ಇಂದಿರಾ ಕ್ಯಾಂಟೀನ್ ಭವಿಷ್ಯ ಬಿಎಸ್‌ವೈ ಕೈಯಲ್ಲಿ..!
ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್‌ಗಳ ಅಳಿವು ಉಳಿವಿನ ಪ್ರಶ್ನೆ ಸಿಎಂ ಬಿ. ಎಸ್. ಯಡಿಯೂರಪ್ಪ ಅವರ ಕೈಯಲ್ಲಿದೆ. ರಾಜ್ಯ ಸರ್ಕಾರ ಪ್ರಸಕ್ತ ಬಜೆಟ್‌ನಲ್ಲಿ ಅನುದಾನ ನೀಡದ ಹಿನ್ನೆಲೆಯಲ್ಲಿ ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ಶೇ.50 ರಷ್ಟಾದರೂ ಅನುದಾನ ನೀಡುವಂತೆ ಬಿಬಿಎಂಪಿ ಸಲ್ಲಿಸಿದ್ದ ಪ್ರಸ್ತಾವನೆಗೆ ಹಣಕಾಸು ಇಲಾಖೆಯ ಸಂಪೂರ್ಣ ಒಪ್ಪಿಗೆ ದೊರಕಿಲ್ಲ.
ಬೆಂಗಳೂರು(ಸೆ.25): ಇಂದಿರಾ ಕ್ಯಾಂಟೀನ್ ಪಾಲಿಕೆಗೆ ಹೊರೆಯಾಗುವುದೋ ಅಥವಾ ಇಲ್ಲವೋ ಎಂಬುದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ತೀರ್ಮಾನದ ಮೇಲೆ ನಿಂತಿದೆ. ಏಕೆಂದರೆ, ರಾಜ್ಯ ಸರ್ಕಾರ ಪ್ರಸಕ್ತ ಬಜೆಟ್‌ನಲ್ಲಿ ಅನುದಾನ ನೀಡದ ಹಿನ್ನೆಲೆಯಲ್ಲಿ ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ಶೇ.50 ರಷ್ಟಾದರೂ ಅನುದಾನ ನೀಡುವಂತೆ ಬಿಬಿಎಂಪಿ ಸಲ್ಲಿಸಿದ್ದ ಪ್ರಸ್ತಾವನೆಗೆ ಹಣಕಾಸು ಇಲಾಖೆಯ ಸಂಪೂರ್ಣ ಒಪ್ಪಿಗೆ ದೊರಕಿಲ್ಲ.
ಇಲಾಖೆಯು ಕ್ಯಾಂಟೀನ್ ನಿರ್ವಹಣೆಗೆ ಶೇ.25ರಷ್ಟು ಹಣ ಮಾತ್ರ ನೀಡುವುದಾಗಿ ತಿಳಿಸಿದೆ. ಈ ಸಂಬಂಧ ಕಡತ ಪ್ರಸ್ತುತ ಸಿಎಂ ಅವಗಾಹನೆಗೆ ಬಂದಿದ್ದು, ಮುಖ್ಯಮಂತ್ರಿ ಯವರು ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ.
ಅಭಿವೃದ್ಧಿ ಹಣದಲ್ಲಿ ಇಂದಿರಾ ಕ್ಯಾಂಟೀನ್ ನಿರ್ವಹಣೆ
ಒಂದು ವೇಳೆ ಹಣಕಾಸು ಇಲಾಖೆಯ ನಿರ್ಧಾರಕ್ಕೆ ಮುಖ್ಯಮಂತ್ರಿಯವರು ಸಹಮತ ವ್ಯಕ್ತಪಡಿಸಿದರೆ ಆಗ ಇಂದಿರಾ ಕ್ಯಾಂಟೀನ್ ಪಾಲಿಕೆಗೆ ದೊಡ್ಡ ಹೊರೆಯಾಗಲಿದೆ. ಆಗ ಪಾಲಿಕೆ ತನ್ನ ವಾರ್ಷಿಕ ಆದಾಯದಲ್ಲಿ ಕನಿಷ್ಠ 100 ಕೋಟಿ ಕ್ಯಾಂಟೀನ್ ನಿರ್ವಹಣೆಗೆ ಮೀಸಲಿಡಬೇಕಾದ ಅಗತ್ಯಬೀಳಲಿದೆ.
ಮೂರು ಬಾರಿ ಪ್ರಸ್ತಾವನೆ ಸಲ್ಲಿಸಿದ್ರೂ ಪ್ರತಿಕ್ರಿಯೆ ಇಲ್ಲ:
2019-20ನೇ ಸಾಲಿಗೆ 210 ಕೋಟಿ ನೀಡುವಂತೆ ಬಿಬಿಎಂಪಿಯು ಸರ್ಕಾರಕ್ಕೆ ಈ ಹಿಂದೆ ಮೂರು ಬಾರಿ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಸರ್ಕಾರದಿಂದ ಪ್ರತಿಕ್ರಿಯೆ ಬಂದಿರಲಿಲ್ಲ. ಹೀಗಾಗಿ, ನಿರ್ವಹಣೆಯ ಒಟ್ಟಾರೆ ವೆಚ್ಚದಲ್ಲಿ ಶೇ.50ರಷ್ಟು ಹಣವನ್ನಾದರೂ ನೀಡುವಂತೆ ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದಕ್ಕೆ ಉತ್ತರಿಸಿರುವ ಹಣಕಾಸು ಇಲಾಖೆ ಯೋಜನೆಗೆ ಶೇ.25 ಹಣವನ್ನು ಮಾತ್ರ ನೀಡಬಹುದು ಎಂಬ ಅಭಿಪ್ರಾಯ ತಿಳಿಸಿದೆ. ಪ್ರಸ್ತತ ಈ ಸಂಬಂಧಿ ಕಡತ ಮುಖ್ಯಮಂತ್ರಿಯವರ ಒಪ್ಪಿಗೆಗೆ ಸಿಎಂ ಕಚೇರಿಗೆ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.