12 ವರ್ಷ ವಯಸ್ಸಿನ ಒಳಗಿನ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗುವವರಿಗೂ ಇದೇ ರೀತಿಯ ಶಿಕ್ಷೆ ವಿಧಿಸಬೇಕು ಎಂಬ ಪ್ರಸ್ತಾವನೆಗೆ ಸಚಿವ ಸಂಪುಟದ ಅನುಮೋದನೆ ಪಡೆಯಲು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಮುಂದಾಗಿದೆ.
ನವದೆಹಲಿ: 12 ವರ್ಷದೊಳಗಿನ ಬಾಲಕಿಯರ ಮೇಲೆ ಅತ್ಯಾಚಾರವೆಸಗುವವರಿಗೆ ಗಲ್ಲು ಶಿಕ್ಷೆ ವಿಧಿಸುವ ಸುಗ್ರೀವಾಜ್ಞೆ ಜಾರಿಯಾದ ಬೆನ್ನಲ್ಲೇ, 12 ವರ್ಷ ವಯಸ್ಸಿನ ಒಳಗಿನ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗುವವರಿಗೂ ಇದೇ ರೀತಿಯ ಶಿಕ್ಷೆ ವಿಧಿಸಬೇಕು ಎಂಬ ಪ್ರಸ್ತಾವನೆಗೆ ಸಚಿವ ಸಂಪುಟದ ಅನುಮೋದನೆ ಪಡೆಯಲು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಮುಂದಾಗಿದೆ.
ಏ.22ರಂದು ಹೊರಡಿಸಿದ ಸುಗ್ರೀವಾಜ್ಞೆಯಲ್ಲಿ ಅತ್ಯಾಚಾರಕ್ಕೆ ಸಂಬಂಧಿಸಿದ ಇಂಡಿಯನ್ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 376ಕ್ಕೆ ತಿದ್ದುಪಡಿಯನ್ನು ಮಾಡಲಾಗಿತ್ತು. ಅದೇ ರೀತಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಕಾಯ್ದೆ (ಪೋಕ್ಸೋ)ಯ ಸೆಕ್ಷನ್ 42ಕ್ಕೆ ತಿದ್ದುಪಡಿಗಳನ್ನು ಮಾಡಲಾಗಿತ್ತು. ಆದರೆ, ಪೋಕ್ಸೋ ಕಾಯ್ದೆ, ಲಿಂಗ ಆಧಾರಿತವಾಗಿದ್ದು, ಮಹಿಳೆ ಎಂಬ ಪದ ನಮೂದಾಗಿದೆ. ಇದರಿಂದಾಗಿ 12 ವರ್ಷದ ಒಳಗಿನ ಬಾಲಕರ ಅತ್ಯಾಚಾರ ದೋಷಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಅವಕಾಶ ಇಲ್ಲ.
ಇದನ್ನು ಸರಿಪಡಿಸುವ ನಿಟ್ಟಿನಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ಪೋಕ್ಸೋ ಕಾಯ್ದೆಯ ಸೆಕ್ಷನ್ 4, 5 ಮತ್ತು 6ಕ್ಕೆ ತಿದ್ದುಪಡಿ ಮಾಡುವ ಪ್ರಸ್ತಾವನೆಯನ್ನು ಅಂತಿಮಗೊಳಿಸಿದೆ. ತಿದ್ದುಪಡಿಯ ಬಳಿಕ 12 ವರ್ಷದ ಒಳಗಿನ ಬಾಲಕರ ಮೇಲಿನ ಅತ್ಯಾಚಾರಿಗಳಿಗೂ ಗಲ್ಲು ಶಿಕ್ಷೆ ವಿಧಿಸಲು ಅವಕಾಶ ದೊರೆಯಲಿದೆ. ಕಾನೂನು ಸಚಿವಾಲಯ ಸೇರಿದಂತೆ ಸಂಬಂಧ ಪಟ್ಟಇಲಾಖೆಗಳ ಅಭಿಪ್ರಾಯ ಪಡೆಯಲು ಪ್ರಸ್ತಾವನೆಯನ್ನು ಕಳುಹಿಸಿಕೊಡಲಾಗುತ್ತಿದೆ. ಆ ಬಳಿಕ ಅದನ್ನು ಸಂಪುಟದ ಅನುಮೋದನೆಗೆ ಕಳುಹಿಸಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Last Updated 28, Apr 2018, 8:27 AM IST