ಮೇ 23 ರ ನಂತರ ದಿಲ್ಲಿಯಲ್ಲಿ ಏನಾಗುತ್ತೋ ಅದರ ನೇರ ಎಫೆಕ್ಟ್ ಬೀಳುವುದು ಬೆಂಗಳೂರಿನ ಮೇಲೆ ಎನ್ನುವುದು ಎಲ್ಲರಿಗೂ ಗೊತ್ತಿರುವುದೇ. ಆದರೆ ಪ್ರಧಾನಿ ಮೋದಿ ಮತ್ತು ಅಮಿತ್‌ ಶಾ ಅವರಿಗೆ ಹತ್ತಿರ ಇರುವ ಕೆಲ ಬಿಜೆಪಿ ನಾಯಕರು ಹೇಳುತ್ತಿರುವ ಗುಸುಗುಸು ವಿಚಿತ್ರವಾದರೂ ಕುತೂಹಲಕಾರಿಯಾಗಿದೆ.

ಬರಗಾಲದ ಸಂದರ್ಭದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪ್ರಧಾನಿ ಮೋದಿ ಸಾಹೇಬರನ್ನು ಒಬ್ಬರೇ ಭೇಟಿ ಆಗಿದ್ದಾಗ ಕಾಂಗ್ರೆಸ್‌ ಜೊತೆ ಏಗಿ ಸಾಕಾಗಿದೆ ಎಂದಿದ್ದರಂತೆ. ಇದೇ ವೇಳೆ ದೊಡ್ಡ ಗೌಡರನ್ನು ಒಪ್ಪಿಸಿ ಲೋಕಸಭೆ ಚುನಾವಣೆ ನಂತರ ಬಿಜೆಪಿ ಜೊತೆ ಸೇರುವ ಬಗ್ಗೆಯೂ ಪ್ರಸ್ತಾಪವಾಗಿತ್ತಂತೆ.

ಆದರೆ ‘ನಹೀ ಕುಮಾರಸ್ವಾಮಿ ಜೀ.  ಜೆಡಿಎಸ್‌ ಅನ್ನು ನಂಬೋದು ಕಷ್ಟ. ವಿಧಾನಸಭಾ ಚುನಾವಣೆಯಲ್ಲಿ ಒಳಗಿಂದ ಒಳಗೇ ನಮ್ಮ ಜೊತೆ ಮೈತ್ರಿ ಮಾಡಿಕೊಂಡು ಕೊನೆಗೆ ಕಾಂಗ್ರೆಸ್‌ ಜೊತೆ ಹೋಗಿದ್ದೀರಿ ನೀವು. ಮುಂದೆ ಎನ್‌ಡಿಎಗೆ ಬರಬೇಕಿದ್ದರೆ ಈಗಲೇ ಸರ್ಕಾರದಿಂದ ಹೊರಗೆ ಬನ್ನಿ’ ಎಂದು ಹೇಳಿದ್ದರೆಂಬ ಮಾತು ಕೇಳಿಬಂದಿತ್ತು. ಕುತೂಹಲ ಏನಪ್ಪ ಎಂದರೆ, ಮಾತುಕತೆಯಾದ 3 ತಿಂಗಳ ನಂತರ ದಿಲ್ಲಿಯ ಬಿಜೆಪಿ ನಾಯಕರು ಇದನ್ನು ಪತ್ರಕರ್ತರಿಗೆ ಹೇಳುತ್ತಿರುವುದು. ಇದು ನಿಜವೋ ಸುಳ್ಳೋ ಎಂದು ಕೇಳಲು ಮೋದಿಯಂತೂ ಬಿಡಿ ಕೈಗೇ ಸಿಗೋದಿಲ್ಲ. ಸಿಎಂ ಕುಮಾರಸ್ವಾಮಿ ಪತ್ರಕರ್ತರೊಂದಿಗೆ ಮಾತನಾಡೋದಿಲ್ಲ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್  ಕ್ಲಿಕ್ ಮಾಡಿ