ನವದೆಹಲಿ (ಮಾ. 10):  ರಾಜ್ಯದಲ್ಲಿನ ಪ್ರಾಕೃತಿಕ ವಿಪತ್ತಿಗೆ ಇನ್ನೂ ಹೆಚ್ಚಿನ ಪರಿಹಾರ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮನವಿ ಮಾಡಿದರು.

ಪ್ರಾಕೃತಿಕ ವಿಪತ್ತಿಗೆ ಪರಿಹಾರವಾಗಿ ಕೇಂದ್ರ ಸರ್ಕಾರದ ವಿಪತ್ತು ನಿರ್ವಹಣಾ ಮಾರ್ಗಸೂಚಿಗಳ ಪ್ರಕಾರವೇ .2434 ಕೋಟಿ ಪರಿಹಾರ ನೀಡುವಂತೆ ನಾವು ಮನವಿ ಮಾಡಿದ್ದೆವು. ಆದರೆ ಪರಿಹಾರ ರೂಪದಲ್ಲಿ ಕೇವಲ .949.49 ಕೋಟಿ ಮಂಜೂರು ಆಗಿದೆ.

ಮುಂಗಾರು ಮತ್ತು ಹಿಂಗಾರು ಹಂಗಾಮುಗಳೆರಡರಲ್ಲೂ ಅತಿವೃಷ್ಟಿಮತ್ತು ಅನಾವೃಷ್ಟಿಯಿಂದ ಸಂಭವಿಸಿದ ನಷ್ಟ.32,335 ಕೋಟಿಗಳಷ್ಟಾಗಿದ್ದು, ರಾಜ್ಯದ ಆರ್ಥಿಕತೆ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ರಾಜ್ಯದಲ್ಲಿ ಬರ ಪರಿಸ್ಥಿತಿ ನಿರ್ವಹಣೆಗೆ ರಾಜ್ಯ ಸರ್ಕಾರ ತ್ವರಿತ ಕ್ರಮಗಳನ್ನು ತೆಗೆದುಕೊಂಡಿದ್ದು, ಎಸ್‌ಡಿಆರ್‌ಎಫ್‌ ನಿಧಿಯಲ್ಲದೆ ರಾಜ್ಯ ಸರ್ಕಾರದಿಂದ .386 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಕುಮಾರಸ್ವಾಮಿ ಅವರು ಪ್ರಧಾನಿ ಗಮನಕ್ಕೆ ತಂದರು.

ಕುಡಿಯುವ ನೀರು, ಮೇವು ಒದಗಿಸುವ ಜೊತೆಗೆ ಜನರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ 8.18 ಕೋಟಿ ಮಾನವ ದಿನಗಳನ್ನು ಸೃಜಿಸಲಾಗಿದೆ. ಇದಕ್ಕಾಗಿ ಬಾಕಿ ಉಳಿದಿರುವ .1351 ಕೋಟಿಗಳಷ್ಟುವೇತನ, ಸಾಮಗ್ರಿ ವೆಚ್ಚದ ಕೇಂದ್ರದ ಪಾಲು ಹಾಗೂ ಕೇಂದ್ರದಿಂದ ಅನುದಾನ ಬಿಡುಗಡೆಯನ್ನು ನಿರೀಕ್ಷಿಸಿ ರಾಜ್ಯ ಸರ್ಕಾರವೇ ಬಿಡುಗಡೆ ಮಾಡಿದೆ. ಆದ್ದರಿಂದ ಈ ಬಾಕಿ ಅನುದಾನವನ್ನು ಕೂಡಲೇ ಬಿಡುಗಡೆ ಮಾಡುವಂತೆ ಮೋದಿ ಅವರಲ್ಲಿ ಕುಮಾರಸ್ವಾಮಿ ಮನವಿ ಮಾಡಿದರು.