌ ಮಂಡಿಸಲಿದ್ದು, ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಸಾಕಷ್ಟುಚರ್ಚೆಗೆ ನಾಂದಿ ಹಾಡಿರುವ ರೈತರ ಸಾಲಮನ್ನಾ ಬಗ್ಗೆ ಅಧಿಕೃತ ಘೋಷಣೆ ಹೊರಬೀಳುವುದು ನಿಶ್ಚಿತವಾಗಿದೆ. ಸಾಲಮನ್ನಾ ಸೇರಿದಂತೆ ಕೃಷಿ ಮತ್ತು ನೀರಾವರಿಗೆ ಹೆಚ್ಚಿನ ಅನುದಾನ ನಿಗದಿಪಡಿಸುವ ಮೂಲಕ ತಮ್ಮದು ರೈತಪರ ಸರ್ಕಾರ ಎಂಬುದನ್ನು ಬಜೆಟ್‌ ಮೂಲಕ ಬಿಂಬಿಸುವ ಆಶಯವನ್ನು ಹೊಂದಲಾಗಿದೆ.

ಆದರೆ, ರೈತರ ಸಾಲಮನ್ನಾ ಸ್ವರೂಪ ಹೇಗಿರುತ್ತದೆ ಎಂಬುದರ ಬಗ್ಗೆ ಕುತೂಹಲ ಮೂಡಿದೆ. ರೈತರ ಎಲ್ಲ ಸಾಲಮನ್ನಾ ಮಾಡುವುದಾಗಿ ತಮ್ಮ ಜೆಡಿಎಸ್‌ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದ ಕುಮಾರಸ್ವಾಮಿ ಅವರಿಗೆ ಇದು ಸಮ್ಮಿಶ್ರ ಸರ್ಕಾರವಾಗಿದ್ದರಿಂದ ಸಂಪೂರ್ಣ ಸಾಲ ಮನ್ನಾ ಮಾಡಲು ಬೇಕಾಗುವಷ್ಟುಆರ್ಥಿಕ ಸಂಪನ್ಮೂಲ ಲಭ್ಯವಾಗುವುದು ಕಷ್ಟ. ಹೀಗಾಗಿಯೇ ರೈತರ ಸಾಲಮನ್ನಾ ಖಚಿತವಾಗಿದ್ದರೂ ಸಂಪೂರ್ಣ ಮನ್ನಾ ಅಲ್ಲ ಎಂದು ಸರ್ಕಾರದ ಉನ್ನತ ಮೂಲಗಳಿಂದ ತಿಳಿದುಬಂದಿದೆ.

ತಮ್ಮ ಪಕ್ಷಕ್ಕೆ ಪೂರ್ಣ ಬಹುಮತ ದೊರಕಿದ್ದಲ್ಲಿ ಸರ್ಕಾರ ಅಸ್ತಿತ್ವಕ್ಕೆ ಬಂದ 24 ಗಂಟೆಗಳಲ್ಲೇ ರೈತರ ಸಂಪೂರ್ಣ ಸಾಲಮನ್ನಾ ಮಾಡುವುದಾಗಿ ಹೇಳಿಕೊಂಡು ಬಂದಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಇದೀಗ ಸಾಲಮನ್ನಾ ಸಂಬಂಧ ಮಿತ್ರ ಪಕ್ಷ ಕಾಂಗ್ರೆಸ್ಸಿನ ನಾಯಕರನ್ನು ಮನವೊಲಿಸಲು ಹರಸಾಹಸವನ್ನೇ ಮಾಡಿದ್ದಾರೆ. ಅಂತಿಮವಾಗಿ ಅದರಲ್ಲಿ ಯಶಸ್ವಿಯೂ ಆಗಿದ್ದಾರೆ.

ಮಾಜಿ ಮುಖ್ಯಮಂತ್ರಿಯೂ ಆಗಿರುವ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಪೂರ್ಣ ಪ್ರಮಾಣದ ಬಜೆಟ್‌ ಮಂಡನೆಗೆ ಆರಂಭದಿಂದಲೇ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ್ದರು. ಕಾಂಗ್ರೆಸ್‌ ಪಕ್ಷವೂ ಸರ್ಕಾರದಲ್ಲಿ ಪಾಲುದಾರನಾಗಿರುವುದರಿಂದ ಪರಿಷ್ಕೃತ ಬಜೆಟ್‌ ಮಂಡಿಸಿದರೆ ಸಾಕು ಎಂಬ ಅನಿಸಿಕೆ ವ್ಯಕ್ತಪಡಿಸಿದ್ದರು. ಜೊತೆಗೆ ಆರ್ಥಿಕ ಸಂಪನ್ಮೂಲದ ಕೊರತೆ ಹಿನ್ನೆಲೆಯಲ್ಲಿ ರೈತರ ಸಾಲಮನ್ನಾ ಕಾರ್ಯಸಾಧುವಲ್ಲ ಎಂಬ ಅಭಿಪ್ರಾಯವನ್ನು ಹೊರಹಾಕಿದ್ದರು. ಆದರೆ, ಪಟ್ಟು ಬಿಡದ ಕುಮಾರಸ್ವಾಮಿ ಅವರು ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿ ಒಪ್ಪಿಗೆ ಪಡೆಯುವಲ್ಲಿ ಸಫಲರಾದರು.

ಇಡೀ ರಾಜ್ಯ ರಾಜಕಾರಣ ಮತ್ತು ಸಾರ್ವಜನಿಕರು ಕುತೂಹಲದಿಂದ ಎದುರು ನೋಡುತ್ತಿರುವುದು ರೈತರ ಸಾಲಮನ್ನಾ ಎಷ್ಟುಮಾಡುತ್ತಾರೆ ಎಂಬುದನ್ನು. ಹಿಂದಿನ ಸರ್ಕಾರದ ಪ್ರಮುಖ ಯೋಜನೆಗಳನ್ನು ಕೈಬಿಡುವಂತಿಲ್ಲ ಎಂದು ಮಿತ್ರ ಪಕ್ಷ ಕಾಂಗ್ರೆಸ್ಸಿನ ಒತ್ತಾಸೆ ಇರುವುದರಿಂದ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿರುವಂತೆ ರೈತರ ಎಲ್ಲ ಸಾಲ ಮನ್ನಾ ಮಾಡುವುದು ಸಾಧ್ಯವಿಲ್ಲವಾದರೂ ರೈತ ಸಮುದಾಯಕ್ಕೆ ನಿರಾಸೆಯಾಗದಂತೆ ಮನ್ನಾ ಮಾಡಲಾಗುವುದು. ಸಾಲಮನ್ನಾಕ್ಕಾಗಿ ಜೆಡಿಎಸ್‌ ಪ್ರಣಾಳಿಕೆಯಲ್ಲಿ ನೀಡಿರುವ ಹಲವು ಪ್ರಮುಖ ಭರವಸೆಗಳನ್ನು ಕೈಬಿಡುವ ಸಾಧ್ಯತೆಯೂ ಇದೆ ಎಂಬ ಸುಳಿವನ್ನು ಮುಖ್ಯಮಂತ್ರಿಗಳ ಆಪ್ತರು ನೀಡಿದ್ದಾರೆ.

ಇದೇ ವರ್ಷದ ಫೆಬ್ರವರಿ 16ರಂದು ಹಿಂದಿನ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಒಟ್ಟು 2,09,181 ಕೋಟಿ ರು.ಗಳ ಗಾತ್ರದ 2018-19ನೇ ಸಾಲಿನ ಬಜೆಟ್‌ ಮಂಡಿಸಿದ್ದರು. ಇದೀಗ ಕುಮಾರಸ್ವಾಮಿ ಅವರು ಮಂಡಿಸಲಿರುವ ಬಜೆಟ್‌ನ ಗಾತ್ರ ಎಷ್ಟಿರಲಿದೆ ಎಂಬುದೂ ಸಾಕಷ್ಟುಕುತೂಹಲ ಮೂಡಿಸಿದೆ.

ಜೊತೆಗೆ ರಾಜ್ಯ ಸರ್ಕಾರದ ಮೇಲಿನ ಸಾಲದ ಹೊರೆ ಹೆಚ್ಚಾಗಿದೆ ಎಂಬ ಆರೋಪ ಕೇಳಿಬರುತ್ತಿರುವ ಈ ಸನ್ನಿವೇಶದಲ್ಲಿ ಕುಮಾರಸ್ವಾಮಿ ಅವರು ದೊಡ್ಡ ಭರವಸೆಗಳನ್ನು ಈಡೇರಿಸುವ ಸಂಬಂಧ ಮತ್ತಷ್ಟುಸಾಲ ಮಾಡುತ್ತಾರೆಯೇ ಅಥವಾ ಇತರ ಕೆಲವು ಯೋಜನೆಗಳ ವೆಚ್ಚ ಕಡಿತಗೊಳಿಸಿ ಹೊಂದಾಣಿಕೆ ಮಾಡುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

ಹಿಂದೆ ಸಿಎಂ ಆಗಿದ್ದರೂ, ಎಚ್‌ಡಿಕೆಗೆ ಮೊದಲ ಬಜೆಟ್‌

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕುಮಾರಸ್ವಾಮಿ ಅವರು ಇದೇ ಮೊದಲ ಬಾರಿಗೆ ರಾಜ್ಯದ ಬಜೆಟ್‌ ಮಂಡನೆ ಮಾಡುತ್ತಿದ್ದಾರೆ. ಹಿಂದೆ 2006ರಲ್ಲಿ ಜೆಡಿಎಸ್‌-ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಅವರು ಮುಖ್ಯಮಂತ್ರಿಯಾಗಿದ್ದರೂ ಹಣಕಾಸು ಖಾತೆಯನ್ನು ಬಿಜೆಪಿಯ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಬಿಟ್ಟುಕೊಟ್ಟಿದ್ದರು. ಹೀಗಾಗಿ, ಆ ಸರ್ಕಾರದಲ್ಲಿ ಯಡಿಯೂರಪ್ಪ ಅವರು ಬಜೆಟ್‌ ಮಂಡಿಸಿದ್ದರು. ಇದೀಗ ಜೆಡಿಎಸ್‌-ಕಾಂಗ್ರೆಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಪಟ್ಟು ಹಿಡಿದು ಹಣಕಾಸು ಖಾತೆ ಪಡೆದಿರುವ ಕುಮಾರಸ್ವಾಮಿ ಅವರು ಮೊದಲ ಬಾರಿಗೆ ಗುರುವಾರ ಬಜೆಟ್‌ ಮಂಡಿಸುತ್ತಿದ್ದಾರೆ.


ಸಾಲಮನ್ನಾ ಖಚಿತ

ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರವು ಈಗಾಗಲೇ ಭರವಸೆ ನೀಡಿದಂತೆ ರೈತರ ಸಾಲಮನ್ನಾ ಮಾಡಲಿದೆ. ಈ ಮೂಲಕ ಉಳುಮೆಯನ್ನು ಲಾಭದಾಯಕ ಕ್ಷೇತ್ರವಾಗಿ ಮಾರ್ಪಡಿಸಲಿದೆ. ಇಡೀ ದೇಶದ ರೈತರಿಗೆ ಆಶಾಭಾವನೆಯ ದಾರಿ ದೀಪವಾಗಲು ನಮ್ಮ ಸರ್ಕಾರಕ್ಕೆ ಈ ಬಜೆಟ್‌ ಒಂದು ಅವಕಾಶ.

- ರಾಹುಲ್‌ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ

 

 • ಬಜೆಟ್‌ ನಿರೀಕ್ಷೆಗಳು
 • - ನೀರಾವರಿಗೆ 25 ಸಾವಿರ ಕೋಟಿ ರು. ಅನುದಾನ ನಿಗದಿ
 • - ನೀರಿನ ಸಮರ್ಪಕ ಬಳಕೆ ಸಂಬಂಧ ಇಸ್ರೇಲ್‌ ಮಾದರಿ ಕೃಷಿ ಪದ್ಧತಿ ಅಳವಡಿಕೆಗೆ ಪ್ರೋತ್ಸಾಹ
 • - ಗರ್ಭಿಣಿಯರು, ಬಾಣಂತಿಯರಿಗೆ ಆರು ತಿಂಗಳವರೆಗೆ ಆರು ಸಾವಿರ ರು. ಮಾಸಾಶನ
 • - 65 ವರ್ಷ ಮೇಲ್ಪಟ್ಟವಯೋವೃದ್ಧರಿಗೆ ಆರು ಸಾವಿರ ರು. ಮಾಸಾಶನ
 • - ಸರ್ವರಿಗೂ ಶಿಕ್ಷಣ, ಸರ್ವರಿಗೂ ಆರೋಗ್ಯ, ಸರ್ವರಿಗೂ ವಸತಿ ಭಾಗ್ಯ ಘೋಷಣೆ
 • - ಎಲ್ಲ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ನಿರ್ಭಯಾ ಕೇಂದ್ರ ಸ್ಥಾಪನೆ
 • - ನೆನೆಗುದಿಗೆ ಬಿದ್ದಿದ್ದ ಬೆಂಗಳೂರಿನ ಹೊರವಲಯದಲ್ಲಿ ಐದು ಪ್ರತ್ಯೇಕ ಟೌನ್‌ಶಿಪ್‌ ನಿರ್ಮಾಣಕ್ಕೆ ಚಾಲನೆ
 • - ಬರಗಾಲದಲ್ಲಿ ಮೇವು ಕೊರತೆ ನೀಗಿಸಲು ಮೇವು ಭದ್ರತೆ ನೀತಿ ಪ್ರಕಟ
 • - ಪ್ರತಿವರ್ಷ 20 ಲಕ್ಷ ಹೊಸ ಉದ್ಯೋಗ ಸೃಷ್ಟಿಗೆ ಆದ್ಯತೆ
 • - ಮನೆ ಬಾಗಿಲಿಗೆ ಉಚಿತ ಔಷಧ ವಿತರಿಸುವ ಹೊಸ ಯೋಜನೆ
 • - ಕೆಂಪೇಗೌಡ ಕೌಶಲ್ಯಾಭಿವೃದ್ಧಿ ವಿಶ್ವವಿದ್ಯಾಲಯ ಸ್ಥಾಪನೆ
loader