ಚಾಮರಾಜನಗರ :  ಜಿಲ್ಲೆಯ ಹನೂರು ತಾಲೂಕಿನ ಕಿಚ್ಚುಗುತ್ತಿ ಮಾರಮ್ಮ ದೇವಾಲಯದಲ್ಲಿ ವಿಷ ಪ್ರಸಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಟ್ರಸ್ಟ್‌ ಅಧ್ಯಕ್ಷ ಹಾಗೂ ಸಾಲೂರು ಮಠದ ಕಿರಿಯ ಶ್ರೀ ಇಮ್ಮಡಿ ಮಹದೇವಸ್ವಾಮಿ ಸೇರಿದಂತೆ ನಾಲ್ವರನ್ನು ಕೊಳ್ಳೇಗಾಲ ಪೊಲೀಸರು ಮಂಗಳವಾರ ರಾತ್ರಿ ವಶಕ್ಕೆ ಪಡೆದಿದ್ದಾರೆ. ದೇವಸ್ಥಾನದ ಟ್ರಸ್ಟ್‌ನ ವ್ಯವಸ್ಥಾಪಕ ಮಾದೇಶ್‌ ಅಲಿಯಾಸ್‌ ಮಹದೇವಸ್ವಾಮಿ, ಆತನ ಪತ್ನಿ ಅಂಬಿಕಾ, ಟ್ರಸ್ಟ್‌ ಸದಸ್ಯ ಚಿನ್ನಪ್ಪಿ ಅವರು ವಶಕ್ಕೆ ಪಡೆದ ಇತರ ಮೂವರಾಗಿದ್ದು ತೀವ್ರ ವಿಚಾರಣೆ ಮುಂದುವರಿದಿದೆ.

ಕಿರಿಯ ಸ್ವಾಮೀಜಿ ವಿರುದ್ಧ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆಯಿಂದಲೇ ಅವರನ್ನು ಅಜ್ಞಾತ ಸ್ಥಳವೊಂದರಲ್ಲಿ ಪೊಲೀಸರು ವಿಚಾರಣೆ ನಡೆಸಿದ್ದರು. ನಂತರ ರಾತ್ರಿ ಸಾಲೂರು ಮಠದ ಶಿಕ್ಷಣ ಸಂಸ್ಥೆಯಲ್ಲಿದ್ದ ಮಹದೇವಸ್ವಾಮಿ ಅವರನ್ನು ವಶಕ್ಕೆ ಪಡೆದು ಕೊಳ್ಳೇಗಾಲ ಪೊಲೀಸ್‌ ಠಾಣೆಯಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ. ಅಂಬಿಕಾ ವಿಚಾರಣೆಯೂ ಮಂಗಳವಾರ ರಾತ್ರಿ ಮುಂದುವರಿದಿದೆ.

ಸಂಶಯ ತಪ್ಪಿಸಲು ಆಸ್ಪತ್ರೆಗೆ?: ವಿಷ ಪ್ರಸಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಬರಗೂರು ಮೂಲದ ದೊಡ್ಡಯ್ಯ ಹಾಗೂ ಸುಳ್ವಾಡಿಯ ಬಾಣಸಿಗ ಪುಟ್ಟಸ್ವಾಮಿ ಎಂಬಿಬ್ಬರ ಕೈವಾಡವೂ ಇದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ವಿಷಪ್ರಾಶನವಾದ ಬಳಿಕ ಯಾರಿಗೂ ಸಂಶಯ ಬರದಿರಲೆಂದು ಇವರಿಬ್ಬರೂ ಆಸ್ಪತ್ರೆಗೆ ದಾಖಲಾಗಿದ್ದರು ಎನ್ನಲಾಗಿದೆ.

ವಿಷಪ್ರಸಾದ ತಯಾರು ಮಾಡಲು ದೊಡ್ಡಯ್ಯನಿಗೆ ಬಾಣಸಿಗ ಸುಳ್ವಾಡಿಯ ಪುಟ್ಟಸ್ವಾಮಿ ಎಂಬಾತ ಸಾಥ್‌ ನೀಡಿದ್ದ ಎಂಬ ಆರೋಪವೂ ಕೇಳಿಬಂದಿತ್ತು. ಪುಟ್ಟಸ್ವಾಮಿ ಪುತ್ರಿ ಅನಿತಾ ಸಹ ಸಾವಿಗೀಡಾಗಿದ್ದು, ಈತನ ವಿರುದ್ಧವೂ ಈಗಾಗಲೇ ಎಫ್‌ಐಆರ್‌ ದಾಖಲಾಗಿದೆ. ಈತನನ್ನು ಶನಿವಾರವೇ ವಿಚಾರಣೆಗೆ ಒಳಪಡಿಸಲಾಗಿದ್ದು, ನನ್ನ ಮಗಳನ್ನು ನಾನೇ ವಿಷ ಹಾಕಿ ಕೊಲ್ಲಲು ಸಾಧ್ಯವೇ ಎಂಬ ಪ್ರಶ್ನೆಯನ್ನು ಆತ ಪೊಲೀಸರ ಮತ್ತು ಮಾಧ್ಯಮಗಳ ಮುಂದಿಟ್ಟಿದ್ದ. 

ಪುಟ್ಟಸ್ವಾಮಿ ಜೊತೆಗೆ ದೊಡ್ಡಯ್ಯ ಸಹ ಮೈಸೂರಿನ ಕೆ.ಆರ್‌. ಆಸ್ಪತ್ರೆಗೆ ದಾಖಲಾಗಿದ್ದ. ಈತನ ಮೇಲೆ ಸಂಶಯ ಬಂದು ಪೊಲೀಸರು ಕೊಳ್ಳೇಗಾಲಕ್ಕೆ ಕರೆತಂದು ತೀವ್ರ ತನಿಖೆಗೆ ಒಳಪಡಿಸಿದ್ದಾರೆ. ದೊಡ್ಡಯ್ಯ ಮತ್ತು ಪುಟ್ಟಸ್ವಾಮಿ ಹೊಟ್ಟೆಯಲ್ಲಿ ಯಾವುದೇ ವಿಷಕಾರಿ ಅಂಶ ಇಲ್ಲ ಎಂದು ವೈದ್ಯರು ಸಹ ತಿಳಿಸಿದ್ದು, ಇಬ್ಬರೂ ಸಂಶಯ ಬಾರದಿರಲೆಂದು ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಹೇಳಲಾಗುತ್ತಿದೆ.


ಯಾರು?

1. ಇಮ್ಮಡಿ ಮಹದೇವಸ್ವಾಮಿ: ಮಾರಮ್ಮ ದೇವಸ್ಥಾನ ಟ್ರಸ್ಟ್‌ನ ಅಧ್ಯಕ್ಷರೂ ಆಗಿರುವ ಸಾಲೂರು ಮಠದ ಕಿರಿಯ ಸ್ವಾಮೀಜಿಯಾದ ಇಮ್ಮಡಿ ಮಹದೇವಸ್ವಾಮಿ

2. ಚಿನ್ನಪ್ಪಿ: ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನದ ಟ್ರಸ್ಟ್‌ನ ಸದಸ್ಯರೂ ಆಗಿರುವ ಚಿನ್ನಪ್ಪಿ

3. ಮಾದೇಶ್‌: ದೇವಸ್ಥಾನದ ವ್ಯವಸ್ಥಾಪಕ ಮಾದೇಶ್‌ ಅಲಿಯಾಸ್‌ ಮಹದೇವಸ್ವಾಮಿ

4. ಅಂಬಿಕಾ: ದೇವಸ್ಥಾನದ ವ್ಯವಸ್ಥಾಪಕ ಮಾದೇಶ್‌ ಎಂಬಾತನ ಪತ್ನಿ ಅಂಬಿಕಾ