ಡಾ. ಅಂಬೇಡ್ಕರ್ ಕೊಟ್ಟ ಸಂವಿಧಾನ ಬದಲಿಸುವುದಿರಲಿ, ಅದನ್ನು ಮುಟ್ಟಿದರೂ ದಂಗೆಯಾಗುತ್ತದೆಂಬುದನ್ನು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಯಂತಹ ಸಂವಿಧಾನ ವಿರೋಧಿಗಳು ಅರಿಯಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದರು.

ದಾವಣಗೆರೆ (ಡಿ.27): ಡಾ. ಅಂಬೇಡ್ಕರ್ ಕೊಟ್ಟ ಸಂವಿಧಾನ ಬದಲಿಸುವುದಿರಲಿ, ಅದನ್ನು ಮುಟ್ಟಿದರೂ ದಂಗೆಯಾಗುತ್ತದೆಂಬುದನ್ನು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಯಂತಹ ಸಂವಿಧಾನ ವಿರೋಧಿಗಳು ಅರಿಯಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದರು.

ಹೊನ್ನಾಳಿಯಲ್ಲಿ ಮಂಗಳವಾರ ಸಾವಿರಾರು ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಸಿಎಂ, ಸಂವಿಧಾನ ಬದಲಿಸಲೆಂದೇ ತಾವು ಅಧಿಕಾರಕ್ಕೆ ಬಂದಿದ್ದಾಗಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಭಾಷಣದಲ್ಲಿ ಹೇಳಿದ್ದು, ಹೀಗೆ ಹೇಳುವಂತೆ ಪ್ರಧಾನಿ ನರೇಂದ್ರ ಮೋದಿ ಹೇಳಿಕೊಟ್ಟಿರಲೂಬಹುದು. ಯಾಕೆಂದರೆ ಬಿಜೆಪಿಯವರಿಗೆ ಸಂವಿಧಾನದ ಮೇಲೆ ನಂಬಿಕೆಯೇ ಇಲ್ಲ. ಒಂದು ವೇಳೆ ಸಂವಿಧಾನ ಬದಲಾಯಿಸಿದರೆ ಹಲವರು ಅವಕಾಶ ವಂಚಿತರಾಗುತ್ತಾರೆ ಎಂದು ತಿಳಿಸಿದರು.

ಅನಂತಕುಮಾರ ಹೆಗಡೆ ಗ್ರಾಪಂ ಸದಸ್ಯನಾಗಲೂ ನಾಲಾಯಕ್. ಅಂಬೇಡ್ಕರ್ ಸಂವಿಧಾನದಲ್ಲಿ ಬಿಜೆಪಿಯವರಿಗೆ ಗೌರವವಿಲ್ಲ, ಸಾಮಾಜಿಕ ನ್ಯಾಯ, ಸಮಾನತೆ, ಭ್ರಾತೃತ್ವ, ಸಹೋದರತ್ವ, ಸಮಬಾಳ್ವೆ, ಸ್ವಾತಂತ್ರದಲ್ಲಿ ಬಿಜೆಪಿಗೆ ನಂಬಿಕೆ ಇಲ್ಲ. ಸಂವಿಧಾನ ಬದಲಿಸಲೆಂದೇ ಅಧಿಕಾರಕ್ಕೆ ಬಂದಿದ್ದೇವೆಂಬ ಹೆಗಡೆ ಯಂಥವರಿಗೆ ಏನು ಮಾಡಬೇಕು ಎಂದು ಪ್ರಶ್ನಿಸಿದರು.