ಬೆಂಗಳೂರು(ಸೆ. 13): ಕಾವೇರಿ ಗಲಭೆ ತೀವ್ರವಾಗಿರುವ ಸುಂಕದಕಟ್ಟೆ ಸಮೀಪದ ಲಗ್ಗೆರೆಯಿಂದ ಮೂವರು ಬಾಲಕರು ನಾಪತ್ತೆಯಾಗಿರುವ ವಿಷಯ ಬೆಳಕಿಗೆ ಬಂದಿದೆ. ಕಾಣೆಯಾದ ಬಾಲಕರನ್ನು ದರ್ಶನ್(14), ಕುಮಾರ್(15) ಮತ್ತು ಶ್ರೀಕಾಂತ್(11) ಎಂದು ಗುರುತಿಸಲಾಗಿದೆ. ಕುಮಾರ್ ಮತ್ತು ಶ್ರೀಕಾಂತ್ ಅವರು ರಾಜಗೋಪಾಲನಗರ ಪೊಲೀಸ್ ಠಾಣೆ ವ್ಯಾಪ್ತಿಯ ಲಗ್ಗೆರೆ ಬಳಿಯ ಪ್ರೀತಿ ನಗರದ ನಿವಾಸಿಗಳಾದ ದಂಪತಿಯ ಪುತ್ರರಾಗಿದ್ದಾರೆ. ಕುಮಾರ್'ನು ಬಾಲಗಂಗಾಧರ್ ತಿಲಕ್ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದರೆ, ಶ್ರೀಕಾಂತ್ ಸಿರಿ ಪಬ್ಲಿಕ್ ಶಾಲೆಯಲ್ಲಿ 6ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ಇನ್ನು, ದರ್ಶನ್'ನು ಸೈನಿಕ್ ಸ್ಕೂಲ್'ನಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ.

ನಿನ್ನೆ ಇವರ ಪ್ರದೇಶದಲ್ಲಿ ಕಾವೇರಿ ಹೋರಾಟದ ಕಿಚ್ಚು ಹೆಚ್ಚಾಗಿದ್ದ ವೇಳೆ ಬಾಲಕರು ರಸ್ತೆಗೆ ಹೋಗಿದ್ದಾರೆ. ಪೋಷಕರು ಇವರತ್ತ ಗಮನ ಹರಿಸಿಲ್ಲ. ರಾತ್ರಿಯಾದರೂ ಮಕ್ಕಳು ಮನೆಗೆ ವಾಪಸ್ಸಾಗದೇ ಹೋದಾಗ ಆತಂಕಕ್ಕೊಳಗಾಗಿದ್ದಾರೆ. ಈ ಪೋಷಕರು ಇಂದು ಪ್ರದೇಶದ ಸುತ್ತಮುತ್ತ ತಮ್ಮ ಮಕ್ಕಳ ಫೋಟೋ ಹಿಡಿದು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಆ ಪ್ರದೇಶದಲ್ಲಿರುವ ಸಿಸಿಟಿವಿ ಕೆಮರಾಗಳನ್ನು ಪರಿಶೀಲಿಸುತ್ತಿದ್ದಾರೆ.

(ಫೋಟೋದಲ್ಲಿರುವುದು ಶ್ರೀಕಾಂತ್ ಮತ್ತು ಕುಮಾರ್ ಅವರ ಭಾವಚಿತ್ರ)