ಹೈದರಾಬಾದ್‌[ಜೂ.15]: ಲೋಕಸಭೆ ಹಾಗೂ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಮುಗಿಯುತ್ತಿದ್ದಂತೆ ಆಂಧ್ರಪ್ರದೇಶದಲ್ಲಿ ಕುತೂಹಲಕಾರಿ ಬೆಳವಣಿಗೆಯೊಂದು ನಡೆದಿದೆ. ಅಧಿಕಾರದ ಗದ್ದುಗೆ ಹಿಡಿದ ವೈಎಸ್ಸಾರ್‌ ಕಾಂಗ್ರೆಸ್‌ ಮುಖ್ಯಸ್ಥ ಜಗನ್ಮೋಹನ ರೆಡ್ಡಿ ಅವರನ್ನು ಸೋಲಿಸಲು ಅವರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಚುನಾವಣಾ ತಂತ್ರಗಾರ ಪ್ರಶಾಂತ್‌ ಕಿಶೋರ್‌ಗೇ ತೆಲುಗುದೇಶಂ ಮುಖ್ಯಸ್ಥ ಚಂದ್ರಬಾಬು ನಾಯ್ಡು ಮೊರೆ ಹೋಗಿದ್ದಾರೆ. ತಮ್ಮ ಜತೆ ಬಹು ವರ್ಷಗಳ ಗುತ್ತಿಗೆ ಕರಾರು ಮಾಡಿಕೊಳ್ಳುವ ಆಫರ್‌ ಅನ್ನು ಪ್ರಶಾಂತ್‌ ಕಿಶೋರ್‌ ನೇತೃತ್ವದ ಐ-ಪ್ಯಾಕ್‌ ಮುಂದೆ ನಾಯ್ಡು ಇಟ್ಟಿದ್ದಾರೆ ಎಂದು ಹೇಳಲಾಗಿದೆ.

2017ರಲ್ಲಿ ಜಗನ್‌ ಅವರು ಪ್ರಶಾಂತ್‌ ಕಿಶೋರ್‌ ಸಂಸ್ಥೆಯನ್ನು ಚುನಾವಣಾ ತಂತ್ರಗಾರಿಕೆಗೆ ನೇಮಕ ಮಾಡಿಕೊಂಡಿದ್ದರು. ಆ ಸಂದರ್ಭದಲ್ಲಿ ಜಗನ್‌ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಆರೋಪ ಕೇಳಿಬಂದಿತ್ತು. ಜಗನ್‌ ಅವರು ಆಂಧ್ರದಲ್ಲಿ 3600 ಕಿ.ಮೀ. ಪಾದಯಾತ್ರೆ ನಡೆಸುವುದಕ್ಕೂ ಪ್ರಶಾಂತ್‌ ಕಿಶೋರ್‌ ತಂಡವೇ ಕಾರಣ ಎನ್ನಲಾಗಿದೆ. ಪಾದಯಾತ್ರೆ ಬಳಿಕ ಜಗನ್‌ಗೆ ಅನುಕೂಲಕರ ಸ್ಥಿತಿ ನಿರ್ಮಾಣವಾಯಿತು ಎಂಬ ವಾದಗಳಿವೆ.

ಚಂದ್ರಬಾಬು ನಾಯ್ಡು 2016ರಲ್ಲೇ ಪ್ರಶಾಂತ್‌ ಕಿಶೋರ್‌ ತಂಡವನ್ನು ಸಂಪರ್ಕಿಸಿದ್ದರು. ಆದರೆ ಒಪ್ಪಂದವೇರ್ಪಟ್ಟಿರಲಿಲ್ಲ ಎಂದು ಮೂಲಗಳು ತಿಳಿಸಿವೆ. ಚುನಾವಣೆ ಸಂದರ್ಭದಲ್ಲಿ ಪ್ರಶಾಂತ್‌ ಕಿಶೋರ್‌ ಅವರನ್ನು ‘ಬಿಹಾರಿ ಡಕಾಯಿತ’ ಎಂದು ನಾಯ್ಡು ಕರೆದಿದ್ದರು. ಈಗ ಅದೇ ವ್ಯಕ್ತಿ ಮೊರೆ ಹೋಗಿರುವುದು ರಾಜಕೀಯ ವಿಪರ್ಯಾಸ.