ರಾಯಚೂರು (ಜೂ. 24): ಈಗಾಗಲೇ ನಿಗದಿಯಾಗಿರುವಂತೆ ಜೂ.26 ರಂದು ರಾಯಚೂರು ಹಾಗೂ ಜೂ.27ರಂದು ಬೀದರ್ ಜಿಲ್ಲೆಯಲ್ಲಿ ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯ ನಡೆಯಲಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ತಿಳಿಸಿದೆ.

ಮುಖ್ಯಮಂತ್ರಿಗಳು ಜೂ.25 ರಂದು ರಾತ್ರಿ ಬೆಂಗಳೂರಿನಿಂದ ರೈಲ್ವೆ ಮೂಲಕ ರಾಯಚೂರಿಗೆ ತೆರಳಲಿದ್ದಾರೆ. ಮರುದಿನ ರಾಯಚೂರಿನಿಂದ ಮಾನ್ವಿ ತಾಲೂಕಿನ ಕರೇಗುಡ್ಡ ಗ್ರಾಮದಲ್ಲಿ ಜನತಾ ದರ್ಶನ ನಡೆಸಲಿದ್ದಾರೆ.

ರಾತ್ರಿ ಕರಿಗುಡ್ಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಜೂ.27 ರಂದು ಹೆಲಿಕಾಪ್ಟರ್ ಮೂಲಕ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕು ಉಜಳಂಬ ಗ್ರಾಮಕ್ಕೆ ತೆರಳಲಿದ್ದಾರೆ.

ಬೆಳಗ್ಗೆ 10 ಗಂಟೆಯಿಂದ ಸಂಜೆ ಆರು ಗಂಟೆವರೆಗೆ ಜನತಾ ದರ್ಶನ ನಡೆಸಲಿದ್ದಾರೆ. ಸಂಜೆ 6.30 ರಿಂದ ರೈತರಿಗೆ ಮಾಹಿತಿ, ಸ್ಥಳೀಯ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಲಿದ್ದಾರೆ. ನಂತರ ಶಾಲಾ ಶಿಕ್ಷಕರು ಮತ್ತು ಮಕ್ಕಳೊಂದಿಗೆ ಭೋಜನ ಮಾಡಲಿದ್ದಾರೆ. ರಾತ್ರಿ ಉಜಿಳಾಂಬ ಶಾಲೆಯಲ್ಲಿ ವಾಸ್ತವ್ಯ ಮಾಡಲಿದ್ದಾರೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಗ್ರಾಮ ವಾಸ್ತವ್ಯ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕರೇಗುಡ್ಡ ಹಾಗೂ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಉಜಳಂಬದಲ್ಲಿ ಸಿದ್ಧತಾ ಕಾರ್ಯ ಭರದಿಂದ ಸಾಗಿದೆ. ರಸ್ತೆ ದುರಸ್ತಿ, ಚರಂಡಿ ನಿರ್ಮಾಣ, ವಿದ್ಯುತ್ ಸಂಪರ್ಕ, ಕುಡಿಯುವ ನೀರು ಸೇರಿ ಅಗತ್ಯಮೂಲಸೌಕರ್ಯ ಕಲ್ಪಿಸುವ ಕಾರ್ಯಗಳು ಕೊನೇ ಹಂತ ತಲುಪಿದೆ.

ಕರೇಗುಡ್ಡದಲ್ಲಿ ಮುಖ್ಯಮಂತ್ರಿ ಉಳಿದುಕೊಳ್ಳಲಿರುವ ಶಾಲೆಯ ಕೊಠಡಿಗಳ ದುರಸ್ತಿ, ಸುಣ್ಣ-ಬಣ್ಣ ಬಳಿಯುವ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಹೈಟೆಕ್ ಶೌಚಾಲಯ ನಿರ್ಮಾಣ, ನೀರಿನ ಟ್ಯಾಂಕ್ ಅಳವಡಿಕೆ ಕಾರ್ಯ ನಡೆಯುತ್ತಿದೆ.

ವೇದಿಕೆ ಕಾರ್ಯಕ್ರಮಕ್ಕಾಗಿ ಗ್ರಾಮದ ಹೊರವಲಯದಲ್ಲಿ 10 ಎಕರೆ ಜಮೀನು ಸಮತಟ್ಟು ಮಾಡಿದ್ದು, ಸಾರ್ವಜನಿಕರ ಅಹವಾಲು ಸ್ವೀಕರಿಸಲು ಪ್ರತ್ಯೇಕ ಕೌಂಟರ್ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ಮತ್ತು ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ಭಾನುವಾರ ಕರೇಗುಡ್ಡ ಗ್ರಾಮಕ್ಕೆ ತೆರಳಿ ಸಿದ್ಧತೆಗಳ ಕುರಿತು ಪರಿಶೀಲನೆ ನಡೆಸಿದ್ದಾರೆ.

ಹಬ್ಬದ ವಾತಾವರಣ: ಇನ್ನು ಬೀದರ್ ಜಿಲ್ಲೆಯ ಉಜಳಂಬದಲ್ಲಿ ಮುಖ್ಯಮಂತ್ರಿ ಆಗಮನದ ಹಿನ್ನೆಲೆಯಲ್ಲಿ ಹಬ್ಬದ ವಾತಾವರಣ ವಾತಾವರಣ ನಿರ್ಮಾಣವಾಗಿದೆ. ಕುಮಾರಸ್ವಾಮಿ ಸ್ವಾಗತಕ್ಕೆ ಈಗಾಗಲೇ ಜನತೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ.

ಎಲ್ಲೆಡೆ ರಸ್ತೆ, ಚರಂಡಿ, ವಿದ್ಯುತ್ ಕಂಬಗಳ ಅಳವಡಿಕೆ ಸೇರಿ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆಸಲಾಗುತ್ತಿದೆ. ಮುಖ್ಯಮಂತ್ರಿ ವಾಸ್ತವ್ಯ ಹೂಡಲಿರುವ ಸರ್ಕಾರಿ ಶಾಲೆ ಅಂಗಳದಲ್ಲಿ ಬೃಹತ್ ವೇದಿಕೆ
ನಿರ್ಮಿಸಲಾಗುತ್ತಿದ್ದು, ಜನತಾ ದರ್ಶನ ಕಾರ್ಯಕ್ರಮಕ್ಕೆ ಮಳೆಯಿಂದಾಗಿ ಯಾವುದೇ ಅಡ್ಡಿಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ.