Asianet Suvarna News Asianet Suvarna News

ಸಿದ್ದರಾಮಯ್ಯ ಸರ್ಕಾರದ 5 ಯೋಜನೆ ತನಿಖೆಗೆ ಆದೇಶ

ಸಿದ್ದರಾಮಯ್ಯ ನೇತೃತ್ವದ ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿಯ ಪ್ರಮುಖ ಐದು ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ  ರಾಜ್ಯ ಸರ್ಕಾರ ತನಿಖೆಗೆ ಆದೇಶ ನೀಡಿದೆ. 

CM BS Yediyurappa Order To investigate 5 Sachems Of Siddaramaiah Govt
Author
Bengaluru, First Published Sep 9, 2019, 7:39 AM IST

ಬೆಂಗಳೂರು [ಸೆ.09]:  ಬರೋಬ್ಬರಿ 921 ಕೋಟಿ ರು. ವೆಚ್ಚ ಮಾಡಲಾಗಿರುವ ‘ಕೃಷಿ ಭಾಗ್ಯ’ ಯೋಜನೆ, 1067 ಕೋಟಿ ರು. ವೆಚ್ಚದ ಬಿಬಿಎಂಪಿ ವ್ಯಾಪ್ತಿಯ ತ್ಯಾಜ್ಯ ವಿಲೇವಾರಿ, 410 ಕೋಟಿ ರು. ವೆಚ್ಚದ ತ್ಯಾಜ್ಯ ಸಂಸ್ಕರಣಾ ಘಟಕಗಳ ಕಾರ್ಯ ಸ್ಥಗಿತ ಸೇರಿದಂತೆ ಸಿದ್ದರಾಮಯ್ಯ ನೇತೃತ್ವದ ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿಯ ಪ್ರಮುಖ ಐದು ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತನಿಖೆಗೆ ವಹಿಸಿದ್ದಾರೆ.

ಕೃಷಿ ಭಾಗ್ಯ ಯೋಜನೆಯಡಿ 2014-15ರಿಂದ 2017-18ರವರೆಗೆ ರಾಜ್ಯದ 131 ತಾಲೂಕುಗಳಲ್ಲಿ 2.15 ಲಕ್ಷ ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಲಾಗಿದೆ. ಮಳೆ ಅವಲಂಬಿತ ರೈತರು ತಮ್ಮ ಕೃಷಿ ಜಮೀನಿನಲ್ಲಿ ನೀರನ್ನು ಸಂಗ್ರಹಿಸಲು ಕೃಷಿ ಹೊಂಡಗಳ ನಿರ್ಮಾಣ, ಪಾಲಿಥೀನ್‌ ಹೊದಿಕೆ, ನೆರಳು ಪರದೆ, ಡೀಸೆಲ್‌ ಪಂಪುಗಳ ಅಳವಡಿಕೆ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ಒದಗಿಸಲು ಬರೋಬ್ಬರಿ 921.16 ಕೋಟಿ ರು. ವೆಚ್ಚ ಮಾಡಲಾಗಿದೆ ಎಂದು ಅಧಿಕಾರಿಗಳು ದಾಖಲೆ ನೀಡಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆದರೆ, ಈ ಮಾಹಿತಿ ಮೇಲ್ನೋಟಕ್ಕೆ ಸರಿ ಇಲ್ಲವೆಂದು ತೋರುತ್ತಿದೆ. ಏಕೆಂದರೆ ಅಧಿಕಾರಿಗಳು ಹೇಳಿರುವಷ್ಟುಕೃಷಿ ಹೊಂಡಗಳು ನಿರ್ಮಾಣವಾಗಿಲ್ಲ. ಜತೆಗೆ ಈ ಯೋಜನೆಗೆ ನೀಡಲಾದ ಅನುದಾನದಲ್ಲಿ ವ್ಯಾಪಕ ಅವ್ಯವಹಾರ ನಡೆದಿರುವ ಬಗ್ಗೆ ದೂರುಗಳು ಬಂದಿವೆ. ಹೀಗಾಗಿ ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಎರಡು ತಿಂಗಳೊಳಗೆ ವರದಿ ನೀಡಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್‌ ಭಾಸ್ಕರ್‌ ಅವರಿಗೆ ಸೂಚನೆ ನೀಡಿದ್ದಾರೆ.

2014-15ರಿಂದ 2017-18ರವರೆಗಿನ ನಾಲ್ಕು ವರ್ಷಗಳಲ್ಲಿ ನಿರ್ಮಾಣ ಮಾಡಲಾಗಿರುವ ಕೃಷಿ ಹೊಂಡಗಳು ಹಾಗೂ ಅವುಗಳಿಗೆ ಒದಗಿಸಿರುವ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಆಯಾ ಜಿಲ್ಲಾ ಕೃಷಿ ನಿರ್ದೇಶಕರುಗಳಿಂದ ಖುದ್ದು ಪರಿಶೀಲನೆ ಅಥವಾ ತಪಾಸಣಾ ವರದಿ ಪಡೆದು ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ.

ತ್ಯಾಜ್ಯ ವಿಲೇವಾರಿಯ 4 ಕಾರ್ಯಕ್ರಮ ತನಿಖೆಗೆ:

ಬಿಬಿಎಂಪಿ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ನಾಲ್ಕು ಕಾರ್ಯಕ್ರಮಗÜಳಲ್ಲಿ ನಡೆದಿದೆ ಎನ್ನಲಾದ ಹಗರಣಗಳ ಆರೋಪದ ಬಗ್ಗೆ ಕೂಡ ಮುಖ್ಯಮಂತ್ರಿ ಯಡಿಯೂರಪ್ಪ ತನಿಖೆಗೆ ಆದೇಶ ನೀಡಿದ್ದಾರೆ.

ಈ ಪೈಕಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಮರ್ಪಕ ತ್ಯಾಜ್ಯ ವಿಲೇವಾರಿಯ ಹೆಸರಲ್ಲಿ ವರ್ಷವೊಂದಕ್ಕೆ 1067 ಕೋಟಿ ರು. ವೆಚ್ಚ ಮಾಡಿರುವುದು, ಸುಮಾರು 410 ಕೋಟಿ ರು. ವೆಚ್ಚದಲ್ಲಿ ಏಳು ಕಡೆ ವೈಜ್ಞಾನಿಕ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ನಿರ್ಮಾಣ ಮಾಡಿದ್ದು, ಇವುಗಳಲ್ಲಿ ಬಹುತೇಕ ಘಟಕಗಳು ಕಾರ್ಯ ನಿರ್ವಹಿಸದೇ ಸ್ಥಗಿತಗೊಂಡಿರುವುದು, ತ್ಯಾಜ್ಯ ವಿಲೇವಾರಿ ವಾಹನಗಳ (ಮೆಕ್ಯಾನಿಕಲ್‌ ಸ್ವೀಪಿಂಗ್‌ ಮಷಿನ್‌ಗಳು ಮತ್ತು ಕಾಂಪ್ಯಾಕ್ಟರ್‌ಗಳು) ಖರೀದಿ ಮತ್ತು ಅವುಗಳ ನಿರ್ವಹಣೆ ಕಾರ್ಯಕ್ಕೆಂದು ನೂರಾರು ಕೋಟಿ ರು. ವೆಚ್ಚ ಮಾಡಿರುವುದು ಮತ್ತು ಬಾಗಲೂರು, ಮಿಟಗಾನಹಳ್ಳಿ ಮತ್ತು ಬೆಳ್ಳಳ್ಳಿ ಕ್ವಾರೆಗಳಿಗೆ ನೂರಾರು ಕೋಟಿ ರು. ವೆಚ್ಚ ಮಾಡಿ ಅಂತಾರಾಷ್ಟ್ರೀಯ ಗುಣಮಟ್ಟದ ಲೈನರ್‌ಗಳನ್ನು ಅಳವಡಿಕೆ ಮಾಡಿರುವುದರಲ್ಲಿ ಅಕ್ರಮ ನಡೆದಿರುವ ಬಗ್ಗೆ ವ್ಯಾಪಕ ಆರೋಪಗಳು ಮತ್ತು ದೂರುಗಳು ಬಂದಿವೆ. ಹಾಗಾಗಿ ಈ ನಾಲ್ಕೂ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಿ ಎರಡು ತಿಂಗಳೊಳಗೆ ದಾಖಲೆಗಳ ಸಹಿತ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿಗಳು ಮುಖ್ಯ ಕಾರ್ಯದರ್ಶಿಗೆ ಆದೇಶಿಸಿದ್ದಾರೆ.

Follow Us:
Download App:
  • android
  • ios