ಬೀಜಿಂಗ್‌(ಫೆ.21): ಕಳೆದ ವರ್ಷವಷ್ಟೇ ಕೃತಕ ಬುದ್ಧಿಮತ್ತೆಯನ್ನು ಬಳಸಿ ಜಗತ್ತಿನ ಮೊದಲ ರೋಬೊಟ್‌ ಟೀವಿ ನ್ಯೂಸ್‌ ಆ್ಯಂಕರ್‌ ಒಬ್ಬನನ್ನು ಹುಟ್ಟುಹಾಕಿದ್ದ ಚೀನಾ ಇದೀಗ ಮೊದಲ ಮಹಿಳಾ ರೋಬೊಟ್‌ ನ್ಯೂಸ್‌ ಆ್ಯಂಕರ್‌ಳನ್ನು (ಸುದ್ದಿವಾಚಕಿ) ಸೃಷ್ಟಿಸಿದೆ. 

ಚೀನಾದ ಪ್ರಸಿದ್ಧ ಕ್ಸಿನ್ಹುವಾ ನ್ಯೂಸ್‌ ಏಜೆನ್ಸಿಯು ಕ್ಸಿನ್‌ ಕ್ಸಿಯಾಮೆಂಗ್‌ ಹೆಸರಿನ ಈ ಆ್ಯಂಕರ್‌ಳನ್ನು ಸೃಷ್ಟಿಸಿದ್ದು, ಮಾರ್ಚ್ ತಿಂಗಳಲ್ಲಿ ಇದು ನ್ಯೂಸ್‌ ಓದಲು ಆರಂಭಿಸಲಿದೆ. ಕೃತಕ ಬುದ್ಧಿಮತ್ತೆಯನ್ನು ಬಳಸಿ ಪತ್ರಿಕೋದ್ಯಮ ಹಾಗೂ ಸುದ್ದಿವಾಹಿನಿಗಳ ಕ್ಷೇತ್ರದಲ್ಲಿ ಚೀನಾ ಹಲವಾರು ವರ್ಷಗಳಿಂದ ಪ್ರಯೋಗಗಳನ್ನು ಮಾಡುತ್ತಿದೆ. 

ಇದಪ್ಪಾ ಸಂಶೋಧನೆ,,, ಟಿವಿ ಚಾನ್‌ಗಳಿಗೆ ಆ್ಯಂಕರ್‌ಗಳೇ ಬೇಕಾಗಿಲ್ಲ!

ಕ್ಸಿನುವಾ ನ್ಯೂಸ್‌ ಏಜೆನ್ಸಿಯಲ್ಲಿ ರೋಬೊಟ್‌ಗಳು ಈಗಾಗಲೇ 3400 ವರದಿಗಳನ್ನು ಬರೆದಿವೆ. ಈಗಲೂ ಈ ನ್ಯೂಸ್‌ ಏಜೆನ್ಸಿಯಲ್ಲಿ ಹಲವಾರು ರೋಬೊಟ್‌ಗಳು ಪತ್ರಕರ್ತರಾಗಿ ಕೆಲಸ ಮಾಡುತ್ತಿವೆ. ಅದರ ಜೊತೆಗೆ ಸುದ್ದಿವಾಹಿನಿಯಲ್ಲಿ ಕೃತಕ ಆ್ಯಂಕರ್‌ಗಳನ್ನು ಸೃಷ್ಟಿಸುವ ಯತ್ನದಲ್ಲೂ ಕ್ಸಿನ್ಹುವಾ ಏಜೆನ್ಸಿ ಯಶಸ್ವಿಯಾಗಿದ್ದು, ಕಳೆದ ವರ್ಷ ಪುರುಷ ಆ್ಯಂಕರ್‌ ಹಾಗೂ ಈ ವರ್ಷ ಮಹಿಳಾ ಆ್ಯಂಕರ್‌ಗಳನ್ನು ಸೃಷ್ಟಿಸಿದೆ.

ಕೃತಕ ಬುದ್ಧಿಮತ್ತೆಯ ಸಂಶೋಧನೆಯಲ್ಲಿ ಅಮೆರಿಕ ಹಾಗೂ ಜಪಾನನ್ನೂ ಹಿಂದಿಕ್ಕಿ ಚೀನಾ ಮುಂದೆ ಸಾಗಿದೆ.