ಸಿಮಿ ಸಂಘಟನೆಯ ಅಹಮದಾಬಾದ್‌ ಮೂಲದ ಆಲಂ ಜಬ್‌ ಅಫ್ರಿದಿ ಎಂಬಾತನನ್ನು ಎನ್‌ಐಎ ಅಧಿಕಾರಿಗಳು 2016ರ ಜವನರಿ 2ರಂದು ಬೆಂಗಳೂರಿನಲ್ಲಿ ಬಂಧಿಸಿದ್ದರು.
ಬೆಂಗಳೂರು: ರಾಜಧಾನಿಯನ್ನು ಬೆಚ್ಚಿ ಬೀಳಿಸಿದ್ದ ಚರ್ಚ್'ಸ್ಟ್ರೀಟ್ ಬಾಂಬ್ ಸ್ಫೋಟ ಘಟನೆಗೆ ಬುಧವಾರ (ಡಿ.28) ಎರಡು ವರ್ಷವಾಗಲಿದೆ. ಇಲ್ಲಿನ ಕೋಕನಟ್ ಗ್ರೂವ್ ರೆಸ್ಟೊರೆಂಟ್ ಬಳಿ 2014ರ ಡಿ.28ರ ರಾತ್ರಿ 8.30ರ ಸುಮಾರಿಗೆ ಬಾಂಬ್ ಸ್ಫೋಟ ಸಂಭವಿಸಿತ್ತು. ಸ್ಫೋಟದಲ್ಲಿ ಚೆನ್ನೈ ಮೂಲದ ಭವಾನಿ ದೇವಿ (38) ಎಂಬುವವರು ಮೃತಪಟ್ಟಿದ್ದರು. ಅಲ್ಲದೇ ಇತರ ಮೂವರು ಗಾಯಗೊಂಡಿದ್ದರು. ಭವಾನಿ ಅವರು ಕ್ರಿಸ್ಮಸ್ ಆಚರಣೆ ಹಿನ್ನೆಲೆಯಲ್ಲಿ ಕುಟುಂಬ ಸಮೇತ ಘಟನೆ ಸಂಭವಿಸುವ ನಾಲ್ಕು ದಿನಗಳ ಹಿಂದೆ ನಗರಕ್ಕೆ ಬಂದಿದ್ದರು. ಸ್ಫೋಟದಲ್ಲಿ ತಲೆಗೆ ಗಂಭೀರ ಗಾಯಗಳಾಗಿ ಖಾಸಗಿ ಆಸ್ಪತ್ರೆಯಲ್ಲಿ ಅಸುನೀಗಿದ್ದರು.
ಘಟನೆ ಸಂಭವಿಸಿದ ಆರಂಭದಲ್ಲಿ ಬೆಂಗಳೂರು ಪೊಲೀಸರು ಸ್ಫೋಟ ಪ್ರಕರಣದ ತನಿಖೆ ಆರಂಭಿಸಿದ್ದರು. ಬಳಿಕ ಗೃಹ ವ್ಯವಹಾರಗಳ ಸಚಿವಾಲಯದ ಸೂಚನೆ ಮೇರೆಗೆ ಎನ್ಐಎ ಹೈದರಾಬಾದ್ ವಿಭಾಗಕ್ಕೆ ಪ್ರಕರಣದ ತನಿಖೆ ವರ್ಗಾಯಿಸಲಾಗಿತ್ತು. ತನಿಖೆ ಚುರುಕುಗೊಳಿಸಿದ್ದ ಎನ್ಐಎ ಅಧಿಕಾರಿಗಳು, ಸ್ಟೂಡೆಂಟ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ (ಸಿಮಿ) ಸಂಘಟನೆಯ ಅಹಮದಾಬಾದ್ ಮೂಲದ ಆಲಂ ಜಬ್ ಅಫ್ರಿದಿ ಎಂಬಾತನನ್ನು 2016ರ ಜವನರಿ 2ರಂದು ಬೆಂಗಳೂರಿನಲ್ಲಿ ಬಂಧಿಸಿದ್ದರು.
ವೃತ್ತಿಯಲ್ಲಿ ಎಸಿ ಮೆಕ್ಯಾನಿಕ್ ಆಗಿದ್ದ ಆರೋಪಿಯು, ಮೂರು ವರ್ಷಗಳಿಂದ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಸಮೀಪ ದೊಡ್ಡನಾಗಮಂಗಲದಲ್ಲಿ ನೆಲೆಸಿದ್ದ. ವಿಚಾರಣೆ ವೇಳೆ ಸ್ಫೋಟ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾಗಿ ತಪ್ಪೊಪ್ಪಿಕೊಂಡಿದ್ದ. ಅಲ್ಲದೇ 2008ರಲ್ಲಿ ನಡೆದ ಅಹಮದಾಬಾದ್ ಸ್ಫೋಟದಲ್ಲಿ ಈತನ ಪಾತ್ರ ಇರುವುದನ್ನು ಎನ್'ಐಎ ಅಧಿಕಾರಿಗಳು ಪತ್ತೆಹಚ್ಚಿದ್ದರು.
(epaper.kannadaprabha.in)
