ಬೆಂಗಳೂರು (ಜು. 13):  ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಶುಕ್ರವಾರ ವಿಧಾನಸಭೆಯಲ್ಲಿ ತಾವಾಗಿಯೇ ವಿಶ್ವಾಸಮತ ಯಾಚನೆ ಮಾಡುವ ನಿರ್ಧಾರ ಪ್ರಕಟಿಸಿರುವುದು ಸಹಜವಾಗಿಯೇ ಅಚ್ಚರಿ ಮೂಡಿಸಿದೆ.

ಮುಂದಿನ ನಡೆ ತಿಳಿಸಿದ ರೆಬೆಲ್ ನಾಯಕ ವಿಶ್ವನಾಥ್

ಸಂತಾಪ ನಿರ್ಣಯದ ಬಳಿಕ ವಿಧಾನಮಂಡಲದ ಉಭಯ ಸದನಗಳಲ್ಲೂ ಸರ್ಕಾರಕ್ಕೆ ಬಹುಮತವಿಲ್ಲ ಎಂಬ ಅಂಶವನ್ನು ಮುಂದಿಟ್ಟುಕೊಂಡು ಪ್ರತಿಪಕ್ಷ ಬಿಜೆಪಿ ಹೋರಾಟ ಹಮ್ಮಿಕೊಳ್ಳಲು ತುದಿಗಾಲ ಮೇಲೆ ನಿಂತಿತ್ತು. ಜೊತೆಗೆ ಸದನದ ಇತರ ಕಾರ್ಯಕಲಾಪಗಳನ್ನು ನಡೆಯುವುದಕ್ಕೆ ಅವಕಾಶವನ್ನೂ ನೀಡುತ್ತಿರಲಿಲ್ಲ. ಹೀಗಾಗಿ, ಸರ್ಕಾರಕ್ಕೆ ಬಹುಮತವಿಲ್ಲ ಎಂಬ ಅಂಶವನ್ನು ಬಿಜೆಪಿ ಪ್ರತಿಪಾದಿಸುವ ಮೊದಲು ತಾವೇ ಆ ವಿಷಯ ಪ್ರಸ್ತಾಪಿಸಿದರೆ ನೈತಿಕವಾಗಿ ತಾವು ಸದನವನ್ನು ಎದುರಿಸಲು ಸಮಸ್ಯೆಯಾಗುವುದಿಲ್ಲ ಎಂಬ ನಿಲುವಿಗೆ ಮುಖ್ಯಮಂತ್ರಿಗಳು ಬಂದರು ಎನ್ನಲಾಗಿದೆ.

ವಿಧಾನಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸುತ್ತಿದ್ದಂತೆಯೇ ಪ್ರತಿಪಕ್ಷ ಬಿಜೆಪಿ ಪಾಳೆಯದಲ್ಲಿ ಸಹಜವಾಗಿಯೇ ಕುತೂಹಲ ಮತ್ತು ಅಚ್ಚರಿ ಮೂಡಿತು. ಸದನದಲ್ಲಿದ್ದ ಬಿಜೆಪಿ ಶಾಸಕರು ಮೊಗಸಾಲೆಯಲ್ಲಿ ಸೇರಿ ಚರ್ಚಿಸತೊಡಗಿದರು. ನಂತರ ಲಗುಬಗೆಯಿಂದ ಹೊರನಡೆದು ಪ್ರತಿಪಕ್ಷದ ನಾಯಕ ಯಡಿಯೂರಪ್ಪ ಅವರ ಕಚೇರಿಯಲ್ಲಿ ಸಭೆ ನಡೆಸಿ ಶಾಸಕರನ್ನು ರೆಸಾರ್ಟ್‌ಗೆ ಕರೆದೊಯ್ಯುವ ನಿರ್ಧಾರ ಕೈಗೊಂಡರು.

ರಾಮಲಿಂಗಾರೆಡ್ಡಿ ನಡೆ ಸಸ್ಪೆನ್ಸ್‌

ನಾಡಿದ್ದು ಸಭೆ ನಡೆಸಿ ವಿಶ್ವಾಸಮತ ದಿನ ನಿಗದಿ

ವಿಶ್ವಾಸಮತ ಯಾಚನೆ ಸಂಬಂಧ ಚರ್ಚಿಸಲು ಪ್ರತಿಪಕ್ಷ ನಾಯಕರು ಗೈರಾಗಿದ್ದ ಕಾರಣ ಸದನ ಸಲಹಾ ಸಮಿತಿಯ ಸಭೆಯನ್ನು ವಿಧಾನಸಭೆಯ ಸ್ಪೀಕರ್ ಮುಂದೂಡಿದ್ದು, ಸೋಮವಾರ ಪ್ರತಿಪಕ್ಷ ಬಿಜೆಪಿ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ದಿನಾಂಕ ನಿಗದಿಗೊಳಿಸುವ ಬಗ್ಗೆ ತೀರ್ಮಾನಿಸಿದ್ದಾರೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆ ಮಾಡುವುದಾಗಿ ಸ್ವಯಂಪ್ರೇರಿತವಾಗಿ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ದಿನಾಂಕ ನಿಗದಿ ಮಾಡುವ ಸಂಬಂಧ ಸಲಹಾ ಸಮಿತಿ ಸಭೆಯ ನಡೆಸಲಾಯಿತು. ಆದರೆ, ಪ್ರತಿಪಕ್ಷದ ನಾಯಕ ಬಿ.ಎಸ್ .ಯಡಿಯೂರಪ್ಪ ಅವರು ಸಭೆಗೆ ಗೈರಾಗಿದ್ದರಿಂದ ಸ್ಪೀಕರ್ ರಮೇಶ್ ಕುಮಾರ್ ಸಭೆ ನಡೆಸಲಿಲ್ಲ. ಪ್ರತಿಪಕ್ಷ ನಾಯಕರು ಇಲ್ಲದೆ ಸಭೆ ನಡೆಸುವುದು ವಾಡಿಕೆಯಲ್ಲ.

ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದು ಅಭಿಪ್ರಾಯಪಟ್ಟರು. ಸೋಮವಾರದಿಂದ ಸದನದಲ್ಲಿ ಇಲಾಖಾವಾರು ಬೇಡಿಕೆಗಳು ಮಂಡನೆಯಾಗಲಿದ್ದು, ಇದರ ಮೇಲೆ ಚರ್ಚೆಗಳು ನಡೆಯಲಿವೆ.

ಅಲ್ಲದೇ, ಪ್ರಮುಖ ಮಸೂದೆಗಳು ಬಂದಲ್ಲಿ ಅವುಗಳನ್ನು ಮಂಡನೆ ಮಾಡಲು ಅವಕಾಶ ನೀಡಲಾಗುವುದು ಎಂಬ ಭರವಸೆಯನ್ನು ಸರ್ಕಾರಕ್ಕೆ ಸ್ಪೀಕರ್ ನೀಡಿದರು ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ಮುಂದಿನ ನಡೆ ಏನು?

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸ್ವಯಂಪ್ರೇರಣೆಯಿಂದ ವಿಶ್ವಾಸಮತ ಯಾಚಿಸುವುದಾಗಿ ಹೇಳಿದ ಬೆನ್ನಲ್ಲೇ ಪ್ರತಿಪಕ್ಷ ಬಿಜೆಪಿಯಲ್ಲೂ ತುಸು ಆತಂಕ ಕಾಣಿಸಿಕೊಂಡಿದ್ದು, ಮುಂದಿನ ನಡೆ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿದೆ.

- ಕುಮಾರಸ್ವಾಮಿ ಅವರ ಹೇಳಿಕೆ ಬೆನ್ನಲ್ಲೇ ತಮ್ಮ ಪಕ್ಷದ ಶಾಸಕರನ್ನು ಸಂಪರ್ಕಿಸಿ ಸೆಳೆಯುವ ಪ್ರಯತ್ನ ಮಾಡಬಹುದು ಎಂಬ ಭೀತಿ ಉಂಟಾಗಿರುವುದರಿಂದ ವಿಶ್ವಾಸಮತ ಯಾಚನೆ ದಿನದವರೆಗೆ ಶಾಸಕರನ್ನು ಹಿಡಿದಿಡಲು ರೆಸಾರ್ಟ್ ವಾಸವನ್ನೇ ಮುಂದುವರೆಸಲು ಚಿಂತನೆ ನಡೆಸಿದೆ.

- ಶಾಸಕರ ರಾಜೀನಾಮೆ ಮತ್ತು ಅನರ್ಹತೆ ಕುರಿತ ಪ್ರಕರಣಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮಂಗಳವಾರಕ್ಕೆ ಮುಂದೂಡಿದ್ದರಿಂದ ಅಲ್ಲಿವರೆಗೆ ಕಾದು ನೋಡಲು ನಿರ್ಧರಿಸಿದೆ.

- ಮಂಗಳವಾರದ ವಿಚಾರಣೆ ನಂತರ ಸುಪ್ರೀಂಕೋರ್ಟ್ ಶಾಸಕರ ರಾಜೀನಾಮೆ ಅಂಗೀಕರಿಸಲು ವಿಧಾನಸಭೆ ಸ್ಪೀಕರ್‌ಗೆ ಗಡುವು ಅಥವಾ ಸೂಚನೆ ನೀಡಿದಲ್ಲಿ ಬಿಜೆಪಿ ನಿಟ್ಟುಸಿರು ಬಿಡಬಹುದು. ಹೀಗಾಗಿ ಮಂಗಳವಾರದವರೆಗೆ ಮತ್ತು ವಿಶ್ವಾಸಮತ ಯಾಚನೆ ದಿನದವರೆಗೆ ರಾಜೀನಾಮೆ ನೀಡಿ ಹೊರಬಂದಿರುವ ಆಡಳಿತಾರೂಢ ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರು ತಮ್ಮ ನಿಲವಿನಿಂಗ ಹಿಂದೆ ಸರಿಯದಂತೆ ಪರ್ಯಾಯ ಸರ್ಕಾರದ ಸ್ಪಷ್ಟ ಭರವಸೆ ನೀಡಬಹುದು.