ಚಂದಾ ಕೊಚ್ಚರ್ ವಿರುದ್ದ ಅಮೆರಿಕಾ ಷೇರು ಪ್ರಾಧಿಕಾರದಿಂದ ವಿಚಾರಣೆ

First Published 10, Jun 2018, 5:10 PM IST
Chanda Kochhar face US regulatory probe
Highlights

ಚಂದಾ ಕೊಚ್ಚರ್‌ಗೆ ಎದುರಾಯ್ತು ಮತ್ತೊಂದು ಸಂಕಷ್ಟ

ಐಸಿಐಸಿಐ ಗೂ ತಟ್ಟಲಿದೆ ತನಿಖೆ ಬಿಸಿ

ಅಮೆರಿಕಾದ ಷೇರು ಮಾರುಕಟ್ಟೆ ಪ್ರಾಧಿಕಾರದಿಂದ ತನಿಖೆ

ಬ್ಯಾಂಕ್ ಮತ್ತು ಕೊಚ್ಚರ್‌ಗೆ ಎಸ್ಇಸಿ ನೊಟೀಸ್
 

ನವದೆಹಲಿ(ಜೂ.10): ಐಸಿಐಸಿಐ ಬ್ಯಾಂಕ್ ಮುಖ್ಯಸ್ಥೆ ಚಂದಾ ಕೊಚ್ಚರ್ ಮತ್ತು ಆಕೆಯ ಕುಟುಂಬದವರ ವಿರುದ್ದ ಭಾರತದಲ್ಲಿ ತನಿಖೆ ನಡೆಯುತ್ತಿರುವಾಗಾಲೇ ಅಮೆರಿಕಾದ ಷೇರು ಮಾರುಕಟ್ಟೆ ಪ್ರಾಧಿಕಾರ(ಎಸ್ಇಸಿ) ಕೂಡ ಅವರ ವಿರುದ್ದ ತನಿಖೆಗೆ ಮುಂದಾಗಿದೆ.

ಮಾರಿಷಸ್ ಸೇರಿದಂತೆ ಕೆಲವು ವಿದೇಶಿ ರಾಷ್ಟ್ರಗಳ ಸಹಾಯವನ್ನು ಭಾರತದ ಪ್ರಾಧಿಕಾರಗಳು ಮತ್ತು ತನಿಖಾ ಸಂಸ್ಥೆಗಳು ಕೋರುತ್ತಿರುವ ಬೆನ್ನಲ್ಲೇ ಅಮೆರಿಕಾದ ಪ್ರಾಧಿಕಾರದ ಕೆಂಗಣ್ಣಿಗೆ ಕೂಡ ಗುರಿಯಾಗಿರುವುದು ವಿಷಯವನ್ನು ಮತ್ತಷ್ಟು ಗಂಭೀರವಾಗಿಸಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಲು ಅಮೆರಿಕಾದ ಪ್ರಾಧಿಕಾರ ನಿರಾಕರಿಸಿದೆ. ಐಸಿಐಸಿಐ ಬ್ಯಾಂಕ್ ಕೂಡ ಇದಕ್ಕೆ ಪ್ರತಿಕ್ರಿಯಿಸಿಲ್ಲ.

ಐಸಿಐಸಿಐ ಬ್ಯಾಂಕ್ ಮೂಲಕ ಅವ್ಯವಹಾರ ನಡೆದಿದೆ ಎಂದು ಕಳೆದ ಮಾರ್ಚ್ ನಲ್ಲಿ ಮೊದಲ ಬಾರಿಗೆ ಆರೋಪ ಕೇಳಿ ಬಂದಿತ್ತು. ಆದರೆ ಈ ಆರೋಪಗಳನ್ನು ಐಸಿಐಸಿಐ ಬ್ಯಾಂಕ್ ನಿರಾಕರಿಸಿತ್ತು. ಆದರೆ ಅಮೆರಿಕಾದ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಆಯೋಗ ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ್ದು, ಈಗಾಗಲೇ ಐಸಿಐಸಿಐ ಬ್ಯಾಂಕ್ ಮತ್ತು ಚಂದಾ ಕೊಚ್ಚರ್ ಗೆ ನೊಟೀಸ್ ನೀಡಿದೆ ಎಂದು ಮೂಲಗಳು ತಿಳಿಸಿವೆ.
 

loader