ಹೈದರಾಬಾದ್‌[ಆ.27]: ಆಂಧ್ರಪ್ರದೇಶದ ನೂತನ ರಾಜಧಾನಿಯಾಗಿ ತಲೆ ಎತ್ತುತ್ತಿರುವ ಅಮರಾವತಿ ಪ್ರವಾಹಪೀಡಿತ ಪ್ರದೇಶವಾಗಿದೆ ಎಂದು ಈಗಾಗಲೇ ಹೇಳಿರುವ ಜಗನ್‌ಮೋಹನ ರೆಡ್ಡಿ ನೇತೃತ್ವದ ರಾಜ್ಯ ಸರ್ಕಾರ, ಅಮರಾವತಿಯಿಂದ ರಾಜಧಾನಿ ಪಟ್ಟಕಸಿದು ಹೊಸದಾಗಿ 4 ರಾಜಧಾನಿಗಳನ್ನು ಘೋಷಿಸುವ ಚಿಂತನೆಯಲ್ಲಿ ತೊಡಗಿದೆ ಎಂದು ಹೇಳಲಾಗಿದೆ.

ಅಮರಾವತಿಯಲ್ಲಿ ರಾಜಧಾನಿ ನಿರ್ಮಾಣ ಯೋಜನೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಈಗಾಗಲೇ ಮುಖ್ಯಮಂತ್ರಿ ಜಗನ್‌ ಅವರು ಕೇಂದ್ರ ಸರ್ಕಾರಕ್ಕೆ ತಿಳಿಸಿದ್ದಾರೆ. ಅಲ್ಲದೆ ವಿಜಿಯನಗರಂ, ಕಾಕಿನಾಡ, ಗುಂಟೂರು ಹಾಗೂ ಕಡಪಾದಲ್ಲಿ ರಾಜಧಾನಿ ನಿರ್ಮಿಸುವ ಮೂಲಕ ಅಭಿವೃದ್ಧಿಯನ್ನು ವಿಕೇಂದ್ರೀಕರಣಗೊಳಿಸುವ ಚಿಂತನೆಯಲ್ಲಿದ್ದಾರೆ ಎಂದು ಆಂಧ್ರದ ಬಿಜೆಪಿ ಸಂಸದ ಟಿ.ಜಿ. ವೆಂಕಟೇಶ್‌ ತಿಳಿಸಿರುವುದು ಸಂಚಲನಕ್ಕೆ ಕಾರಣವಾಗಿದೆ.

2014ರಲ್ಲಿ ಆಂಧ್ರಪ್ರದೇಶ ವಿಭಜನೆಯಾದ ಬಳಿಕ ಹೈದರಾಬಾದ್‌ ಅನ್ನು ಆಂಧ್ರ- ತೆಲಂಗಾಣ ರಾಜ್ಯಗಳ ಜಂಟಿ ರಾಜಧಾನಿಯನ್ನಾಗಿ 10 ವರ್ಷಗಳ ಅವಧಿಗೆ ಘೋಷಣೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಹೊಸ ರಾಜಧಾನಿ ನಿರ್ಮಾಣ ಮಾಡಲು ಅಮರಾವತಿಯನ್ನು ಗುರುತಿಸಿ, ಹಲವು ಕೆಲಸಗಳನ್ನು ಹಿಂದಿನ ಸಿಎಂ ಚಂದ್ರಬಾಬು ನಾಯ್ಡು ಆರಂಭಿಸಿದ್ದರು. ಆದರೆ ಅದು ಪ್ರವಾಹಪೀಡಿತ ಪ್ರದೇಶದಲ್ಲಿ ಬರುತ್ತದೆ ಎಂದು ಜಗನ್‌ ಸರ್ಕಾರ ವಾದಿಸುವ ಮೂಲಕ ರಾಜಧಾನಿ ಸ್ಥಳಾಂತರಗೊಳಿಸುವ ಇಂಗಿತವನ್ನು ಈಗಾಗಲೇ ತೋಡಿಕೊಂಡಿದೆ.