ಆಧಾರ್ ಮಾಹಿತಿ ಸೋರಿಕೆಗೆ ವರ್ಚುವಲ್ ಐಡಿ ಕೊಳ್ಳೆ ಹೊಡೆದ ಬಳಿಕ ಕೋಟೆಗೆ ಬಾಗಿಲು: ಚಿದಂಬರಂ ಟೀಕೆ
ನವದೆಹಲಿ: ಆಧಾರ್ ಕಾರ್ಡ್ ಮಾಹಿತಿ ಸೋರಿಕೆಯಾಗುವುದನ್ನು ತಡೆಯಲು ಪ್ರಾಧಿಕಾರವು ‘ವರ್ಚುವಲ್ ಐಡಿ’ಯನ್ನು ಪರಿಚಯಿಸಲು ಮುಂದಾಗಿರುವ ಕ್ರಮವನ್ನು ಮಾಜಿ ಕೇಂದ್ರ ಗೃಹ ಸಚಿವ ಹಾಗೂ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಟೀಕಿಸಿದ್ದಾರೆ.
ಈ ಬಗ್ಗೆ ಟ್ವೀಟ್’ನ್ನು ಮಾಡಿರುವ ಚಿದಂಬರಂ, ಕೋಟಿಗಟ್ಟಲೆ ಮಂದಿ ಒತ್ತಡಕ್ಕೊಳಗಾಗಿ ಈಗಾಗಲೇ ತಮ್ಮ ಆಧಾರ್ ವಿವರಗಳನ್ನು ಬೇರೆ ಬೇರೆ ಕಡೆ ಸಲ್ಲಿಸಿದ್ದಾರೆ. ಪ್ರಾಧಿಕಾರ ಈಗ ಉದ್ದೇಶಿಸಿರುವ ಕ್ರಮವು, ಕೊಳ್ಳೆ ಹೊಡೆದ ಬಳಿಕ ಕೋಟೆಗೆ ಬಾಗಿಲು ಹಾಕಿದಂತಿದೆ ಎಂದು ಚಿದಂಬರಂ ಬಣ್ಣಿಸಿದ್ದಾರೆ.
ಇತ್ತೀಚೆಗೆ ಲಕ್ಷಾಂತರ ಮಂದಿಯ ಆಧಾರ್ ವಿವರಗಳು ಜುಜುಬಿ ಬೆಲೆಗೆ ಮಾರಾಟವಾಗುತ್ತಿರುವ ಬಗ್ಗೆ ದಿ ಟ್ರಿಬ್ಯೂನ್ ಪತ್ರಿಕೆಯು ವರದಿ ಮಾಡಿತ್ತು. ಆ ವ್ಯಕ್ತಿಯ ಬಯೋಮೆಟ್ರಿಕ್ ವಿವರಗಳು ಸುರಕ್ಷಿತವಾಗಿದೆಯೆಂದು ಆಧಾರ್ ಪ್ರಾಧಿಕಾರವು ಸ್ಪಷ್ಟನೆ ನೀಡಿತ್ತು; ಹಾಗೂ ಪತ್ರಿಕೆ ಮತ್ತು ವರದಿಗಾರರ ವಿರುದ್ಧ ದೂರನ್ನು ದಾಖಲಿಸಿತ್ತು.
ಆಧಾರ್ ಮಾಹಿತಿ ಸೋರಿಕೆ ಹಾಗೂ ದುರ್ಬಳಕೆ ತಡೆಗೆ ಪ್ರಾಧಿಕಾರವು ಇದೀಗ 16 ಡಿಜಿಟ್’ಗಳ ವರ್ಚುವಲ್ ಐಡಿಯನ್ನು ಪರಿಚಯಿಸಲು ಮುಂದಾಗಿದೆ.
