Asianet Suvarna News Asianet Suvarna News

ಡಿಕೆಶಿ - ಎಂ.ಬಿ.ಪಾಟೀಲ್ ನಡುವೆ ತೀವ್ರ ಜಟಾಪಟಿ : ಕಾರಣವೇನು?

ಕಾಂಗ್ರೆಸ್ ಪ್ರಭಾವಿ ಮುಖಂಡರಿಬ್ಬರ ನಡುವೆ ತೀವ್ರ ಜಟಾ ಪಟಿ ನಡೆಯುತ್ತಿದೆ. ಪರಸ್ಪರ ಇಬ್ಬರೂ ಕೂಡ ವಾರ್ನಿಂಗ್ ರವಾನಿಸಿದ್ದಾರೆ. 

Clashes Between Congress Leader DK Shivakumar MB Patil
Author
Bengaluru, First Published Aug 17, 2019, 7:53 AM IST

ಬೆಂಗಳೂರು [ಆ.17]: ಕಾಂಗ್ರೆಸ್‌ ಪಕ್ಷದ ಪ್ರಭಾವಿ ನಾಯಕರಾದ ಡಿ.ಕೆ. ಶಿವಕುಮಾರ್‌ ಹಾಗೂ ಎಂ.ಬಿ. ಪಾಟೀಲ್‌ ಅವರ ನಡುವೆ ಇದೀಗ ಬಹಿರಂಗವಾಗಿ ಮಾತಿನ ಚಕಮಕಿ ನಡೆಯುತ್ತಿರುವುದರ ಹಿಂದೆ ಭವಿಷ್ಯದಲ್ಲಿ ಪಕ್ಷದ ಚುಕ್ಕಾಣಿ ಹಿಡಿಯಲು ಈ ಇಬ್ಬರು ನಾಯಕರ ನಡುವೆ ಇರುವ ಪೈಪೋಟಿಯೇ ಕಾರಣ ಎನ್ನಲಾಗುತ್ತಿದೆ.

ಪ್ರಭಾವಿ ಸಮುದಾಯಗಳಿಗೆ ಸೇರಿದ ಈ ಇಬ್ಬರು ನಾಯಕರ ಹೆಸರು ಈ ಹಿಂದೆಯೂ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಕೇಳಿ ಬಂದಿತ್ತು. ಕುತೂಹಲಕಾರಿ ಸಂಗತಿಯೆಂದರೆ, ತಾನಾಗೆ ಬಂದಿದ್ದ ಈ ಅವಕಾಶವನ್ನು ಈ ಇಬ್ಬರೂ ನಾಯಕರು ಕಾಲ ಪಕ್ವವಾಗಿಲ್ಲ ಎಂಬ ಕಾರಣಕ್ಕೆ ನಿರಾಕರಿಸಿದ್ದರು. ಇದರ ಬದಲಾಗಿ ಸಚಿವ ಸ್ಥಾನವನ್ನೇ ಬಯಸಿದ್ದರು. ಆದರೆ, ಇದೀಗ ಪಕ್ಷ ಅಧಿಕಾರ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಹತ್ವ ಬಂದಿದೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರು ತಮ್ಮ ಹುದ್ದೆಯಿಂದ ಕೆಳಗಿಳಿಯುವುದಾಗಿ ಖುದ್ದು ಹೇಳಿದ್ದರೂ ಕಾಂಗ್ರೆಸ್‌ ಹೈಕಮಾಂಡ್‌ ಸದ್ಯಕ್ಕೆ ದಿನೇಶ್‌ ಗುಂಡೂರಾವ್‌ ಅವರನ್ನೇ ಮುಂದುವರೆಸಿದೆ. ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಹೊಸಬರ ನೇಮಕ ಮಾಡುವ ಯಾವುದೇ ಪ್ರಕ್ರಿಯೆ ಇನ್ನೂ ಆರಂಭವಾಗದೆ ಇದ್ದರೂ ನಿಕಟ ಭವಿಷ್ಯದಲ್ಲಿ ಕೆಪಿಸಿಸಿ ಅಧ್ಯಕ್ಷ ಗಾದಿಗೆ ಹೊಸಬರ ಪ್ರವೇಶ ಆಗುವ ಸಾಧ್ಯತೆಯಿದೆ. ಸಹಜವಾಗಿಯೇ ಈ ಹುದ್ದೆಗೆ ಪ್ರಮುಖ ಸಮುದಾಯಗಳಿಗೆ ಸೇರಿದ ಡಿ.ಕೆ. ಶಿವಕುಮಾರ್‌ (ಒಕ್ಕಲಿಗ) ಹಾಗೂ ಎಂ.ಬಿ. ಪಾಟೀಲ್‌ (ಲಿಂಗಾಯತ) ನಡುವೆ ಪೈಪೋಟಿಯಿದೆ.

ಹೈಕಮಾಂಡ್‌ನಲ್ಲಿ ತಾವು ಹೊಂದಿರುವ ಸಂಪರ್ಕಗಳ ಮೂಲಕವೇ ಶಿವಕುಮಾರ್‌ ಈ ಹುದ್ದೆಗೆ ಪ್ರಯತ್ನಿಸಬೇಕು. ಆದರೆ, ಎಂ.ಬಿ.ಪಾಟೀಲ್‌ ಅವರಿಗೆ ಸಿದ್ದರಾಮಯ್ಯ ತಂಡದ ಬೆಂಬಲ ರಾಜ್ಯ ಮಟ್ಟದಲ್ಲಿ ದೊರೆಯುತ್ತದೆ. ಹಾಗೂ ಖುದ್ದು ಎಂ.ಬಿ.ಪಾಟೀಲ್‌ ಅವರಿಗೆ ಹೈಕಮಾಂಡ್‌ನಲ್ಲೂ ಉತ್ತಮ ಸಂಪರ್ಕಗಳಿವೆ.

ಈ ಪೈಪೋಟಿ ಒಳಗಿಂದೊಳಗೆ ಯಾವ ಮಟ್ಟದಲ್ಲಿ ತೀವ್ರ ಗೊಂಡಿದೆ ಎಂದರೆ ಉಭಯ ನಾಯಕರು ಆಗಾಗ ಬಹಿರಂಗವಾಗಿ ಅಸಮಾಧಾನ ತೋಡಿಕೊಳ್ಳತೊಡಗಿದ್ದಾರೆ. ಇಷ್ಟಕ್ಕೂ ಇಂತಹದೊಂದು ಅಸಮಾಧಾನ ನಾಯಕರ ನಡುವೆ ಮೊದಲು ಹುಟ್ಟಿದ್ದು ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ.

ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರವನ್ನು ಪ್ರಸ್ತಾಪಿಸಿ ಲಿಂಗಾಯತ ನಾಯಕನಾಗಿ ರಾಜ್ಯಾದ್ಯಂತ ತಮ್ಮ ಪ್ರಭಾವ ಬೆಳೆಸಿಕೊಳ್ಳಲು ಎಂ.ಬಿ. ಪಾಟೀಲ್‌ ಯತ್ನಿಸಿದ್ದರು. ಈಗಲೂ ಅವರು ಲಿಂಗಾಯತ ಪ್ರತ್ಯೇಕ ಧರ್ಮದ ಪರವೇ ನಿಂತಿದ್ದು, ತನ್ಮೂಲಕ ಲಿಂಗಾಯತ ಸಮುದಾಯದ ನಾಯಕ ತಾವು ಎಂದು ಬಿಂಬಿಸಿಕೊಳ್ಳುವ ಸರ್ವ ಪ್ರಯತ್ನದಲ್ಲಿದ್ದಾರೆ.

ಆದರೆ, ಲಿಂಗಾಯತ ಧರ್ಮದ ವಿಚಾರದಲ್ಲಿ ಡಿ.ಕೆ. ಶಿವಕುಮಾರ್‌ ಅವರು ಮಧ್ಯಪ್ರವೇಶಿಸಿದ್ದು ಮತ್ತು ಲಿಂಗಾಯತ ಧರ್ಮ ವಿಭಜನೆ ತಪ್ಪು, ಇದಕ್ಕಾಗಿ ಕ್ಷಮೆ ಕೋರುವೆ ಎಂದು ಉಪ ಚುನಾವಣೆಗಳ ಸಂದರ್ಭಗಳಲ್ಲಿ ಹೇಳಿಕೆ ನೀಡಿದ್ದು ಎಂ.ಬಿ. ಪಾಟೀಲ್‌ ಅವರನ್ನು ಕೆರಳಿಸಿತ್ತು. ಈ ಬಗ್ಗೆ ಉಭಯ ನಾಯಕರ ನಡುವೆ ಸಾಕಷ್ಟುವಾಗ್ವಾದ ನಡೆದಿತ್ತು. ಒಂದು ಹಂತದಲ್ಲಂತೂ ಲಿಂಗಾಯತ ವಿಚಾರದಲ್ಲಿ ಮಾತನಾಡಲು ಡಿ.ಕೆ. ಶಿವಕುಮಾರ್‌ ಯಾರು ಎಂದು ಎಂ.ಬಿ. ಪಾಟೀಲ್‌ ಪ್ರಶ್ನಿಸಿದ್ದರು. ಇದಕ್ಕೆ ಜನರ ಧಾರ್ಮಿಕ ವಿಚಾರಗಳಲ್ಲಿ ಪಕ್ಷ ತಲೆ ಹಾಕಬಾರದು ಎಂದು ಡಿ.ಕೆ. ಶಿವಕುಮಾರ್‌ ಸಮರ್ಥಿಸಿಕೊಂಡಿದ್ದರು.

ಲಿಂಗಾಯತ ವಿಚಾರವಾಗಿ ಆರಂಭಗೊಂಡ ಈ ನಾಯಕರ ನಡುವಿನ ಮಾತಿನ ಜಟಾಪಟಿ ಅನಂತರವೂ ಮುಂದುವರೆದಿತ್ತು. ಅದು ಇದೀಗ ಫೋನ್‌ ಟ್ಯಾಪಿಂಗ್‌ ವಿಚಾರದಲ್ಲಿ ಹೊರಬಿದ್ದಿದೆ.

Follow Us:
Download App:
  • android
  • ios