ಸಿಎಂ ನನ್ನನ್ನು ಕಡೆಗಣಿಸಿಲ್ಲ | ಕಾರ್ಯದೊತ್ತಡ ಇರುವ ಕಾರಣ ಕೆಲವರನ್ನು ಕರೆದು ಮಾತನಾಡಿಸಲು ಆಗಿಲ್ಲ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಟು ಟೀಕಾಕಾರ ಎಂದೇ ಬಿಂಬಿತರಾಗಿದ್ದ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಸಿ.ಕೆ. ಜಾಫರ್ ಷರೀಫ್ ಇದೀಗ ತಮ್ಮ ನಿಲುವಿನಿಂದ ’ಯೂ ಟರ್ನ್’ ತೆಗೆದುಕೊಂಡಿದ್ದು, ಮುಖ್ಯಮಂತ್ರಿಯವರ ಸಮರ್ಥನೆಗೆ ಇಳಿಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಪಕ್ಷದಲ್ಲಿ ಹಿರಿಯರನ್ನು ಕಡೆಗಣಿಸುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ‘ಕಾರ್ಯದೊತ್ತಡ ಇರುವ ಕಾರಣ ಕೆಲವರನ್ನು ಕರೆದು ಅವರು ಮಾತನಾಡಲು ಆಗಿ ರಲಿಕ್ಕಿಲ್ಲ, ಅಷ್ಟೇ’ ಎಂದು ಹೇಳಿದ್ದಾರೆ.

ಇಷ್ಟು ಮಾತ್ರವಲ್ಲದೆ, ‘ಸಿದ್ದರಾಮಯ್ಯ ಆಪರೇಷನ್ ಕಮಲಕ್ಕೆ ಕುಮ್ಮಕ್ಕು ನೀಡಿದ್ದರು’ ಎಂಬ ಟೀಕೆ ಮಾಡಿದ ಜೆಡಿಎಸ್‌ನ ಕುಮಾರಸ್ವಾಮಿ ಅವರ ಆರೋಪಕ್ಕೆ ಮಾರುತ್ತರ ನೀಡಿದ್ದು, ‘ಅದೊಂದು ನಿರಾಧಾರ ಹಾಗೂ ರಾಜಕೀಯ ಪ್ರೇರಿತ ಆರೋಪ. ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ’ ಎಂದು ಸಿಎಂ ಸಮರ್ಥನೆಗೆ ಇಳಿದರು.

ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರೇ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡರು. ಸಿದ್ದರಾಮಯ್ಯ ಸಿಎಂ ಆದ ನಂತರ ಕೆಲಸದ ಒತ್ತಡದಲ್ಲಿ ಕೆಲವರನ್ನು ಮಾತನಾಡಿಸಲು ಆಗಿರಲಿಲ್ಲ. ಅದನ್ನೇ ಕಡೆಗಣಿಸಿದ್ದಾರೆನ್ನುವುದು ಸರಿಯಲ್ಲ ಎಂದು ಸಮರ್ಥಿಸಿಕೊಂಡರು.

ಇನ್ನು ಕುಮಾರಸ್ವಾಮಿ ಅವರ ಆರೋಪಕ್ಕೆ ಸಂಬಂಧಿಸಿದಂತೆ, ಕುಮಾರಸ್ವಾಮಿ ಅವರು ಚುನಾವಣೆ ಹತ್ತಿರ ಬರುತ್ತಿದೆ ಎಂಬ ಕಾರಣಕ್ಕೆ ಇಂತಹ ರಾಜಕೀಯ ಪ್ರೇರಿತ ಆರೋಪ ಮಾಡಿದ್ದಾರೆ ಅಷ್ಟೆ. ಇದರಲ್ಲಿ ಯಾವುದೇ

ಹುರುಳಿಲ್ಲ ಎಂದರು.