ಹುಬ್ಬಳ್ಳಿ (ಜ. 06):  ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಆರಂಭಿಸುವ ಸಮ್ಮಿಶ್ರ ಸರ್ಕಾರದ ನಿಲುವನ್ನು ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲೇ ತರಾಟೆಗೆ ತೆಗೆದುಕೊಂಡಿದ್ದ ಸಾಹಿತಿ ಚಂದ್ರಶೇಖರ ಪಾಟೀಲರ ವಿರುದ್ಧ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಂದ್ರಶೇಖರ ಪಾಟೀಲ ಅವರು ತಮ್ಮ ವ್ಯಾಪ್ತಿ ಮೀರಿ ಮಾತನಾಡಬಾರದು. ಮೊದಲು ಅವರು ತಮ್ಮ ಮೊಮ್ಮಕ್ಕಳು ಯಾವ ಮಾಧ್ಯಮದ ಶಾಲೆಗೆ ಹೋಗುತ್ತಿದ್ದಾರೆ ಎಂದು ಜನರ ಎದುರಿಗೆ ಹೇಳಲಿ ಎಂದು ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಚಂಪಾ ಅವರ ವಿರುದ್ಧ ಕುಮಾರಸ್ವಾಮಿ ತೀವ್ರ ಹರಿಹಾಯ್ದರು. ನಾವು ಸಾಹಿತಿ ಚಂದ್ರಶೇಖರ ಪಾಟೀಲ ಅವರನ್ನು ಕೇಳಿ ಸಮ್ಮಿಶ್ರ ಸರ್ಕಾರ ರಚಿಸಿಲ್ಲ. ಮೈತ್ರಿಕೂಟ ಸರ್ಕಾರದ ಧರ್ಮದ ಬಗ್ಗೆ ಅವರಿಗೇನು ಗೊತ್ತು? ಅವರು ತಮ್ಮ ವ್ಯಾಪ್ತಿ ಮೀರಿ ಮಾತನಾಡಬಾರದು. ಹಿರಿಯರಾಗಿ ನನ್ನ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಆಡುವುದು ಸರಿಯಲ್ಲ. ನನಗೂ ಪದಬಳಕೆ ಮಾಡಲು ಬರುತ್ತದೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಸಮ್ಮೇಳನ ಒಂದು ಸಾಂಸ್ಕೃತಿಕ ವೇದಿಕೆ. ಅಲ್ಲಿ ಯಾರಿಗೂ ಮುಜುಗರ ಉಂಟುಮಾಡಬಾರದೆಂಬ ಕಾರಣಕ್ಕೆ ನಾನು ಜಾಗ್ರತೆಯಿಂದ ಮಾತನಾಡಿದ್ದೇನೆ. ರಾಜ್ಯದಲ್ಲಿ ಶಿಕ್ಷಣದ ಬಗ್ಗೆ ಮಾತನಾಡುವುದಾದರೆ ಎಲ್ಲ ಖಾಸಗಿ ಶಿಕ್ಷಣ ಸಂಸ್ಥೆ ಮುಚ್ಚಲು ನನ್ನ ಒಪ್ಪಿಗೆ ಇದೆ. ನಾನು ಸಾಹಿತ್ಯ ಸಮ್ಮೇಳನದಲ್ಲಿ ಹೇಳಿದ್ದು ಇದನ್ನೇ. ಇಷ್ಟೆಲ್ಲ ಭಾಷೆ ಬಗ್ಗೆ ಮಾತನಾಡುವ ಚಂಪಾ, ಮೊದಲು ತಮ್ಮ ಮೊಮ್ಮಕ್ಕಳು ಯಾವ ಮಧ್ಯಮದ ಶಾಲೆಗೆ ಹೋಗುತ್ತಿದ್ದಾರೆ ಎಂದು ಜನರ

ಚಂಪಾ ತಿರುಗೇಟು 

ನನ್ನ ಇಬ್ಬರೂ ಮಕ್ಕಳು ಹಾಗೂ ಮೊಮ್ಮಕ್ಕಳು ಕೂಡ ಕನ್ನಡ ಶಾಲೆಯಲ್ಲೇ ವ್ಯಾಸಂಗ ಮಾಡಿದ್ದಾರೆ. ಬೇಕಾದರೆ ಮುಖ್ಯಮಂತ್ರಿಗಳು ಬೇಹುಗಾರಿಕಾ ದಳದವರಿಗೆ ಹೇಳಿ ತನಿಖೆ ಮಾಡಿಸಲಿ ಎಂದು ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಅವರು ಸಿಎಂ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ.

ಚಂಪಾ ಅವರ ಮೊಮ್ಮಕ್ಕಳು ಯಾವ ಶಾಲೆಯಲ್ಲಿ ಓದುತ್ತಿದ್ದಾರೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹುಬ್ಬಳ್ಳಿಯಲ್ಲಿ ಮಾಧ್ಯಮಗಳೆದುರು ಪ್ರಶ್ನಿಸಿದ್ದರು. ಅದಕ್ಕೆ ಸಂಬಂಧಪಟ್ಟಂತೆ ಧಾರವಾಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡಿರುವ ಚಂಪಾ ಮಾಧ್ಯಮಗಳೊಂದಿಗೆ ಮಾತನಾಡಿ, ನನಗೆ ಇಬ್ಬರು ಮಕ್ಕಳು. ಪುತ್ರ ಹಾಗೂ ಪುತ್ರಿ ಇಬ್ಬರೂ ಧಾರವಾಡದ ಸರ್ಕಾರಿ ಶಾಲೆಯೊಂದರಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದಾರೆ. ಇನ್ನು ನನ್ನ ಪುತ್ರಿಯ ಮಕ್ಕಳು ಅಂದರೆ ನನ್ನ ಮೊಮ್ಮಕ್ಕಳು ಬೆಂಗಳೂರಿನ ಅನುದಾನಿತ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲೇ ಪ್ರಾಥಮಿಕ ಶಿಕ್ಷಣ ಪೂರೈಸಿದ್ದಾರೆ ಎಂದು ಸ್ಪಷ್ಟಪಡಿಸಿದರು.