ಮಂಡ್ಯ[ಮಾ.30]: ನಮ್ಮ ವ್ಯವಹಾರಿಕ ಶಿಸ್ತು ಮತ್ತು ಪಾರದರ್ಶಕತೆ ಮೆಚ್ಚುಗೆ ಸೂಚಿಸಿರುವ ಐಟಿ ಅಧಿಕಾರಿಗಳೇ ನಮಗೆ ಶಹಬಾಸ್‌ ನೀಡಿ ಹೋಗಿದ್ದಾರೆಂದು ಸಚಿವ ಸಿ.ಎಸ್‌.ಪುಟ್ಟರಾಜು ಶುಕ್ರವಾರ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಎಲ್ಲಾ ವ್ಯವಹಾರಗಳೂ ತೆರೆದ ಪುಸ್ತಕ ರೀತಿಯಲ್ಲಿವೆ. 35 ಸಾವಿರ ರು. ಮರಳಿಸಿರುವ ಐಟಿ ಅಧಿಕಾರಿಗಳು ನಿಮ್ಮ ಬಂಡವಾಳವೇ ಇಷ್ಟುಎಂದು ಹೇಳಿ ಹೋಗಿದ್ದಾರೆ. ನಮಗೆ ಶಹಬಾಸ್‌ ಗಿರಿ ನೀಡಿದ ಅಧಿಕಾರಿಗಳಿಗೆ ಹಾಗೂ ಐಟಿ ಅಧಿಕಾರಿಗಳನ್ನು ಛೂ ಬಿಟ್ಟಬಿಜೆಪಿಗೆ ನಮ್ಮ ಪಕ್ಷದ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.

ಐಟಿ ಅಧಿಕಾರಿಗಳು ಗುರುವಾರ ಮಧ್ಯರಾತ್ರಿ 12.30ರವರೆಗೂ ನಮ್ಮ ಅಣ್ಣನ ಮಗನ ಮನೆಯನ್ನು ಜಾಲಾಡಿದರು. ಕೊನೆಯಲ್ಲಿ ನಮ್ಮ ವ್ಯಾವಹಾರಿಕ ಲೆಕ್ಕಾಚಾರದ ಬಗ್ಗೆ ಮೆಚ್ಚುಗೆ ಸೂಚಿಸಿದರು. ಅಲ್ಲದೆ, ಸೋಮವಾರ ವಿಚಾರಣೆಗೆ ಬರುವಂತೆ ನೋಟಿಸ್‌ ನೀಡಿದ್ದಾರೆ. ನೀವಾದರೂ ಬನ್ನಿ ಇಲ್ಲವೇ ನಿಮ್ಮ ಆಡಿಟರ್‌ ಅವರನ್ನಾದರೂ ಕಳುಹಿಸಿ ಎಂದಿದ್ದಾರೆ. ಅವರ ವಿಚಾರಣೆಗೆ ಎಲ್ಲಾ ರೀತಿಯಲ್ಲೂ ಸಹಕರಿಸುತ್ತೇನೆ. ಸರ್ಕಾರಕ್ಕೆ ತೆರಿಗೆ ವಂಚಿಸದೆ ಪ್ರಾಮಾಣಿಕವಾಗಿ ನಡೆದುಕೊಂಡು ಬಂದಿದ್ದೇನೆ. ವ್ಯವಹಾರದಲ್ಲಿ ಪಾರದರ್ಶಕತೆ ಇದೆ. ಹಾಗಾಗಿ ಹೆದರುವ ಅಗತ್ಯವೇ ಇಲ್ಲ ಎಂದು ಹೇಳಿದರು.

ಸಿಕ್ಕ 50 ಸಾವಿರ ಹಿಂದಿರುಗಿಸಿ ಹೋದರು

ನಾನು ಸಣ್ಣ ಗುತ್ತಿಗೆದಾರ, ನನ್ನ ಎಲ್ಲಾ ವ್ಯವಹಾರ ಕಾನೂನುಬದ್ಧವಾಗಿದೆ. ರಾಜಕೀಯ ಪ್ರೇರಿತವಾಗಿ ನನ್ನ ಮನೆ ಮೇಲೆ ದಾಳಿ ಮಾಡಲಾಗಿದೆ ಎಂದು ಅರಕಲಗೂಡು ತಾಲೂಕು ಮಲ್ಲಿಪಟ್ಟಣದ ಗುತ್ತಿಗೆದಾರ ಶಿವಮೂರ್ತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆದಾಯ ತೆರಿಗೆ ಇಲಾಖೆಯವರು ತಮ್ಮ ಮನೆಯ ಮೇಲೆ ದಾಳಿ ನಡೆಸಿದ ಬಗ್ಗೆ ಶುಕ್ರವಾರ ಪ್ರತಿಕ್ರಿಯಿಸಿರುವ ಅವರು, ಗುರುವಾರ ಮುಂಜಾನೆ 6ಕ್ಕೆ 10 ಮಂದಿ ಅಧಿಕಾರಿಗಳು ನಮ್ಮ ಮನೆಗೆ ಹಠಾತ್ತನೆ ಬಂದರು. ನಾವು ಐಟಿ ಇಲಾಖೆಯವರು, ಯಾರೂ ಹೊರಗೆ ಹೋಗಬಾರದು ಎಂದು ಏರಿದ ಧ್ವನಿಯಲ್ಲಿ ಹೇಳಿ, ಮನೆಯನ್ನು ಪರಿಶೀಲನೆ ನಡೆಸಿದರು. ಉದ್ದೇಶಪೂರ್ವಕವಾಗಿ ಬೆಳಗ್ಗೆಯಿಂದ ಸಂಜೆಯವರೆಗೆ ಮಾನಸಿಕ ಹಿಂಸೆ ನೀಡಿ, ನಂತರ ಸಂಜೆ ವಾಪಸ್ ಹೋಗುವಾಗ ಮನೆಯಲ್ಲಿದ್ದ 50೦ ಸಾವಿರ ರು. ನಗದು ವಾಪಸ್ ಕೊಟ್ಟು, ತಪ್ಪಾಯಿತು ಎಂದು ಹೇಳಿ ಹೋದರು. ನಾನು ಜೆಡಿಎಸ್ ಕಾರ್ಯಕರ್ತ ಎಂಬ ಒಂದೇ ಕಾರಣಕ್ಕೆ ಈ ರೀತಿ ಮಾಡಿದ್ದಾರೆ ಎಂದು ದೂರಿದರು.