ವಿಶ್ವದಲ್ಲೇ ಅತಿ ಉದ್ದದ ಸುರಂಗ ಇದು? ಯೋಜನೆಗಾಗಿ ಕಮ್ಯುನಿಸ್ಟ್ ದೇಶ ರಿಹರ್ಸಲ್? ಡೋಕ್ಲಾಮ್ ಬೆನ್ನಲ್ಲೇ ಮತ್ತೊಂದು ಕ್ಯಾತೆ

ನವದೆಹಲಿ: ಸಿಕ್ಕಿಂ ಬಳಿಯ ಡೋಕ್ಲಾಮ್ ಬಿಕ್ಕಟ್ಟು ಬಗೆಹರಿಯಿತು ಎನ್ನುತ್ತಿರುವಾಗಲೇ ಭಾರತ ಹಾಗೂ ಚೀನಾ ನಡುವೆ ಮತ್ತೊಂದು ವಿವಾದ ಭುಗಿಲೇಳುವ ಲಕ್ಷಣಗಳು ಕಂಡುಬಂದಿವೆ. ವಾಯವ್ಯ ಚೀನಾದಲ್ಲಿರುವ ಬರಪೀಡಿತ ಕ್ಸಿನ್‌'ಜಿಯಾಂಗ್ ಪ್ರಾಂತ್ಯಕ್ಕೆ ಬ್ರಹ್ಮಪುತ್ರ ನದಿ ತಿರುಗಿಸಲು ವಿಶ್ವದಲ್ಲೇ ಅತಿ ಉದ್ದವಾದ 1000 ಕಿ.ಮೀ. ಸುರಂಗ ಮಾರ್ಗವನ್ನು ನಿರ್ಮಾಣ ಮಾಡುವ ಮಹತ್ವಾಕಾಂಕ್ಷಿ ಯೋಜನೆಯೊಂದನ್ನು ಚೀನಾ ಜಾರಿಗೆ ತರುತ್ತಿದೆ. ಇದು ಭಾರತದ ಆಕ್ಷೇಪಕ್ಕೆ ಕಾರಣವಾಗುವುದು ನಿಶ್ಚಿತವಾಗಿದೆ. 1000 ಕಿ.ಮೀ. ಸುರಂಗ ನಿರ್ಮಾಣದ ಸಾಮರ್ಥ್ಯ ಪರಿಶೀಲಿಸುವ ಸಲುವಾಗಿ ಸಣ್ಣ ಪ್ರಮಾಣದ ಯೋಜನೆಯನ್ನು ಚೀನಾ ಈಗಾಗಲೇ ‘ರಿಹರ್ಸಲ್’ ರೂಪದಲ್ಲಿ ಕೈಗೆತ್ತಿಕೊಂಡಿದೆ.

ತನ್ನ ಯುನ್ನಾನ್ ಪ್ರಾಂತ್ಯದ ಮಧ್ಯಭಾಗದಿಂದ 600 ಕಿ.ಮೀ. ಉದ್ದದ ಸುರಂಗ ನಿರ್ಮಾಣವನ್ನು ಕಳೆದ ಆಗಸ್ಟ್‌'ನಲ್ಲೇ ಆರಂಭಿಸಿದೆ ಎಂದು 'ಚೀನಾ ಮಾರ್ನಿಂಗ್ ಪೋಸ್ಟ್’ ಪತ್ರಿಕೆ ವರದಿ ಮಾಡಿದೆ. ಚೀನಾದಲ್ಲಿ ಯಾರ್ಲುಂಗ್ ಸ್ಯಾಂಗ್'ಪೋ ಎಂದು ಕರೆಯಲಾಗುವ ಬ್ರಹ್ಮಪುತ್ರ ನದಿಯಿಂದ ಕ್ಸಿನ್‌'ಜಿಯಾಂಗ್ ಪ್ರಾಂತ್ಯಕ್ಕೆ ನೀರು ಒಯ್ಯುವ ತಂತ್ರವನ್ನು ಯುನ್ನಾನ್ ಯೋಜನೆ ಮೂಲಕ ಚೀನಿ ಎಂಜಿನಿಯರ್‌'ಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಪತ್ರಿಕೆ ಹೇಳಿದೆ. ಈ ಸುರಂಗ ಟಿಬೆಟ್‌'ನ ಎತ್ತರದ ಪ್ರದೇಶದಿಂದ ಕೆಳಕ್ಕೆ ಇಳಿದು ಬರಲಿದ್ದು, ಹಲವಾರು ಸ್ಥಳಗಳಲ್ಲಿ ಜಲಪಾತಗಳ ಜತೆ ಜೋಡಣೆಯಾಗಲಿದೆ.

ಬರಪೀಡಿತ ಕ್ಸಿನ್‌'ಜಿಯಾಂಗ್ ಪ್ರಾಂತ್ಯವನ್ನು ಕ್ಯಾಲಿಫೋರ್ನಿಯಾ ಆಗಿ ರೂಪಾಂತರವಾಗಲಿದೆ ಎಂಬುದು ಈ ಯೋಜನೆಯ ಆಶಯವಾಗಿದೆ. ಟಿಬೆಟ್ ಪ್ರಾಂತ್ಯದಲ್ಲಿ ಚೀನಾ ಕೈಗೆತ್ತಿಕೊಳ್ಳುತ್ತಿರುವ ಯೋಜನೆಗಳಿಂದ ಈಗಾಗಲೇ ನದಿಯ ಹರಿವು ಕಡಿಮೆಯಾಗುತ್ತಿದೆ ಎಂದು ಭಾರತ ದೂರುತ್ತಿದೆ. ಇಂತಹ ಸಂದರ್ಭಲ್ಲೇ ಚೀನಾ ಈ ಯೋಜನೆಗೆ ಕೈ ಹಾಕಿರುವುದು ವಿರೋಧಕ್ಕೆ ಕಾರಣವಾಗುವ ಸಂಭವವಿದೆ. ಬ್ರಹ್ಮಪುತ್ರ ನದಿಯು ಭಾರತ ಮತ್ತು ಬಾಂಗ್ಲಾದೇಶಕ್ಕೆ, ಅದರಲ್ಲೂ ನಮ್ಮ ದೇಶಕ್ಕೆ ಜೀವವಾಹಿನಿಯಾಗಿದೆ. ಹೀಗಾಗಿ, ಚೀನಾದ ಸುರಂಗ ಯೋಜನೆಯು ಭಾರತದ ಪರಿಸರದ ಮೇಲೆ ಮತ್ತು ಜನಜೀವನದ ಮೇಲೆ ಕೆಟ್ಟ ಪರಿಣಾಮ ಬೀರುವುದು ನಿಶ್ಚಿತವಾಗಿದೆ. ಅಷ್ಟೇ ಅಲ್ಲ, ಚೀನಾದ ಪರಿಸರ ಸಮತೋಲನಕ್ಕೂ ಈ ಯೋಜನೆ ಮಾರಕವಾಗಲಿದೆ ಎಂದು ಅಲ್ಲಿಯ ಪರಿಸರತಜ್ಞರು ಅಪಸ್ವರ ಎತ್ತುತ್ತಿದ್ದಾರೆನ್ನಲಾಗಿದೆ.

ಅತೀ ಉದ್ದದ ಜಲಸುರಂಗ ಯಾವುದು?
ನ್ಯೂಯಾರ್ಕ್ ನಗರದ ಸಮೀಪದ 137 ಕಿಮೀ ಉದ್ದದ ಜಲಕೊಳವೆಯು ಸದ್ಯ ವಿಶ್ವದ ಅತೀ ಉದ್ದದ ಸುರಂಗವೆನಿಸಿದೆ. ಚೀನಾದಲ್ಲಿ ಲಿಯೋನಿಂಗ್ ಪ್ರಾಂತ್ಯದಲ್ಲಿರುವ 85 ಕಿಮೀ ಉದ್ದದ ದಹುವೋಫಾಂಗ್ ಜಲ ಯೋಜನೆಯು ಸದ್ಯ ಆ ದೇಶದ ಅತೀ ಉದ್ದದ ಜಲಸುರಂಗವೆನಿಸಿದೆ. ಈಗ ಟಿಬೆಟ್-ಕ್ಸಿನ್'ಜಿಯಾಂಗ್ ನಡುವಿನ ಸುರಂಗವು ವಿಶ್ವ ದಾಖಲೆಯನ್ನು ಧೂಳೀಪಟ ಮಾಡಲಿದೆ.

epaperkannadaprabha.com