ತಿರುವನಂತಪುರಂ[ಜ.23]: ಕೇರಳದಲ್ಲಿ ಪ್ರವಾಹ ಉಂಟಾದಾಗ ಜನ ತಾಮುಂದು-ನಾಮುಂದು ಎಂದು ಪರಿಹಾರ ನಿಧಿಗೆ ಹೇರಳ ದೇಣಿಗೆ ನೀಡಿದರು. ಆದರೆ ಈ ದೇಣಿಗೆ ಹಣದಲ್ಲಿನ 3.26 ಕೋಟಿ ರು. ಮೌಲ್ಯದ ಚೆಕ್‌ಗಳು ಬೌನ್ಸ್‌ ಆಗಿವೆ ಎಂಬ ಅಪಮಾನಕಾರಿ ಸಂಗತಿ ಈಗ ಬಯಲಾಗಿದೆ.

ಕೇರಳ ವಿಧಾನಸಭೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಈ ವಿಷಯ ತಿಳಿಸಿದ್ದಾರೆ. ಕಾಸರಗೋಡು ಶಾಸಕ ನೆಲ್ಲಿಕ್ಕಣ್ಣು ಅವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ವಿಜಯನ್‌, ‘395 ಚೆಕ್‌ ಹಾಗೂ ಡಿ.ಡಿ.ಗಳನ್ನು ಅಮಾನ್ಯ ಮಾಡಲಾಗಿದೆ. ಇವುಗಳ ಒಟ್ಟಾರೆ ಮೌಲ್ಯ 3.26 ಕೋಟಿ ರುಪಾಯಿ’ ಎಂದು ತಿಳಿಸಿದ್ದಾರೆ.

ಕೇರಳ ಮುಖ್ಯಮಂತ್ರಿಗಳ ಪ್ರವಾಹ ಪರಿಹಾರ ನಿಧಿಗೆ 2,797.67 ಕೋಟಿ ರುಪಾಯಿ ಹಣವು 2018ರ ನ.30ರವರೆಗೆ ಸಂದಾಯವಾಗಿದೆ. ಇದರಲ್ಲಿ 2,537.22 ಕೋಟಿ ರು. ಚೆಕ್‌ ರೂಪದಲ್ಲಿ ಇದ್ದರೆ, 7.46 ಕೋಟಿ ರು. ಚೆಕ್‌ ರೂಪದಲ್ಲಿದೆ. 260.45 ಕೋಟಿ ರು.ಗಳನ್ನು ಆನ್‌ಲೈನ್‌ ಮೂಲಕ ವರ್ಗಾಯಿಸಲಾಗಿದೆ ಎಂದು ಅವರು ಹೇಳಿದರು.

ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ 3,226.21 ಕೋಟಿ ರು. ಹಣವು ಸಿಎಂ ನಿಧಿಗೆ ಸಂಗ್ರಹವಾಗಿದ್ದರೆ, 1199.69 ಕೋಟಿ ರು. ಖರ್ಚಾಗಿದೆ.