ನವದೆಹಲಿ: ವಿಶ್ವದ ಬಲಾಢ್ಯ ರಾಷ್ಟ್ರಗಳಿಗೇ ಸಡ್ಡು ಹೊಡೆಯುವ ಮಟ್ಟಕ್ಕೆ ತಲುಪಿರುವ ಚೀನಾ ಹಾಗೂ ಆ ದೇಶದ ಸ್ವಾಯತ್ತ ಪ್ರದೇಶವಾಗಿರುವ ಹಾಂಕಾಂಗ್ ಮುಂದಿನ 3 ವರ್ಷಗಳಲ್ಲಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಲಿವೆ ಎಂದು ಅಧ್ಯಯನ ವರದಿಯೊಂದು ಎಚ್ಚರಿಸಿದೆ. ಚೀನಾದಲ್ಲಿ ಆರ್ಥಿಕ ಸಮಸ್ಯೆ ಉಂಟಾದರೂ, ಅದರ ಪಕ್ಕದಲ್ಲೇ ಇರುವ ಭಾರತಕ್ಕೆ ಯಾವುದೇ ಪರಿಣಾಮವೂ ಆಗದು. 

ಏಷ್ಯಾದಲ್ಲೇ ಭಾರತ ಹಾಗೂ ದ.ಕೊರಿಯಾ ಇಂತಹ ಸಂಕಷ್ಟದಿಂದ ಸುರಕ್ಷಿತವಾಗಿವೆ ಎಂದು ನೊಮುರಾ ಸಿಂಗಾಪುರ ಕಂಪನಿಯ ಅಧ್ಯಯನ ಹೇಳಿದೆ. ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಆರ್ಥಿಕ ಬಿಕ್ಕಟ್ಟಿನ ಅಪಾಯ ಹೆಚ್ಚಿರುತ್ತದೆ.

ಹಾಂಕಾಂಗ್ ಹಾಗೂ ಚೀನಾದಲ್ಲಿ ಆರ್ಥಿಕ ಬಿಕ್ಕಟ್ಟು ಅಥವಾ ದೇಶೀಯ ಬೇಡಿಕೆ ಮುಂದಿನ ಮೂರು ವರ್ಷಗಳಲ್ಲಿ  ಕಡಿಮೆ ಯಾಗಬಹುದು. ಜೊತೆಗೆ ಸಾಲದ ಸಮಸ್ಯೆ, ಹಣಕಾಸು ಒತ್ತಡಗಳು ಪರಿಸ್ಥಿತಿಯನ್ನು ಬಿಗಡಾಯಿಸಬಲ್ಲದು ಎಂದು ಹೇಳಿದೆ.