ಅಸಮಾಧಾನ ಹೊರಹಾಕಿದ ತಮ್ಮದೆ ಪಕ್ಷದವರಿಗೆ ಸಿಎಂ ಹೇಳಿದ್ದೇನು?

CM H D Kumaraswamy slams G T Devegowda and and C S Puttaraju
Highlights

ತಮ್ಮ ತಮ್ಮ ಖಾತೆಗಳ ಬಗ್ಗೆ ಅಸಮಾಧಾನ ಹೊರಹಾಕಿದ್ದ ಜಿ.ಟಿ.ದೇವೇಗೌಡ ಮತ್ತು ಸಿ.ಎಸ್.ಪುಟ್ಟರಾಜು ಅವರಿಗೆ ಸಿಎಂ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ. ಕೊಟ್ಟ ಖಾತೆಯನ್ನು ಮೊದಲು ಸಮರ್ಥವಾಗಿ ನಿಭಾಯಿಸಬೇಕು ಎಂಬ ಸಲಹೆಯನ್ನು ನೀಡಿದ್ದಾರೆ. ಹಾಗಾದರೆ ತಮ್ಮದೇ ಪಕ್ಷದ ಮುಖಂಡರ ಬಗ್ಗೆ ಕುಮಾರಸ್ವಾಮಿ ಏನು ಹೇಳಿದ್ರು.. ಮುಂದೆ ಓದಿ..
 

ಬೆಂಗಳೂರು [ಜೂನ್.9] :  ಕಾಂಗ್ರೆಸ್ ಅತೃಪ್ತ ಶಾಸಕರು ಒಂದೆಡೆ ಸಚಿವ ಸ್ಥಾನಕ್ಕಾಗಿ ಬಂಡಾಯದ ಬಾವುಟ ಹಾರಿಸಿದ್ದರೆ ಇನ್ನೊಂದು ಕಡೆ ಕೊಟ್ಟ ಸಚಿವ ಸ್ಥಾನಕ್ಕೂ ಅಪಸ್ವರ ಹೊರಹಾಕಿದ ಜೆಡಿಎಸ್ ಮುಖಂಡರಿಗೆ ಸಿಎಂ ಕುಮಾರಸ್ವಾಮಿ ಸರಿಯಾದ ತಿರುಗೇಟು ನೀಡಿದ್ದಾರೆ.  ಸಚಿವರಿಗೆ ತಿರುಗೇಟು ನೀಡುವುದರೊಂದಿಗೆ ಇನ್ನೊಂದು ಕಡೆ ಸಚಿವರ ವಿದ್ಯಾರ್ಹತೆ ಪ್ರಶ್ನೆ ಮಾಡುತ್ತಿದ್ದ ಸಾಮಾಜಿಕ ಜಾಲತಾಣಿಗರಿಗೂ ಟಾಂಗ್ ನೀಡಿದ್ದಾರೆ.

ಹೈಯರ್‌ ಎಜುಕೇಷನ್, ಸಣ್ಣ ನೀರಾವರಿಗಿಂತ ಖಾತೆ ಬೇಕಾ? ಎಂದು ಪ್ರಶ್ನೆ ಮಾಡಿ ಜಿ.ಟಿ.ದೇವೇಗೌಡ ಮತ್ತು ಸಿ.ಎಸ್.ಪುಟ್ಟರಾಜು ಅವರಿಗೆ ಪರೋಕ್ಷ ಟಾಂಗ್ ನೀಡಿದ ಎಚ್ ಡಿಕೆ ಯಾವ ಖಾತೆ ನೀಡಿದರೆ ಏನು? ಸಮರ್ಥವಾಗಿ ಕೆಲಸ ಮಾಡಬೇಕು ಎಂಬ ಸಲಹೆಯನ್ನು ನೀಡಿದ್ದಾರೆ.

ಕೇಳಿದ ಖಾತೆಯನ್ನು ಎಲ್ಲರಿಗೂ ಕೊಡಲಿಕ್ಕೆ ಸಾಧ್ಯವಿದೆಯೇ? ನಾನೇನು ಓದಿದ್ದೇನೆ.. ನಾನು ಮುಖ್ಯಮಂತ್ರಿಯಾಗಿಲ್ಲವೆ? ಹಣಕಾಸು ಖಾತೆಯನ್ನೇ ಅವರಿಗೆ ಕೊಡಲಾ? ಎಂದು ಮಾಧ್ಯಮದವರಿಗೆ ಕುಮಾರಸ್ವಾಮಿ ಮರುಪ್ರಶ್ನೆ ಮಾಡಿದರು.

ರಾಹುಲ್ ಗಾಂಧಿಗೆ ರಕ್ತದಲ್ಲಿ ಪತ್ರ ಬರೆದ ಲಿಂಗಾಯತ ಮುಖಂಡ!

ಇಂತಹ ಖಾತೆ ಬೇಕೆಂದು ಅಸಮಾಧಾನಗೊಂಡವರು ಕೇಳಬೇಕಲ್ಲವೇ? ಕೊಟ್ಟ ಖಾತೆಯನ್ನು ಸಮರ್ಥವಾಗಿ ನಿರ್ವಹಿಸಬೇಕು.  ಮೊದಲು ಮಂತ್ರಿ ಸ್ಥಾನ ಕೇಳುತ್ತಾರೆ, ಆನಂತರ ವಿಧಾನಸೌಧದಲ್ಲಿ ಮೂರನೇ ಮಹಡಿಯ ಕಚೇರಿ ಕೇಳುತ್ತಾರೆ ಎಂದು ಅಸಮಾಧಾನ ಹೊರಹಾಕಿದ್ರು.

ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಮತ್ತು ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ತಮ್ಮ-ತಮ್ಮ ಖಾತೆಗಳ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದರು. ಇದಾದ ಮೇಲೆ ಮಾಧ್ಯಮದವರು ಕುಮಾರಸ್ವಾಮಿ ಬಳೀ ಪ್ರತಿಕ್ರಿಯೆ ಕೇಳಿದ್ದರು.

loader