ಲಾಂಗ್ ಮಾರ್ಚ್-5 ವೈ2 ರಾಕೆಟ್ 25 ಟನ್'ಗಳಷ್ಟು ಭಾರವನ್ನು ಹೊತ್ತೊಯ್ಯಬಲ್ಲುದು. ಚೀನಾದ ಅತೀ ತೂಕದ 7,500 ಕಿಲೋ ಭಾರದ ಶಿಜಿಯಾನ್-18 ಎಂಬ ಉಪಗ್ರಹವನ್ನು ಇದೇ ರಾಕೆಟ್ ಹೊತ್ತೊಯ್ಯಲಿದೆ. ಈಗ ಈ ರಾಕೆಟ್'ನ ಪರೀಕ್ಷಾರ್ಥ ಉಡಾವಣೆ ವಿಫಲಗೊಂಡಿರುವ ಹಿನ್ನೆಲೆಯಲ್ಲಿ ಶಿಜಿಯಾನ್'ನ ಯೋಜನೆಯನ್ನ ಚೀನಾ ಮುಂದೂಡುವ ಸಾಧ್ಯತೆ ಇದೆ.

ಬೀಜಿಂಗ್(ಜುಲೈ 02): ಭಾರೀ ಭಾರದ ವಸ್ತುಗಳನ್ನು ಹೊತ್ತೊಯ್ಯಲೆಂದು ಚೀನಾ ನಿರ್ಮಿಸಿದ "ಲಾಂಗ್ ಮಾರ್ಚ್-5 ವೈ2" ರಾಕೆಟ್'ನ ಉಡಾವಣೆ ಪ್ರಯತ್ನ ಇಂದು ವಿಫಲವಾಗಿದೆ. ಸ್ಥಳೀಯ ಕಾಲಮಾನ 7:23ರ ಸಮಯದಲ್ಲಿ ಹೈನಾನ್ ಪ್ರಾಂತ್ಯದಲ್ಲಿರುವ ವೆಂಚಾಂಗ್ ಸ್ಪೇಸ್ ಲಾಂಚ್ ಸೆಂಟರ್'ನಿಂದ ರಾಕೆಟ್ ಉಡಾವಣೆ ಮಾಡಲಾಯಿತು. ಆದರೆ, ಮಾರ್ಗಮಧ್ಯೆ ತಾಂತ್ರಿಕ ದೋಷ ಕಾಣಿಸಿಕೊಂಡಿತು ಎಂದು ಚೀನಾದ ಕ್ಸಿನ್'ಹುಆ ಸುದ್ದಿ ಸಂಸ್ಥೆಯು ಹೇಳಿದೆ.

ಆದರೆ, ಈ ಲಾಂಗ್ ಮಾರ್ಚ್-5 ರಾಕೆಟ್'ನ ಪರೀಕ್ಷಾರ್ಥ ಉಡಾವಣೆ ನಡೆದದ್ದು ಇದು ಎರಡನೇ ಬಾರಿ. ಮೊದಲನೇ ಪರೀಕ್ಷೆಯಲ್ಲಿ ಸಫಲವಾಗಿದ್ದ ರಾಕೆಟ್ ಇದೀಗ ಎರಡನೇ ಪರೀಕ್ಷೆಯಲ್ಲಿ ವಿಫಲವಾಗಿದೆ.

ಲಾಂಗ್ ಮಾರ್ಚ್-5 ವೈ2 ರಾಕೆಟ್ 25 ಟನ್'ಗಳಷ್ಟು ಭಾರವನ್ನು ಹೊತ್ತೊಯ್ಯಬಲ್ಲುದು. ಚೀನಾದ ಅತೀ ತೂಕದ 7,500 ಕಿಲೋ ಭಾರದ ಶಿಜಿಯಾನ್-18 ಎಂಬ ಉಪಗ್ರಹವನ್ನು ಇದೇ ರಾಕೆಟ್ ಹೊತ್ತೊಯ್ಯಲಿದೆ. ಈಗ ಈ ರಾಕೆಟ್'ನ ಪರೀಕ್ಷಾರ್ಥ ಉಡಾವಣೆ ವಿಫಲಗೊಂಡಿರುವ ಹಿನ್ನೆಲೆಯಲ್ಲಿ ಶಿಜಿಯಾನ್'ನ ಯೋಜನೆಯನ್ನ ಚೀನಾ ಮುಂದೂಡುವ ಸಾಧ್ಯತೆ ಇದೆ.

ಇದೇ ರಾಕೆಟ್'ನಲ್ಲಿ ಚೀನಾ ದೇಶವು ಚಂದ್ರನಲ್ಲಿಗೆ ಚಾಂಗ್-5 ಎಂಬ ಉಪಗ್ರಹವೊಂದನ್ನು ಕಳುಹಿಸುವ ಯೋಜನೆಯೂ ಇದೆ. ಅದಕ್ಕೂ ಮುನ್ನ ಲಾಂಗ್ ಮಾರ್ಚ್-5 ರಾಕೆಟ್'ನ ತಾಂತ್ರಿಕ ದೋಷಗಳನ್ನು ಸರಿಪಡಿಸಿ ಮತ್ತೊಮ್ಮೆ ಪರೀಕ್ಷೆ ನಡೆಸುವ ಸಾಧ್ಯತೆ ಇದೆ.

ಭಾರತದ ಸಾಮರ್ಥ್ಯವೆಷ್ಟು?
ತಿಂಗಳ ಹಿಂದಷ್ಟೇ ಭಾರತದ ಜಿಎಸ್'ಎಲ್'ವಿ ಮಾರ್ಕ್-3 ರಾಕೆಟ್ ಮೂಲಕ ಜಿಸ್ಯಾಟ್-19 ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಈ ಸೆಟಿಲೈಟ್'ನ ತೂಕ 3,136 ಕಿಲೋ, ಅಂದರೆ ಸುಮಾರು 3 ಟನ್. ನಾಲ್ಕು ಟನ್'ಗಿಂತಲೂ ಹೆಚ್ಚು ತೂಕ ಹೊರಬಲ್ಲ ರಾಕೆಟನ್ನು ಭಾರತ ಲಾಂಚ್ ಮಾಡಿದ್ದು ಇದೇ ಮೊದಲು. ಆದರೆ, ಚೀನಾ ದೇಶ ಈ ವಿಚಾರದಲ್ಲಿ ತುಸು ಮುಂದಿದೆ.