ನವದೆಹಲಿ (ಏ. 24):  ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕ ಇಳಿಸುವುದಿಲ್ಲ  ಎಂದು ಕೇಂದ್ರ ವಿತ್ತ ಸಚಿವಾಲಯ ಸೋಮವಾರ ಸ್ಪಷ್ಟಪಡಿಸಿದೆ. ಈ ಮೂಲಕ ಗಗನಕ್ಕೆ  ಏರುತ್ತಿರುವ ತೈಲ ಬೆಲೆ ಇಳಿಸಬೇಕು ಎಂಬ ಆಗ್ರಹವನ್ನು ಸರ್ಕಾರ ತಳ್ಳಿಹಾಕಿದೆ.
ಇದರ ಬದಲಾಗಿ ರಾಜ್ಯಗಳೇ ಪೆಟ್ರೋಲ್ ಮೇಲಿನ  ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಅಥವಾ ಮಾರಾಟ ತೆರಿಗೆಯನ್ನು ಇಳಿಸಬೇಕು ಎಂಬ ಬಯಕೆಯನ್ನು ಕೇಂದ್ರ ಸರ್ಕಾರ  ವ್ಯಕ್ತಪಡಿಸಿದೆ. ಈ ನಡುವೆ, ಪೆಟ್ರೋಲ್ ದರ ಸೋಮವಾರ 55 ತಿಂಗಳ ಗರಿಷ್ಠವಾಗಿದೆ. ಬೆಂಗಳೂರಲ್ಲಿ ಪೆಟ್ರೋಲ್ ದರ ಲೀಟರ್ ಗೆ   75.58  ರುಪಾಯಿ ಇದ್ದರೆ, ಡೀಸೆಲ್ ದರ 66.76 ರು. ಇತ್ತು.  ಕೇಂದ್ರ ಸರ್ಕಾರವು ಮುಂಗಡಪತ್ರ ಕೊರತೆಯನ್ನು ತಗ್ಗಿಸಲು ಆದ್ಯತೆ ನೀಡುತ್ತಿದೆ. ಇಂಥದ್ದರಲ್ಲಿ ತೈಲ ಬೆಲೆಗಳ ಮೇಲಿನ ಅಬಕಾರಿ ಸುಂಕ ಇಳಿಸುವ ಪ್ರಸ್ತಾಪ ಸ್ವೀಕಾರಾರ್ಹವಲ್ಲ ಎಂದು ವಿತ್ತ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸರ್ಕಾರವು ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ.3.3 ಕ್ಕೆ ಇಳಿಸುವ ಗುರಿ ಹೊಂದಿದೆ. ಕಳೆದ ಸಲ ವಿತ್ತೀಯ ಕೊರತೆ ಶೇ.3.5 ಇತ್ತು.