ಚೀನಾ ಮತ್ತು ಭಾರತ ಪ್ರಬಲ ಅರ್ಥ ವ್ಯವಸ್ಥೆ ಹೊಂದಿರುವ ದೇಶಗಳು. ಜಿಡಿಪಿಯಲ್ಲಿ ಚೀನಾ ಭಾರತಕ್ಕಿಂತ ಮುಂದಿದೆ. ಆದರೆ, ಏಷ್ಯಾ ರಾಷ್ಟ್ರಗಳ ಅರ್ಥ ವ್ಯವಸ್ಥೆಯಲ್ಲಿ ಚೀನಾಕ್ಕೆ ಭಾರತ ಪ್ರಬಲ ಪೈಪೋಟಿ ನೀಡುತ್ತಿದೆ. ತಂತ್ರಗಾರಿಕೆಗೆ ಹೆಸರಾದ ಚೀನಾ ಅಮೇರಿಕಾಗೆ ಸೆಡ್ಡು ಹೊಡೆದು ವಿಶ್ವದ ಪ್ರಬಲ ರಾಷ್ಟ್ರ ಎನಿಸಿಕೊಳ್ಳುವ ಮಹತ್ವಾಕಾಂಕ್ಷೆ ಹೊಂದಿದೆ. ಈ ನಿಟ್ಟಿನಲ್ಲಿ ಮೊದಲಿಗೆ ತನ್ನ ನೆರೆಹೊರೆಯ ದೇಶಗಳ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದೆ.

ಬೆಂಗಳೂರು(ಆ.13): ಜಗತ್ತಿನ ಎಲ್ಲ ರಾಷ್ಟ್ರಗಳನ್ನು ತನ್ನ ಹಿಡಿತದಲ್ಲಿ ಇರಿಸಿಕೊಳ್ಳುವ ಮಹತ್ವಾಕಾಂಕ್ಷೆ ಹೊಂದಿರುವ ಚೀನಾ, ತಂತ್ರಗಾರಿಕೆಯಿಂದ ತನ್ನ ಹಿತಾಸಕ್ತಿ ಸಾಧಿಸಲು ಹೊರಟಿದೆ. ಡೊಕ್ಲಾಮ್ ಬಿಕ್ಕಟ್ಟು ಕೂಡ ಚೀನಾ ಹಿತಾಸಕ್ತಿಯ ಒಂದು ಭಾಗ ಅಷ್ಟೇ. ಒಂದು ವೇಳೆ ಭಾರತ-ಚೀನಾ ನಡುವೆ ಯುದ್ಧವಾದರೆ ಎರಡೂ ದೇಶಗಳ ಹೂಡಿಕೆ ಮತ್ತು ವ್ಯಾಪಾರಕ್ಕೆ ಭಾರಿ ಹೊಡೆತ ಬೀಳಲಿದೆ ಎಂದು ಸ್ಯಾನ್‌ಫ್ರಾನ್ಸಿಸ್‌ಕೋನ ಭಾರತದ ಮಾಜಿ ಕಾನ್ಸುಲ್ ಜನರಲ್ ಎನ್. ಪಾರ್ಥಸಾರಥಿ ಅಭಿಪ್ರಾಯಪಟ್ಟರು.

ಫೋರಂ ಫಾರ್ ಇಂಟೆಗ್ರೇಟೆಡ್ ನ್ಯಾಶಿನಲ್ ಸೆಕ್ಯೂರಿಟಿ (ಎಫ್‌ಐಎನ್‌ಎಸ್) ಕರ್ನಾಟಕ ಚಾಪ್ಟರ್ ಶನಿವಾರ ಮಿಥಿಕ್ ಸೊಸೈಟಿಯಲ್ಲಿ ಹಮ್ಮಿಕೊಂಡಿದ್ದ ‘ ಡೊಕ್ಲಾಮ್ ಪ್ರದೇಶದ ಮೇಲೆ ಇಂಡೋ-ಚೀನಾ ನಿಲುವು- ತಂತ್ರಗಾರಿಕೆಯ ದೃಷ್ಠಿಕೊನಗಳು’ ಕುರಿತ ವಿಚಾರ ಕಮ್ಮಟದಲ್ಲಿ ‘ಆರ್ಥಿಕ ದೃಷ್ಟಿಕೋನದ ತಂತ್ರಗಾರಿಕೆ’ ಕುರಿತು ಅವರು ಮಾತನಾಡಿದರು.

ಚೀನಾ ಮತ್ತು ಭಾರತ ಪ್ರಬಲ ಅರ್ಥ ವ್ಯವಸ್ಥೆ ಹೊಂದಿರುವ ದೇಶಗಳು. ಜಿಡಿಪಿಯಲ್ಲಿ ಚೀನಾ ಭಾರತಕ್ಕಿಂತ ಮುಂದಿದೆ. ಆದರೆ, ಏಷ್ಯಾ ರಾಷ್ಟ್ರಗಳ ಅರ್ಥ ವ್ಯವಸ್ಥೆಯಲ್ಲಿ ಚೀನಾಕ್ಕೆ ಭಾರತ ಪ್ರಬಲ ಪೈಪೋಟಿ ನೀಡುತ್ತಿದೆ. ತಂತ್ರಗಾರಿಕೆಗೆ ಹೆಸರಾದ ಚೀನಾ ಅಮೇರಿಕಾಗೆ ಸೆಡ್ಡು ಹೊಡೆದು ವಿಶ್ವದ ಪ್ರಬಲ ರಾಷ್ಟ್ರ ಎನಿಸಿಕೊಳ್ಳುವ ಮಹತ್ವಾಕಾಂಕ್ಷೆ ಹೊಂದಿದೆ. ಈ ನಿಟ್ಟಿನಲ್ಲಿ ಮೊದಲಿಗೆ ತನ್ನ ನೆರೆಹೊರೆಯ ದೇಶಗಳ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದೆ. ರಸ್ತೆಯ ನೆಪದಲ್ಲಿ (ಒನ್ ಬೆಲ್ಟ್ ಒನ್ ರೋಡ್) ಡೊಕ್ಲಾಮ್ ಪ್ರದೇಶವನ್ನು ವಶಕ್ಕೆ ಪಡೆದು ಕ್ರಮೇಣ ಭಾರತದ ಮೇಲೆ ಹಿಡಿತ ಸಾಧಿಸಲು ಹೊರಟಿದೆ. ಆದರೆ, ಭಾರತಕ್ಕೆ ಅದಕ್ಕೆ ಅವಕಾಶ ನೀಡದೆ ದಿಟ್ಟ ಪ್ರತಿರೋಧ ವ್ಯಕ್ತಪಡಿಸಿದೆ ಎಂದು ಹೇಳಿದರು.

ಚೀನಾ ಮತ್ತು ಭಾರತ ಎರಡಕ್ಕೂ ನೆರೆಯ ರಾಷ್ಟ್ರವಾಗಿರುವ ಭೂತಾನ್, ಹಿಂದಿನಿಂದಲೂ ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಿದೆ. ಡೊಕ್ಲಾಮ್ ಪ್ರದೇಶದಲ್ಲಿ ಒನ್ ಬೆಲ್ಡ್ ಒನ್ ರೋಡ್ ಯೋಜನೆಯಡಿ ರಸ್ತೆ ನಿರ್ಮಿಸಲು ಮುಂದಾಗಿರುವ ಚೀನಾ, ಈ ಪ್ರದೇಶವನ್ನು ವಶಕ್ಕೆ ಪಡೆದರೆ ಭಾರತ, ಭೂತಾನ್ ಸೇರಿದಂತೆ ಇತರ ನೆರೆಯ ರಾಷ್ಟ್ರಗಳ ಮೇಲೆ ಹಿಡಿತ ಸಾಧಿಸುವುದು ಸುಲಭ ಎಂಬ ಲೆಕ್ಕಚಾರ ಹೊಂದಿದೆ. ಈ ವಿವಾದಿತ ಪ್ರದೇಶ ಭಾರತದ ಈಶಾನ್ಯ ರಾಜ್ಯದ ಸೂಕ್ಷ್ಮ ಪ್ರದೇಶಗಳಿಗೆ ತೀರ ಸಮೀಪದಲ್ಲಿದೆ. ಇದನ್ನು ಅರಿತಿರುವ ಚೀನಾ ರಸ್ತೆ ನೆಪದಲ್ಲಿ ಹಿತಾಸಕ್ತಿ ಸಾಧನೆಗೆ ತಂತ್ರ ಹೆಣೆದಿದೆ ಎಂದು ಅವರು ತಿಳಿಸಿದರು.

ಕೆಲವು ದಶಕಗಳ ಹಿಂದೆ ಭಾರತ ಮತ್ತು ಚೀನಾದ ಜಿಡಿಪಿ ಸಮಾನಗಿತ್ತು. ಇತ್ತೀಚಿನ ಮೂರು ದಶಕಗಳಲ್ಲಿ ಚೀನಾ ಅರ್ಥ ವ್ಯವಸ್ಥೆಯಲ್ಲಿ ವೇಗದ ಬೆಳವಣಿಗೆ ಕಂಡಿತು. ಜಾಗತಿಕ ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮಿದ ಚೀನಾ, ಅದರ ಜತೆಗೆ ಮಿಲಿಟಿರಿ ಶಕ್ತಿಯನ್ನು ವೃದ್ಧಿಸಿಕೊಂಡಿದೆ. ಉತ್ಪಾದನಾ ಕ್ಷೇತ್ರದಲ್ಲಿ ಅದ್ಧುತ ಬೆಳವಣಿಗೆ ಕಂಡಿರುವ ಚೀನಾ, ಜಾಗತಿಕವಾಗಿ ಮಾರುಕಟ್ಟೆಯನ್ನು ವಿಸ್ತರಿಸಿದೆ. ಭಾರತವೂ ಕೂಡ ಚೀನಾ ಉತ್ಪನ್ನಗಳ ಮಾರಾಟಕ್ಕೆ ದೊಡ್ಡ ಮಾರುಕಟ್ಟೆಯಾಗಿದೆ. ಈ ಎರಡೂ ರಾಷ್ಟ್ರಗಳ ನಡುವೆ 2200 ಬಿಲಿಯನ್ ಡಾಲರ್ಸ್‌ ವ್ಯವಹಾರವಿದೆ. ಡೊಕ್ಲಾಮ್ ಬಿಕ್ಕಟ್ಟಿನಿಂದ ಯುದ್ಧವಾದರೆ ಎರಡೂ ದೇಶಗಳ ಹೂಡಿಕೆ ಮತ್ತು ವ್ಯಾಪಾರಕ್ಕೆ ಭಾರಿ ಹೊಡೆತ ಬೀಳಲಿದೆ ಎಂದು ಅಭಿಪ್ರಾಯಪಟ್ಟರು.

ಡೊಕ್ಲಾಮ್ ವಿಚಾರವಾಗಿ ಚೀನಾ 1962ರ ಯುದ್ಧವನ್ನು ಪದೇ ಪದೇ ನೆನಪಿಸುತ್ತಿದೆ. ಇದೂ ಕೂಡ ಚೀನಾದ ಒಂದು ತಂತ್ರಗಾರಿಕೆ. ಆದರೆ, ಇಂದಿನ ಪರಿಸ್ಥಿತಿ ಬೇರೆಯಿದೆ. ಭಾರತ ಕೂಡ ಪ್ರಬಲವಾಗಿ ಬೆಳೆದಿದೆ. ಸದ್ಯದ ಪರಿಸ್ಥಿತಿಯಲ್ಲಿ ರಣೋತ್ಸಹಾದಲ್ಲಿರುವ ಚೀನಾ ಮತ್ತು ಭಾರತ ಮಾತುಕತೆ ಮೂಲಕ ಬಿಕ್ಕಟ್ಟು ಪರಿಹಾರಿಸಿಕೊಳ್ಳುವುದು ಉತ್ತಮ ಎಂದು ಹೇಳಿದರು.

ಒಡೆದು ಆಳುವ ನೀತಿ

ಇಂಡಿಯಾ ಟುಡೆ ಮ್ಯಾಗಜಿನ್ ಕಾರ್ಯಕಾರಿ ಸಂಪಾದಕ ಸಂದೀಪ್ ಉನ್ನೀತನ್ ಮಾತನಾಡಿ, ಭವಿಷ್ಯದಲ್ಲಿ ಜಗತ್ತಿನ ಸೂಪರ್ ಪವರ್ ರಾಷ್ಟ್ರವಾಗುವ ಮಹತ್ವಾಕಾಂಕ್ಷೆ ಹೊಂದಿರುವ ಚೀನಾ ಡೊಕ್ಲಾಮ್ ಬಿಕ್ಕಟ್ಟಿನ ಸಂಬಂಧ ಮಾಧ್ಯಮಗಳ ಮುಖಾಂತರ ಭಾರತಕ್ಕೆ ಬೆದರಿಕೆ ಹಾಕುತ್ತಿದೆ. ಇದು ಕೂಡ ಚೀನಾದ ಒಂದು ತಂತ್ರಗಾರಿಕೆ. ರಸ್ತೆಯ ನೆಪದಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸಿಕೊಂಡು ಸಾಮ್ರಾಜ್ಯ ವಿಸ್ತರಿಸುವುದು ಅದರ ಉದ್ದೇಶ. ಚೀನಾದ ಈ ರೀತಿಯ ನಡೆಯ ಬಗ್ಗೆ ನೆರೆಯ ರಾಷ್ಟ್ರಗಳಿಗೆ ಅಸಮಾಧಾನವಿದೆ. ಚೀನಾ ಹಿಂದಿನಿಂದಲೂ ದೇಶಗಳ ನಡುವೆ ವಿಷಬೀಜ ಬಿತ್ತಿ ಒಡೆದು ಆಳುವ ನೀತಿ ಅನುಸರಿಸುತ್ತಿದೆ. ಈ ಮೂಲಕ ಆ ರಾಷ್ಟ್ರಗಳ ಮೇಲೆ ಹಿಡಿತ ಸಾಧಿಸಲು ಹವಣಿಸುತ್ತಿದೆ ಎಂದು ಹೇಳಿದರು.

ನಿವೃತ್ತ ಲೆಫ್ಟಿನೆಂಟ್ ಜನರಲ್ ವಿ.ಎಂ.ಪಾಟೀಲ್ ಮಾತನಾಡಿ, ಯುದ್ಧದಿಂದ ಯಾವುದೇ ಸಮಸ್ಯೆ ಬಗೆಹರಿಯುವುದಿಲ್ಲ. ಇಂದಿನ ಪರಿಸ್ಥಿತಿಯಲ್ಲಿ ಯುದ್ಧವಾದರೆ ಪರಿಣಾಮ ಗಂಭೀರವಾಗುತ್ತದೆ. ಇಂದು ಚೀನಾ, ಭಾರತ, ಪಾಕಿಸ್ತಾನ ಅಣು ಅಸ್ತ್ರಗಳನ್ನು ಹೊಂದಿವೆ. ಆರ್ಥಿಕವಾಗಿ ಪ್ರಬಲವಾಗಿರುವ ಚೀನಾ ಜಾಗತಿಕವಾಗಿ ತನ್ನ ಪ್ರಭಾವ ಹೆಚ್ಚಿಸಿಕೊಳ್ಳಲು ಯತ್ನಿಸುತ್ತಿದೆ. ಡೊಕ್ಲಾಮ್‌ನಲ್ಲಿ ರಸ್ತೆ ನಿರ್ಮಾಣ ಹಿಂದೆ ದೊಡ್ಡ ತಂತ್ರಗಾರಿಕೆಯಿದೆ. ಭಾರತದ ಮೇಲೆ ಯುದ್ಧೋತ್ಸಾಹದಲ್ಲಿರುವ ಚೀನಾಕ್ಕೆ ಪರಿಣಾಮದ ಅರಿವಿದೆ. ಆದರೂ ಬೆದರಿಕೆ ಹಾಕುತ್ತಿದೆ. ಈ ಬೆದರಿಕೆಗೆ ಭಾರತ ಜಗ್ಗಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಮ್ಮ ಪೈಲೆಟ್‌ಗಳು ಚಾಣಕ್ಷರು

ಪ್ರಬಲ ಮಿಲಿಟರಿಯೇ ಚೀನಾದ ಶಕ್ತಿ. ವಿಶ್ವದ 27 ರಾಷ್ಟ್ರಗಳು ಚೀನಾದ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುತ್ತಿವೆ. ಭಾರತದಲ್ಲೂ ಕೂಡ ಮಿಲಿಟರಿಯನ್ನು ಮತ್ತಷ್ಟು ಪ್ರಬಲಗೊಳಿಸಬೇಕು. ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡಬೇಕು. ಶಸ್ತ್ರಾಸ್ತ್ರಗಳ ಉತ್ಪಾದನೆ ಹೆಚ್ಚಾಗಬೇಕು ಎಂದರು. ಅಂತೆಯೆ ಚೀನಾ ಮಿಲಿಟರಿ ಶಕ್ತಿ ಹೆಚ್ಚಿದ್ದರೂ ಭಾರತದ ವಾಯು ಪಡೆ ಚೀನಾಕ್ಕಿಂತ ಪ್ರಬಲವಾಗಿದೆ. ನಮ್ಮ ಯುದ್ಧ ವಿಮಾನಗಳ ಪೈಲಟ್‌ಗಳು ಚಾಣಕ್ಷರಾಗಿದ್ದಾರೆ ಎಂದು ಹೆಮ್ಮ ವ್ಯಕ್ತಪಡಿಸಿದರು.

ಎಫ್‌ಐಎನ್‌ಎಸ್ ಅಧ್ಯಕ್ಷ ವಿಜಯ್ ಗೊರೆ, ಸದಸ್ಯ ವಸಂತ ಹೆಗೆಡೆ ಮತ್ತಿತರರು ಉಪಸ್ಥಿತರಿದ್ದರು.