ಬೆಂಗಳೂರು(ಸೆ.07): ರಾಜ್ಯ ಸರ್ಕಾರವೇನೋ ತಮಿಳುನಾಡಿಗೆ ನೀರು ಬಿಡಲು ನಿರ್ಧರಿಸಿದೆ. ಆದ್ರೆ ರಾಜ್ಯ ಸರ್ಕಾರ ಕರೆದಿದ್ದ ಸರ್ವ ಪಕ್ಷಗಳ ಸಭೆಯಲ್ಲಿ ಸರ್ಕಾರದ ನಡೆಗೆ ತೀವ್ರ ವಿರೋಧ ವ್ಯಕ್ತವಾಯ್ತು. ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರದಲ್ಲಿ ಪ್ರತಿಪಕ್ಷಗಳನ ನಡುವೆ ಒಮ್ಮತ ಮೂಡಿಲ್ಲ. ಇದರ ಒಂದು ವರದಿ ಇಲ್ಲಿದೆ.

ತಮಿಳುನಾಡಿಗೆ ನೀರು ಹರಿಸಲು ಸರ್ಕಾರದ ನಿರ್ಧಾರ: ರಾಜ್ಯ ಸರ್ಕಾರದ ನಡೆಗೆ ಪ್ರತಿಪಕ್ಷಗಳ ವಿರೋಧ

ತಮಿಳುನಾಡಿಗೆ ನೀರು ಬಿಡುವ ವಿಚಾರದಲ್ಲಿ ಸದನ ನಾಯಕರ ಸಭೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಾಯಕರ ನಡುವೆ ಒಮ್ಮತ ಮೂಡದೆ ಅಂತ್ಯಗೊಳ್ತು. ತಮಿಳುನಾಡಿಗೆ ನೀರು ಬಿಡುವುದಕ್ಕೆ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿದವು. ಸಭೆಯಲ್ಲಿ ನೀರು ಬಿಡುವ ಬಗ್ಗೆ ಮಾತಿನ ಚಕಮಕಿ ನಡೆಯಿತು. ರಾಜ್ಯ ಸರ್ಕಾರದ ನಡೆಗೆ ಭಾರೀ ಆಕ್ರೋಶ ವ್ಯಕ್ತಪಡಿಸಿದವು.

ಇನ್ನು ಜೆಡಿಎಸ್ ನಾಯಕರು ಸರ್ಕಾರದ ನಿರ್ಧಾರ ಖಂಡಿಸಿ ಸಭೆಯನ್ನ ಬಹಿಷ್ಕರಿಸಿ ಹೊರ ಬಂದ್ರು. ಮಂಡ್ಯದ ರೈತರ ಸಂಕಷ್ಟಕ್ಕೆ ಸ್ಪಂದಿಸಿ ಸಭೆಯನ್ನು ಬಹಿಷ್ಕರಿಸಿರುವುದಾಗಿ ಜೆಡಿಎಸ್ ವಿಧಾನಸಭೆ ಉಪ ನಾಯಕ ವೈ ಎಸ್. ವಿ. ದತ್ತ ಹೇಳಿದರು.

ಆದ್ರೆ, ಸಿಎಂ ಸಿದ್ದರಾಮಯ್ಯ ಮಾತ್ರ ನೀರು ಬಿಡುವುದನ್ನು ಸಮರ್ಥಿಸಿಕೊಂಡಿದ್ದಾರೆ. ಸಂವಿಧಾನ ಬದ್ದ ಸರ್ಕಾರವಾಗಿ ಸುಪ್ರೀಂ ಕೋರ್ಟ್​ ಆದೇಶ ಪಾಲನೆ ಮಾಡುವುದು ಅನಿವಾರ್ಯವಾಗಿದೆ. ಸುಪ್ರೀಂ ಕೋರ್ಟಿನ ಆದೇಶ ಪಾಲನೆ ಕಷ್ಟವಾಗುವುದರಿಂದ ಆದೇಶವನ್ನು ಪುನರ್ ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಲಾಗುವುದು ಎಂದು ಹೇಳಿದರು.

ಒಟ್ಟಿನಲ್ಲಿ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸುವುದನ್ನು ಸಮರ್ಥಿಸಿಕೊಂಡಿದೆ. ಪ್ರತಿಪಕ್ಷಗಳ ವಿರೋಧದ ನಡುವೆಯೂ ಸುಪ್ರೀಂಕೋರ್ಟ್​ ಆದೇಶ ಪಾಲನೆಗೆ ಮುಂದಾಗಿದೆ. ಆದ್ರೆ ಪ್ರತಿಪಕ್ಷಗಳು ಮುಂದೆ ಏನು ಮಾಡುತ್ತವೆ. ಸರ್ಕಾರ ಯಾವ ನಡೆ ಇಡುತ್ತದೆ ಎನ್ನುವುದೇ ಈಗ ಕುತೂಹಲ ಕೆರಳಿಸಿದೆ.