ರಾಯ್‌ಪುರ[ಮೇ.08]: ಛತ್ತೀಸ್‌ಗಢ ಪೊಲೀಸರು ಇದೇ ಮೊದಲ ಬಾರಿಗೆ ನಕ್ಸಲ್‌ ನಿಗ್ರಹ ಮಹಿಳಾ ಕಮಾಂಡೋ ದಳವೊಂದನ್ನು ರಚಿಸಿ ಕಾರ್ಯಾಚರಣೆಗೆ ಇಳಿಸಿದೆ. ಅಚ್ಚರಿಯ ಸಂಗತಿ ಏನೆಂದರೆ ಈ ಪಡೆಯಲ್ಲಿರುವ 30 ಮಹಿಳೆಯರಲ್ಲಿ 10ಕ್ಕೂ ಹೆಚ್ಚು ಮಂದಿ ಈ ಹಿಂದೆ ನಕ್ಸಲರೇ ಆಗಿದ್ದರು.

ರಾಜ್ಯದಲ್ಲಿ ನಕ್ಸಲರ ಉಪಟಳ ಹೆಚ್ಚಿದ ಹಿನ್ನೆಲೆಯಲ್ಲಿ ನಿಗ್ರಹಕ್ಕೆ ಪಣ ತೊಟ್ಟಿರುವ ಪೊಲೀಸ್‌ ಇಲಾಖೆ ಭದ್ರತಾ ಪಡೆ ಜೊತೆ ನಕ್ಸಲ್‌ ಪೀಡಿತ ಪ್ರದೇಶವಾದ ದಂತೇವಾಡಾ ಜಿಲ್ಲೆಯ ಮಲಂಗೀರ್‌ ವಲಯದಲ್ಲಿ ಜಂಟಿಯಾಗಿ ಕಾರ್ಯಾಚರಣೆ ನಡೆಸಲೆಂದೇ ಮಹಿಳಾ ಕಮಾಂಡೋಗಳ ಪಡೆ ರಚಿಸಿದೆ. ನಕ್ಸಲ ನಿಗ್ರಹಕ್ಕೆ ಈ ಪಡೆ ಮುಂಚೂಣಿಯಲ್ಲಿದ್ದು, ಕಾರ್ಯಾಚರಣೆ ನಡೆಸಲಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶರಣಾಗತ ನಕ್ಸಲರಿವರು!:

ಪ್ರತ್ಯೇಕ ಸಂದರ್ಭಗಳಲ್ಲಿ ಪೊಲೀಸರಿಗೆ ಶರಣಾದ 30ಕ್ಕೂ ಹೆಚ್ಚು ಮಹಿಳಾ ನಕ್ಸಲರೇ ಈ ನಕ್ಸಲ್‌ ನಿಗ್ರಹ ಕಮಾಂಡೋ ಪಡೆಯ ಸದಸ್ಯರಾಗಿದ್ದಾರೆ. ಶರಣಾಗರ ಮಹಿಳಾ ನಕ್ಸಲರಿಗೆ ಹೊಸ ಜೀವನದ ಭರವಸೆ ಮೂಡಿಸಿ, ಅವರ ಮನೋಬಲ ಹೆಚ್ಚಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸ್‌ ಇಲಾಖೆ ಅವರನ್ನೇ ಮಹಿಳಾ ಪಡೆಗೆ ನೇಮಕ ಮಾಡಿಕೊಂಡಿದ್ದು, ಜಂಗಲ್‌ ಕಾಂಬ್ಯಾಟ್‌ನಲ್ಲೇ ಸೂಕ್ತ ತರಬೇತಿ ನೀಡಿಸಲಾಗಿದೆ ಎಂದು ದಂತೆವಾಡಾ ಎಸ್ಪಿ ಅಭಿಷೇಕ್‌ ಪಲ್ಲವ ಮತ್ತು ಡಿಎಸ್‌ಪಿ ದಿನೇಶ್ವರಿ ನಂದ್‌ ಮಾಹಿತಿ ಹೇಳಿದ್ದಾರೆ.