ಬೆಂಗಳೂರು :  ದೋಸ್ತಿ ಸರ್ಕಾರದ ನಡುವೆ ಮಾತಿನ ಚಕಮಕಿ ತೀವ್ರಗೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಹಾಗೂ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಅವರು ಪರಸ್ಪರ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದು, ಈ ವೇಳೆ ಉಭಯ ಪಕ್ಷಗಳ ನಾಯಕರಿಗೂ ಸಂಯಮ ಕಾಯ್ದುಕೊಳ್ಳುವಂತೆ ತಾಕೀತು ಮಾಡಲು ತೀರ್ಮಾನಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ವಿಧಾನಸಭೆ ಉಪ ಚುನಾವಣೆ ಪ್ರಚಾರ ನಡೆಯುತ್ತಿರುವ ಈ ಹಂತದಲ್ಲೇ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಪ್ರಮುಖ ನಾಯಕರು ಪರಸ್ಪರ ವಾಗ್ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ದೇವೇಗೌಡ ಹಾಗೂ ವೇಣುಗೋಪಾಲ್‌ ಅವರು ದೂರವಾಣಿಯಲ್ಲಿ ಚರ್ಚೆ ನಡೆಸಿದರು ಎಂದು ಮೂಲಗಳು ಹೇಳಿವೆ.

ಈ ಮಾತುಕತೆ ವೇಳೆ, ಮೈತ್ರಿ ಸರ್ಕಾರಕ್ಕೆ ಧಕ್ಕೆ ತರುವಂತಹ ಹೇಳಿಕೆಗಳು ಉಭಯ ಪಕ್ಷಗಳ ಪ್ರಮುಖ ನಾಯಕರಿಂದಲೇ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಇಂತಹ ಹೇಳಿಕೆಗಳಿಗೆ ಕಡಿವಾಣ ಹಾಕುವಂತೆ ಕಾಂಗ್ರೆಸ್‌ ನಾಯಕರಿಗೆ ವೇಣುಗೋಪಾಲ್‌ ಮತ್ತು ಜೆಡಿಎಸ್‌ ನಾಯಕರಿಗೆ ದೇವೇಗೌಡ ಅವರು ತಾಕೀತು ಮಾಡುವಂತೆ ತೀರ್ಮಾನಿಸಿದರು ಎನ್ನಲಾಗಿದೆ.

ಅದರಂತೆ ವೇಣುಗೋಪಾಲ್‌ ಅವರು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹಾಗೂ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮೈತ್ರಿ ವಿರುದ್ಧ ಪಕ್ಷದ ಯಾರೂ ಹೇಳಿಕೆ ನೀಡದಂತೆ ಸೂಚನೆ ನೀಡಲು ಮನವಿ ಮಾಡಿದರು ಎಂದು ಮೂಲಗಳು ಹೇಳಿವೆ.