ನೋಟು ಅಮಾನ್ಯದ ನೆಪವೊಡ್ಡಿ ಸಂಪನ್ಮೂಲ ಕ್ರೋಢೀಕರಣಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಅಧಿಕಾರಿಗಳು ಎಲ್ಲ ಬಗೆಯ ತೆರಿಗೆಗಳನ್ನು ನಿಗದಿತ ಗುರಿಯಂತೆ ಸಂಗ್ರಹಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಾಕೀತು ಮಾಡಿದ್ದಾರೆ.
ಬೆಂಗಳೂರು (ಡಿ. 28):ನೋಟು ಅಮಾನ್ಯದ ನೆಪವೊಡ್ಡಿ ಸಂಪನ್ಮೂಲ ಕ್ರೋಢೀಕರಣಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಅಧಿಕಾರಿಗಳು ಎಲ್ಲ ಬಗೆಯ ತೆರಿಗೆಗಳನ್ನು ನಿಗದಿತ ಗುರಿಯಂತೆ ಸಂಗ್ರಹಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಾಕೀತು ಮಾಡಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗದಣದಲ್ಲಿ ಬುಧವಾರ ವಾಣಿಜ್ಯ ತೆರಿಗೆ ಇಲಾಖೆ, ಅಬಕಾರಿ ಇಲಾಖೆ, ನೋಂದಣಿ ಮತ್ತು ಮುದ್ರಾಂಕ ಇಲಾಖೆ ಹಾಗೂ ಸಾರಿಗೆ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಅಧಿಕಾರಿಗಳು ತೆರಿಗೆ ಸಂಗ್ರಹ ವಿಚಾರದಲ್ಲಿ ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ನೋಟು ಅಮಾನ್ಯ ಹಾಗೂ ಬರಗಾಲದ ನೆಪವೊಡ್ಡಿ ಸಂಪನ್ಮೂಲ ಸಂಗ್ರಹದಲ್ಲಿ ಹಿಂದೆ ಬೀಳಬಾರದು. ನಿಗದಿತ ಸಮಯಕ್ಕಿಂತ ಹೆಚ್ಚು ಅವಧಿ ಕೆಲಸ ಮಾಡಿ, ಆದಾಯ ಸಂಗ್ರಹಕ್ಕೆ ಶ್ರಮಿಸಬೇಕು ಎಂದು ಹೇಳಿದರು.
ವಿವಿಧ ತೆರಿಗೆ ಮೂಲಗಳಿಂದ ಪ್ರಸಕ್ತ ಹಣಕಾಸು ವರ್ಷದಲ್ಲಿ ೮೫ ಸಾವಿರ ಕೋಟಿ ರು. ತೆರಿಗೆ ಸಂಗ್ರಹದ ಗುರಿ ಹೊಂದಲಾಗಿದೆ. ಹೀಗಾಗಿ ಮಾಸಿಕ ೬,೫೦೦ ಕೋಟಿ ರು.ಗಳ ಸಂಗ್ರಹ ಮಾಡಲೇಬೇಕು. ನೋಟು ಅಮಾನ್ಯದಿಂದ ಈಗಾಗಲೇ ಕಳೆದ 50 ದಿನಗಳಲ್ಲಿ ಸುಮಾರು ಮೂರು ಸಾವಿರ ಕೋಟಿ ರು.ಗಳ ಆದಾಯ ಸಂಗ್ರಹ ಖೋತಾ ಆಗಿರುವುದು ಗಮನಕ್ಕೆ ಬಂದಿದೆ. ಆದರೆ ಅಧಿಕಾರಿಗಳು ಇದನ್ನೇ ನೆಪ ಮಾಡಿಕೊಂಡು ಕಚೇರಿಯಲ್ಲಿ ಕುಳಿತುಕೊಳ್ಳುವಂತಿಲ್ಲ. ಯಾವುದೇ ಸಬೂಬು ಹೇಳದೇ ಮುತುವರ್ಜಿ ವಹಿಸಿ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.
ನೋಟು ಅಮಾನ್ಯದಿಂದ ತೆರಿಗೆ ಸಂಗ್ರಹ ಪ್ರಮಾಣದಲ್ಲಿನ ವಿದ್ಯಮಾನಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ನೋಟು ಅಮಾನ್ಯದಿಂದ ಕಳೆದ ಎರಡು ತಿಂಗಳಿಂದ ವಾಣಿಜ್ಯ ತೆರಿಗೆ ಸಂಗ್ರಹದಲ್ಲಿ ಕುಸಿತ ಉಂಟಾಗಿದೆ ಎಂದು ವಾಣಿಜ್ಯ ತೆರಿಗೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ನೋಂದಣಿ ಮತ್ತು ಮುದ್ರಾಂಕ ಶುಲ್ಕ ಸಂಗ್ರಹದಲ್ಲೂ ಇಳಿಕೆ ಕಂಡು ಬಂದಿದೆ ಎಂದು ಅಧಿಕಾರಿಗಳು ಅಂಕಿ ಅಂಶಗಳನ್ನು ನೀಡಿದರು. ಸಾರಿಗೆ ಇಲಾಖೆ ಅಡಿಯಲ್ಲಿ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ತೆರಿಗೆ ಸಂಗ್ರಹ ಪ್ರಮಾಣ ಇಳಿಮುಖವಾಗಿದೆ. ನೋಟು ಅಮಾನ್ಯದ ಹಿನ್ನೆಲೆಯಲ್ಲಿ ಹೊಸ ವಾಹನಗಳು ಹಾಗೂ ಆಸ್ತಿ ನೋಂದಣಿ ಕಡಿಮೆಯಾಗಿರುವುದೇ ಇದಕ್ಕೆ ಕಾರಣ ಎಂದು ಅಧಿಕಾರಿಗಳು ತಿಳಿಸಿದರು.
ಎಲ್ಲ ಇಲಾಖೆಗಳ ಸ್ಥಿತಿ-ಗತಿ ಕುರಿತಂತೆ ಸುಮಾರು ನಾಲ್ಕು ತಾಸುಗಳ ಕಾಲ ಪರಿಶೀಲನೆ ನಡೆಸಿದ ಸಿಎಂ ಸಿದ್ದರಾಮಯ್ಯ, ಜನವರಿಯಲ್ಲಿ ತೆರಿಗೆ ಸಂಗ್ರಹ ಪ್ರಮಾಣದಲ್ಲಿ ಏರಿಕೆಯಾಗುವ ವಿಶ್ವಾಸವಿದೆ. ಆದ್ದರಿಂದ ಜನವರಿ ತಿಂಗಳಾಂತ್ಯದವರೆಗೆ ಪರಿಸ್ಥಿತಿ ಅವಲೋಕಿಸಿ ಮತ್ತೊಂದು ಸುತ್ತಿನ ಸಭೆ ನಡೆಸಲಾಗುವುದು ಎಂದು ಅಧಿಕಾರಿಗಳಿಗೆ ತಿಳಿಸಿದರು.
ವಾಣಿಜ್ಯ, ಅಬಕಾರಿ ಮತ್ತು ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ನಿಗದಿಪಡಿಸಿರುವ ಗುರಿ ಸಾಧನೆ ಆಗಲೇಬೇಕು. ಇಲ್ಲದಿದ್ದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಅಬಕಾರಿ ಇಲಾಖೆಗೆ ಸಂಬಂಧಿಸಿದಂತೆ ಕಳ್ಳಭಟ್ಟಿ ಹಾವಳಿಯನ್ನು ಸಂಪೂರ್ಣವಾಗಿ ನಿಯಂತ್ರಿಸಬೇಕು. ಮದ್ಯದ ಅಕ್ರಮ ಸಾಗಣೆಗೂ ಕಡಿವಾಣ ಹಾಕಬೇಕು ಎಂದು ಹೇಳಿದರು.
ನೋಟು ಅಮಾನ್ಯದ ಹಿನ್ನೆಲೆಯಲ್ಲಿ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಆಸ್ತಿ ನೋಂದಣಿ ಕಡಿಮೆ ಆಗಿರಬಹುದು. ಆದರೆ ಜನವರಿ, ಫೆಬ್ರವರಿ ಮತ್ತು ಮಾಚ್‌ರ್ ತಿಂಗಳಲ್ಲಿ ಯಥಾಸ್ಥಿತಿಗೆ ಬರಬಹುದು. ಈ ಸಂಬಂಧ ಕ್ರಿಯಾ ಯೋಜನೆ ಸಿದ್ಧ ಮಾಡಿಕೊಳ್ಳಿ ಎಂದು ನೋಂದಣಿ-ಮುದ್ರಾಂಕ ಇಲಾಖೆ ಅಧಿಕಾರಿಗಳಿಗೆ ಸಿಎಂ ನಿರ್ದೇಶನ ನೀಡಿದರಲ್ಲದೇ ಜನವರಿ ತಿಂಗಳ ಅಂತ್ಯದ ವೇಳೆಗೆ ಪ್ರಗತಿ ಪರಿಶೀಲನೆ ನಡೆಸಿದಾಗ ತೆರಿಗೆ ಸಂಗ್ರಹದಲ್ಲಿ ಪ್ರಗತಿ ಕಂಡು ಬರಬೇಕು. ಇಲ್ಲದಿದ್ದರೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ, ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿ ಐಎಸ್‌ಎನ್ ಪ್ರಸಾದ್ ಮತ್ತಿತರರು ಪಾಲ್ಗೊಂಡಿದ್ದರು.
