ಶಿವಮೊಗ್ಗ [ಜೂ.27] :  ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜ್ಯದಲ್ಲಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಗರಂ ಆಗಿದ್ದಾರೆ. 

ಶಿವಮೊಗ್ಗದಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಭೀಕರ ಬರಗಾಲ ಪರಿಸ್ಥಿತಿ ಇದೆ.  ರೈತರ ಸಾಲ ಮನ್ನಾ ಆಗಿಲ್ಲ. ರಾಜ್ಯದಲ್ಲಿ ಯಾವುದೇ ಜಲಾಶಯ ಕೂಡ ತುಂಬಿಲ್ಲ. ಶೇ.5ರಷ್ಟು ಬಿತ್ತನೆ ಆಗಿಲ್ಲ ಇದರ ಬಗ್ಗೆ ಸಿಎಂ ಗಮನ ಹರಿಸುತ್ತಿಲ್ಲ. 

ರೈತರ 46 ಸಾವಿರ ಕೋಟಿ ರು. ಸಾಲಮನ್ನಾ ಮಾಡುತ್ತೇನೆಂದು ಹೇಳುತ್ತಿದ್ದ ಸಿಎಂ ಕುಮಾರಸ್ವಾಮಿ ಈಗ 16 ಸಾವಿರ ಕೋಟಿ ರು. ಅನ್ನುತ್ತಿದ್ದಾರೆ. ಅದು ಕೂಡ ರೈತರಿಗೆ ತಲುಪಿಲ್ಲ. ಸಹಕಾರಿ ಸಂಘ ಹಾಗೂ ರಾಷ್ಟ್ರೀಕೃತ ಬ್ಯಾಂಕ್ ಸಾಲಮನ್ನಾ ಆಗದೇ ಹಾಹಾಕಾರ ಎದ್ದಿದೆ. ಈ ಕಾರಣಕ್ಕಾಗಿಯೇ ಶಾಸಕ ಶಿವನಗೌಡ ಪಾದಯಾತ್ರೆ ಮೂಲಕ ಬಂದಾಗ ಅವರ ಸಮಸ್ಯೆ ಆಲಿಸದೇ ಶಾಸಕರನ್ನು ಗೂಂಡಾ, ರೌಡಿ ಎಂದು ಕರೆದಿದ್ದಾರೆ ಎಂದು ಮುಖ್ಯಮಂತ್ರಿ ವಿರುದ್ಧ ಬಿಎಸ್ ವೈ ಅಸಮಾಧಾನ ಹೊರಹಾಕಿದರು. 

ಮೋದಿಗೆ ಓಟ್ ಕೊಟ್ಟು ನನ್ನ ಬಳಿ ಏನು ಕೆಲಸ ಎನ್ನುವ ಮಾತು ಹೇಳಿ ಪ್ರಜಾತಂತ್ರ ವ್ಯವಸ್ಥೆಗೆ ಅಪಮಾನ ಮಾಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 25 ಸ್ಥಾನ ಗೆದ್ದಾಗಲೇ ಸಿಎಂ ರಾಜೀನಾಮೆ ನೀಡಬೇಕಿತ್ತು.   ಕಾಂಗ್ರೆಸ್ - ಜೆಡಿಎಸ್ ಮಧ್ಯೆ ಹೊಂದಾಣಿಕೆ ಇಲ್ಲದೇ   ಯಾವುದೇ ಅಭಿವೃದ್ಧಿ ಕೆಲಸವೂ ಆಗುತ್ತಿಲ್ಲ. ಬರಗಾಲಕ್ಕೆ ಸ್ಪಂದಿಸುತ್ತಿಲ್ಲ, ಯಾವ ಮಂತ್ರಿಯೂ ಜನರ ಸಮಸ್ಯೆ ನಿವಾರಿಸುವ ಪ್ರಯತ್ನ ಮಾಡುತ್ತಿಲ್ಲ ಎಂದರು.

ಇನ್ನು ಶರಾವತಿಯಿಂದ ಬೆಂಗಳೂರಿಗೆ ಕುಡಿಯುವ ನೀರನ್ನು ಸರಬರಾಜು ಮಾಡುವ ಯೋಜನೆ ಅವೈಜ್ಞಾನಿಕ. ರಾಮಸ್ವಾಮಿ ಆಯೋಗ  ವರದಿ ನೀಡಿದಂತೆ ಕೆರೆಗಳ ಒತ್ತುವರಿ, ರಾಜಕಾಲುವೆ ಒತ್ತುವರಿ ತೆರವು ಮಾಡಬೇಕು ಎಂದು ಬಿಜೆಪಿ ನಾಯಕ ಯಡಿಯೂರಪ್ಪ ಅಸಮಾಧಾನ ಹೊರಹಾಕಿದರು.