ಲಂಡನ್(ಆ.24): ವಿದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮೇಲೆ ತಮ್ಮ ವಾಗ್ದಾಳಿಯನ್ನು ಮುಂದುವರೆಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಉಗ್ರವಾದ, ಅಪನಗದೀಕರಣ, ಜಿಎಸ್ ಟಿ, ಸಾಮೂಹಿಕ ಹತ್ಯೆಗಳ ಬಳಿಕ ಇದೀಗ ಡೋಕ್ಲಾಮ್ ವಿವಾದವನ್ನು ಕೆದಕಿದ್ದಾರೆ.

ಲಂಡನ್‌ ಇಂಟರ್‌ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್‌ ಸೋಶಿಯಲ್ ಸೈನ್ಸ್‌ ನಲ್ಲಿ ಭಾಷಣ ಮಾಡಿದ ರಾಹುಲ್, ಡೋಕ್ಲಾಮ್‌ ನಲ್ಲಿ ಚೀನಿ ಸೈನಿಕರು ಇನ್ನೂ ಬೀಡು ಬಿಟ್ಟಿದ್ದು, ಇದು ಪ್ರಧಾನಿ ಮೋದಿ ಸರ್ಕಾರದ ವಿಫಲ ವಿದೇಶಾಂಗ ನೀತಿಯ ಫಲ ಎಂದು ಆರೋಪಿಸಿದ್ದಾರೆ. 

ಕೇಂದ್ರ ಸರ್ಕಾರದ ಅಧಿಕಾರ ವಿಕೇಂದ್ರೀಕರಣ, ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಹೇಳಿಕೆ ನೀಡಿರುವ ರಾಹುಲ್, ಸರ್ಕಾರಿ ಸ್ವಾಯತ್ತ ಸಂಸ್ಥೆಗಳಲ್ಲಿ ಆರ್‌ಎಸ್‌ಎಸ್ ಹಸ್ತಕ್ಷೇಪ ಮಾಡುತ್ತಿದೆ ಎಂದು ಗಂಭೀರ ಆರೋಪ ಕೂಡ ಮಾಡಿದ್ದಾರೆ. ಡೋಕ್ಲಾಮ್ ವಿವಾದ ಕುರಿತು ತಮಗೆ ಪೂರ್ಣ ಅರಿವಿರದಿದ್ದರೂ, ಅಲ್ಲಿ ಇನ್ನೂ ಚೀನಿ ಪಡೆಗಳು ಇರುವುದು ಸತ್ಯ ಎಂದು ರಾಹುಲ್ ಹೇಳಿದ್ದಾರೆ.

ಚೀನಾ ಜೊತೆ ಭಾರತ ಸಮತೋಲಿತ ಸಂಬಂಧ ಸಾಧಿಸಬೇಕಿದ್ದು, ಚೀನಾ ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರ ಎಂಬುದನ್ನು ನಾವು ಮರೆಯಬಾರದು ಎಂದು ರಾಹುಲ್ ಸಂವಾದದಲ್ಲಿ ಹೇಳಿದ್ದಾರೆ. ಇದೇ ವೇಳೆ ಪಾಕಿಸ್ತಾನ ವಿಷಯ ಪ್ರಸ್ತಾಪಿಸಿರುವ ರಾಹುಲ್, ಪಾಕಿಸ್ತಾನದಲ್ಲಿ ಸ್ಥಿರ ಸರ್ಕಾರ ರಚನೆಯಾಗುವವರೆಗೂ ಶಾಂತಿ ಮಾತುಕತೆಗಾಗಿ ನಾವು ಕಾಯಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.