ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ತೀವ್ರಗೊಳಿಸಿ ಎಂದು ಟಿಡಿಪಿ ಮುಖ್ಯಸ್ಥ, ಸಿಎಂ ಚಂದ್ರಬಾಬು ನಾಯ್ಡು ತಮ್ಮ ಸಂಸದರಿಗೆ ಕರೆ ನೀಡಿದ್ದಾರೆ.

ನವದೆಹಲಿ: ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ತೀವ್ರಗೊಳಿಸಿ ಎಂದು ಟಿಡಿಪಿ ಮುಖ್ಯಸ್ಥ, ಸಿಎಂ ಚಂದ್ರಬಾಬು ನಾಯ್ಡು ತಮ್ಮ ಸಂಸದರಿಗೆ ಕರೆ ನೀಡಿದ್ದಾರೆ.

ಶೀಘ್ರದಲ್ಲೇ ಇಡೀ ದೇಶದಲ್ಲಿ ಬಿಜೆಪಿ ತಿರಸ್ಕರಿಸಲ್ಪಡಲಿದೆ ಎಂದು ನಾಯ್ಡು ಭವಿಷ್ಯ ನುಡಿದಿದ್ದಾರೆ. ಟಿಡಿಪಿ ಸಂಸದರೊಂದಿಗೆ ಟೆಲಿಕಾನ್ಫರೆನ್ಸ್‌ನಲ್ಲಿ ಮಾತನಾಡಿದ ನಾಯ್ಡು, ‘ಕೆಲವು ದಿನಗಳಿಂದ ಸಂಸತ್‌ ಕಲಾಪ ಪದೇಪದೇ ಮುಂದೂಡುವ ಮೂಲಕ ಬಿಜೆಪಿ ನುಣುಚಿಕೊಳ್ಳುತ್ತಿದೆ. ಸಂಸತ್ತು ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟರೆ, ಸಂಸದರು ರಾಷ್ಟ್ರಪತಿಯವರನ್ನು ಭೇಟಿಯಾಗಬೇಕು. ಬಿಜೆಪಿ, ವಿಭಜಿಸಿ ಆಳುವ ನೀತಿಯನ್ವಯ ನಡೆಯುತ್ತಿದೆ’ ಎಂದು ಹೇಳಿದ್ದಾರೆ.

ಇನ್ನೊಂದೆಡೆಯಲ್ಲಿ ಶುಕ್ರವಾರ ಮುಂಜಾನೆ ಅಮರಾವತಿಯಲ್ಲಿ ನಾಯ್ಡು ಟಿಡಿಪಿ ಸಚಿವರು ಮತ್ತು ಮುಖಂಡರೊಂದಿಗೆ ಸೈಕಲ್‌ ರ್ಯಾಲಿ ನಡೆಸಿದರು. ‘ಈಗಾಗಲೇ ಆಂಧ್ರ ಪ್ರದೇಶದ ಜನತೆ ಬಿಜೆಪಿಯನ್ನು ಸ್ವೀಕರಿಸುತ್ತಿಲ್ಲ. ಶೀಘ್ರವೇ ಇಡೀ ದೇಶದಲ್ಲೇ ಬಿಜೆಪಿಯನ್ನು ಸ್ವೀಕರಿಸದಂತಹ ದಿನ ಬರಲಿದೆ.

ವಿಶೇಷ ಮಾನ್ಯತೆ ಸ್ಥಾನಮಾನ ಮತ್ತು ಆಂಧ್ರಪ್ರದೇಶ ಪುನರ್‌ರಚನೆ ಕಾಯ್ದೆ ಸೇರಿದಂತೆ ರಾಜ್ಯಸಭೆಯಲ್ಲಿ ನೀಡಲಾದ ಭರವಸೆಗಳು ಈಡೇರುವವರೆಗೂ ನಾವು ಹಿಮ್ಮೆಟ್ಟುವುದಿಲ್ಲ’ ಎಂದು ನಾಯ್ಡು ಹೇಳಿದ್ದಾರೆ.