ಮುಂಬೈ[ಡಿ.05]: 750 ಕೇಜಿ ಈರುಳ್ಳಿ ಮಾರಾಟದಿಂದ ಬಂದ ಕೇವಲ 1064 ರು. ಅನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನಿ ಆರ್ಡರ್‌ ಮಾಡಿದ್ದ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಈ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಸೂಚನೆ ನೀಡಿದೆ.

ಈ ಭಾಗದಲ್ಲಿನ ಈರುಳ್ಳಿ ಬೆಳೆಯ ಸಮಸ್ಯೆಗಳು ಹಾಗೂ ಪ್ರಧಾನಿ ಮೋದಿ ಅವರಿಗೆ ಹಣ ರವಾನೆ ಮಾಡಿದ ರೈತನ ವಾಸ್ತವತೆ ಕುರಿತು ವರದಿ ನೀಡುವಂತೆ ಕೇಂದ್ರ ಸರ್ಕಾರದ ಪರವಾಗಿ ರಾಜ್ಯ ಸರ್ಕಾರ ನಮ್ಮನ್ನು ಕೇಳಿದೆ. ಪ್ರಸ್ತುತ ಸಂದರ್ಭದಲ್ಲಿ ನಾಸಿಕ್‌ ಪ್ರಾಂತ್ಯದಲ್ಲಿ ಈರುಳ್ಳಿ ಉತ್ಪಾದನೆ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ. ಈ ಎಲ್ಲ ವಿಚಾರಗಳ ಬಗ್ಗೆ ಉಲ್ಲೇಖಿಸಲಾದ ಸಂಪೂರ್ಣ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಮುಂದಿನ ಸೂಚನೆಗಾಗಿ ಕಾಯುತ್ತಿದ್ದೇವೆ ಎಂದು ನಾಸಿಕ್‌ ಜಿಲ್ಲಾಧಿಕಾರಿ ಶಶಿಕಾಂತ್‌ ಮ್ಯಾಂಗ್ರುಲೆ ಹೇಳಿದ್ದಾರೆ.

ಇದನ್ನೂ ಓದಿ: ಈರುಳ್ಳಿಗೆ ದಕ್ಕದ ಬೆಲೆ: ಒಬಾಮ ಭೇಟಿಯಾದ ರೈತನಿಂದ ಮೋದಿಗೆ MO!

ಇತ್ತೀಚೆಗಷ್ಟೇ ತನ್ನ ಹೊಲದಲ್ಲಿ ಉತ್ಪಾದನೆಯಾದ 750 ಕೇಜಿ ಈರುಳ್ಳಿ ಮಾರಾಟದಿಂದ ಕೇವಲ 1064 ರು. ಗಳಿಕೆಯಾಗಿದೆ. ಇದು ಕಳೆದ ನಾಲ್ಕು ತಿಂಗಳು ತಾನು ಸುರಿಸಿದ ಬೆವರಿನ ಪ್ರತಿಫಲವಾಗಿದೆ. ಇದರಿಂದ ತನಗೇನೂ ಪ್ರಯೋಜನವಿಲ್ಲ ಎಂದು ಈರುಳ್ಳಿ ಬೆಳೆಗಾರ ಸಂಜಯ್‌ ಸಾಥೆ ಎಂಬುವರು ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೆ, ರೈತರ ಸಮಸ್ಯೆಗಳಿಗೆ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ, 1064 ರು. ಅನ್ನು ಮೋದಿ ಅವರಿಗೆ ಕಳುಹಿಸಿದ್ದರು.