Asianet Suvarna News Asianet Suvarna News

ಶ್ರೀಗಂಧ ಚೋರರನ್ನು ಹಿಡಿಯಲು ಸಿಸಿಟಿವಿ ವಿಡಿಯೋ ಕೊಟ್ಟ ಮಡಿಕೇರಿ ಕುಟುಂಬಕ್ಕೆ ಈಗ ಪ್ರಾಣಭೀತಿ..!

ತಮ್ಮ ಮನೆಯ ಸಮೀಪ ಹಾಕಿದ್ದ ಸಿಸಿ ಕ್ಯಾಮರಾ ಮೂಲಕ ಶ್ರೀಗಂಧಚೋರರ ಬಂಧನಕ್ಕೆ ಕಾರಣವಾದ ಕುಟುಂಬ ಈಗ ದಿನವೂ ಜೀವ ಭಯದಿಂದಲೇ ಬದುಕು ಸಾಗಿಸುವಂತಾಗಿದೆ. ಶ್ರೀಗಂಧ ಚೋರರ ಬಂಧನವಾದ್ರೂ ಅವರ ಬೆಂಬಲಿಗರು ರಾತ್ರೋ ರಾತ್ರಿ ಮನೆಯ ಮೇಲೆ ದಾಳಿ ನಡೆಸುತ್ತಿದ್ದಾರೆ. ರಕ್ಷಣೆ ನೀಡಬೇಕಾದ ಅರಣ್ಯ ಇಲಾಖೆ ಕೈಕಟ್ಟಿ ಕೂತಿದೆ.

chengappa family faces life threat after their cctv camera helped catch sandal tree thieves

ಮಡಿಕೇರಿ(ಜುಲೈ 25): ಶ್ರಿಗಂಧ ಮರವನ್ನು ಸ್ವಂತ ಜಾಗದಲ್ಲಿದ್ದರೂ ಕಡಿಯೋ ಹಾಗಿಲ್ಲ. ಅದೇ ಕಾರಣಕ್ಕೆ ರಾತ್ರೋ ರಾತ್ರಿ  ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಬಳಿಯ ದೊಡ್ಡಕಣಗಾಲ್ ಗ್ರಾಮದಲ್ಲಿ ಗಂಧದ ಮರ ಕಳ್ಳತನವಾಗಿತ್ತು. ಗಂಧದ ಮರವಿದ್ದ ತೋಟದ ಮಾಲೀಕ ಪುರಂದರ ಅಂಡ್ ಸ್ನೇಹಿತರೇ ಕಳ್ಳತನ ಮಾಡಿದ್ದರು. ಪಕ್ಕದ್ಮನೆಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾ ಆಧರಿಸಿ ಅಧಿಕಾರಿಗಳು ಖದೀಮರನ್ನು ಬಂಧಿಸಿ ಲಕ್ಷಾಂತರ ಮೌಲ್ಯದ ಗಂಧದ ತುಂಡು ವಶಪಡಿಸಿಕೊಂಡಿದ್ದರು.

ಈ ಖದೀಮರ ಬಂಧನಕ್ಕೆ ಸಿಸಿಟಿವಿ ನೆರವಾಗಿತ್ತು.. ಆದ್ರೆ, ಸಿಸಿಟಿವಿ ಅಳವಡಿಸಿದವರ ನೆಮ್ಮದಿಯೇ ಈಗ ಹಾಳಾಗಿದೆ. ಸಿಸಿಟಿವಿ ಫೂಟೇಜ್ ಕೊಟ್ಟು ಸಹೋದರನ ಕಳ್ಳಾಟ ಬಯಲಿಗೆ ತಂದಿದ್ದ ಚಂಗಪ್ಪನ ಮನೆ ಮೇಲೆ ದುಷ್ಕರ್ಮಿಗಳು ರಾತ್ರೋ ರಾತ್ರಿ ದಾಳಿ ನಡೆಸಿದ್ದಾರೆ.

ದುಷ್ಕರ್ಮಿಗಳು ಚಂಗಪ್ಪರ ಮನೆ ಮೇಲೆ ದಾಳಿ ನಡೆಸಿದ ದೃಶ್ಯ ಕೂಡ ಅದೇ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ದುಷ್ಕರ್ಮಿಗಳು ರಾತ್ರಿ ಹೊತ್ತಲ್ಲಿ ಲಾಂಗ್ ಹಿಡಿದು ದಾಳಿ ನಡೆಸಿದ್ದು ಚಂಗಪ್ಪ ಕುಟುಂಬವನ್ನು ಬೆಚ್ಚಿ ಬೀಳಿಸಿದೆ.

ಇನ್ನು, ಶ್ರಿಗಂಧ ಕಳ್ಳರ ಹಿಡಿಯಲು ಸಹಕಾರ ನೀಡಿದ ತಮಗೆ ಜೀವ ಭಯ ಇದೆ ಎಂದು ಈಗ ಚಂಗಪ್ಪ ಕುಟುಂಬ ದೂರು ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ವಂತೆ.. ಇದರ ಹಿಂದೆ ದೆಹಲಿಯಲ್ಲಿರೋ ಅಧಿಕಾರಿ ಡಿಸಿ ನಿರಂಜನ್ ಅವರ ಕೈವಾಡವಿದೆ ಅನ್ನೋದು ಚಂಗಪ್ಪ ಕುಟುಂಬದ ಆರೋಪ. ದಾಳಿ ಮಾಡಿದವರು ಯಾರೋ ದೂರದವರು. ಅವರಿಗೆ ಸುಪಾರಿ ಕೊಟ್ಟು ಈ ಕೆಲಸ ಮಾಡಿರಬಹುದು ಎಂದು ಚೆಂಗಪ್ಪನವರು ಸುವರ್ಣನ್ಯೂಸ್ ಬಳಿ ಶಂಕಿಸಿದ್ದಾರೆ. ಇದನ್ನೆಲ್ಲ ನೋಡ್ತಿದ್ರೆ ಶ್ರೀಗಂಧ ಚೋರರ ಬಂಧನಕ್ಕೆ ಸಹಕರಿಸಿದ್ದೇ ತಪ್ಪಾಯ್ತಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ.

ಈ ವೇಳೆ ಸುವರ್ಣನ್ಯೂಸ್ ಜೊತೆ ಮಾತನಾಡಿದ ಮಡಿಕೇರಿ ಡಿಎಫ್'ಒ ಸೂರ್ಯಸೇನ್ ಅವರು ಚೆಂಗಪ್ಪ ಕುಟುಂಬಕ್ಕೆ ಅಗತ್ಯ ಭದ್ರತೆ ಒದಗಿಸುವ ಭರವಸೆ ನೀಡಿದ್ದಾರೆ.

ವರದಿ: ಪ್ರಜ್ವಲ್, ಸುವರ್ಣ ನ್ಯೂಸ್, ಮಡಿಕೇರಿ

Follow Us:
Download App:
  • android
  • ios