ಚನ್ನಪಟ್ಟಣ :  ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸ್ವಕ್ಷೇತ್ರದಲ್ಲಿ ಜೆಡಿಎಸ್‌ ಒಳಜಗಳ ಬೀದಿಗೆ ಬಂದಿದೆ. ಎರಡು ಬಣಗಳ ನಡುವಿನ ಕಿತ್ತಾಟಕ್ಕೆ ತಾಲೂಕು ಜೆಡಿಎಸ್‌ ಕಚೇರಿಯ ಕುರ್ಚಿ, ಮೇಜುಗಳು ಪುಡಿ ಪುಡಿಯಾಗಿದ್ದು, ಘರ್ಷಣೆ ವೇಳೆ ಕೆಲ ಮುಖಂಡರಿಗೆ ಗಾಯಗಳಾಗಿವೆ.

ಬುಧವಾರ ಸುದ್ದಿವಾಹಿನಿಯೊಂದರಲ್ಲಿ ಬಿತ್ತರಗೊಂಡಿದ್ದ ಸುದ್ದಿಗೆ ಸಂಬಂಧಿಸಿ ತಾಲೂಕು ಜೆಡಿಎಸ್‌ ಅಧ್ಯಕ್ಷ ಎಚ್‌.ಸಿ.ಜಯಮುತ್ತು ಅವರು ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ಆಯೋಜಿಸಿದ್ದರು. ನಂತರ ತಾಲೂಕು ಜೆಡಿಎಸ್‌ ಕಚೇರಿಯಲ್ಲಿ ಪಕ್ಷದ ಕೆಲ ಮುಖಂಡರು ಟಿಎಪಿಸಿಎಂಎಸ್‌ ಚುನಾವಣೆ ಸಂಬಂಧ ಮತ್ತೊಂದು ಸುದ್ದಿಗೋಷ್ಠಿ ಕರೆದಿದ್ದರು. ಈ ಸುದ್ದಿಗೋಷ್ಠಿಗೆ ತಾಲೂಕು ಅಧ್ಯಕ್ಷ ಜಯಮುತ್ತುಗೆ ಆಹ್ವಾನ ಇರಲಿಲ್ಲ ಎಂದು ಕೆಲ ಕಾರ್ಯಕರ್ತರು ಆಕ್ಷೇಪ ಎತ್ತಿದರು.

ಇದೇ ವಿಚಾರವಾಗಿ ಜಯಮುತ್ತು ಬೆಂಬಲಿಗರು ಮತ್ತು ಜೆಡಿಎಸ್‌ನ ಮತ್ತೊಂದು ಗುಂಪಿನ ನಡುವೆ ಪಕ್ಷದ ಕಚೇರಿಯಲ್ಲಿ ಮಾತಿನ ಚಕಮಕಿ ನಡೆಯಿತು. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಪರಿಣಾಮ ಕುಪಿತಗೊಂಡ ಜಯಮುತ್ತು ಬೆಂಬಲಿಗರು ಇದಕ್ಕೆಲ್ಲ ಬಮೂಲ್‌ ನಿರ್ದೇಶಕ ಎಸ್‌.ಲಿಂಗೇಶ್‌ ಕುಮಾರ್‌ ಅವರೇ ಕಾರಣ ಎಂದು ಆರೋಪಿಸಿ ಹಲ್ಲೆಗೆ ಮುಂದಾದರು. ಈ ವೇಳೆ ಉಭಯ ಗುಂಪಿನ ಮುಖಂಡರು ಪರಸ್ಪರ ಕೈಕೈ ಮಿಲಾಯಿಸಿದರು.

ಒಂದು ಹಂತದಲ್ಲಿ ಕಾರ್ಯಕರ್ತರ ಆಕ್ರೋಶಕ್ಕೆ ಜೆಡಿಎಸ್‌ ಕಚೇರಿಯಲ್ಲಿ ಇರಿಸಲಾಗಿದ್ದ ಕುರ್ಚಿ, ಮೇಜುಗಳು ಪುಡಿ ಪುಡಿಯಾದವು. ಘಟನೆಯಿಂದಾಗಿ ಕೆಲಕಾಲ ಜೆಡಿಎಸ್‌ ಕಚೇರಿ ರಣಾಂಗಣವಾಗಿ ಮಾರ್ಪಾಡುಗೊಂಡಿತು.

ಹಾರಾಡಿದ ಕುರ್ಚಿಗಳು: 

ಕಚೇರಿಯಲ್ಲಿದ್ದ ಕುರ್ಚಿಗಳು ಉದ್ರಿಕ್ತ ಕಾರ್ಯಕರ್ತರ ಕಿತ್ತಾಟಕ್ಕೆ ಆಯುಧಗಳಾಗಿ ಪರಿಣಮಿಸಿದವು. ಕಚೇರಿಯ ತುಂಬ ಕುರ್ಚಿಗಳು ಹಾರಾಡಿ ಕಚೇರಿಯೊಳಗಿದ್ದವರು ಕುರ್ಚಿಗಳ ಹೊಡೆತದಿಂದ ತಪ್ಪಿಸಿಕೊಳ್ಳಲು ಹರಸಾಹಸ ಪಡುವಂತಾಯಿತು. ಕೆಲ ಮುಖಂಡರು ಉದ್ರಿಕ್ತ ಕಾರ್ಯಕರ್ತರನ್ನು ಶಮನಗೊಳಿಸಲು ಮುಂದಾದರಾದರೂ ಸುಮ್ಮನಾಗದ ಕಾರ್ಯಕರ್ತರು ತಮ್ಮ ದುಂಡಾವರ್ತನೆ ಮುಂದುವರಿಸಿದರು.

ಈ ವೇಳೆ ಮಧ್ಯಪ್ರವೇಶಿಸಲು ಬಂದ ಮುಖಂಡರಾದ ಗೋವಿಂದಹಳ್ಳಿ ನಾಗರಾಜು, ಕುಕ್ಕೂರು ದೊಡ್ಡಿ ಜಯರಾಂ, ರೇಖಾ ಉಮಾಶಂಕರ್‌, ರಾಂಪುರ ರಾಜಣ್ಣ ಸೇರಿ ಕೆಲ ಮುಖಂಡರಿಗೆ ಸಣ್ಣ ಪುಟ್ಟಗಾಯಗಳಾದವು.

ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಉದ್ರಿಕ್ತ ಕಾರ್ಯಕರ್ತರನ್ನು ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಕಚೇರಿಯಲ್ಲಿದ್ದವರನ್ನು ಪೊಲೀಸ್‌ ರಕ್ಷಣೆಯಲ್ಲಿ ಹೊರ ಕರೆತರಲಾಯಿತು.

ಜೆಡಿಎಸ್‌ ತಾಲೂಕು ಅಧ್ಯಕ್ಷರು ಪಕ್ಷ ಸಂಘಟಿಸುವ ಕೆಲಸ ಮಾಡಬೇಕು, ಹೀಗೆ ಪಕ್ಷದ ಕಚೇರಿ ಧ್ವಂಸಮಾಡುವ ಕೆಲಸ ಮಾಡಬಾರದು. ಘಟನೆಗೆ ಕಾರಣವಾಗಿರುವ ಜಯಮುತ್ತು ವಿರುದ್ಧ ಕ್ರಮ ಕೈಗೊಳ್ಳುವಂತೆ ಪಕ್ಷದ ವರಿಷ್ಠರಿಗೆ ದೂರು ಸಲ್ಲಿಸಲಾಗುವುದು ಎಂದು ಲಿಂಗೇಶ್‌ಕುಮಾರ್‌ ತಿಳಿಸಿದ್ದಾರೆ.

ಸೋಮವಾರ ನಡೆದ ಅನಿತಾ ಕುಮಾರಸ್ವಾಮಿ ಕಾರ್ಯಕ್ರಮಕ್ಕೆ ತಾಲೂಕು ಜೆಡಿಎಸ್‌ ಅಧ್ಯಕ್ಷ ಜಯಮುತ್ತು ಆಹ್ವಾನಿಸಿಲ್ಲ ಎಂಬ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ಸಂಬಂಧ ಜಯಮುತ್ತು ಬೆಂಬಲಿಗರು ಅನಿತಾ ಕುಮಾರಸ್ವಾಮಿ ವಿರುದ್ಧವೇ ಅಸಮಾಧಾನ ಹೊರಹಾಕಿದ್ದರು.