ಮಂಡ್ಯ  (ಜೂ.13): ಕೆಲ ತಿಂಗಳ ಹಿಂದೆ ಮಂಡ್ಯದಲ್ಲಿ ಭೀಕರ ಬಸ್ ದುರಂತ ಸಂಭವಿಸಿ ಸಾವನ್ನಪ್ಪಿದ 30 ಮಂದಿ ಕುಟುಂಬಕ್ಕೆ ಕೇಂದ್ರದಿಂದ ತಲಾ 2 ಲಕ್ಷ ಪರಿಹಾರ ಘೋಷಿಸಲಾಗಿದೆ. ಇದರ ಕ್ರೆಡಿಟ್ ಮಂಡ್ಯ ನೂತನ ಸಂಸದೆ ಸುಮಲತಾ ಅಂಬರೀಶ್ ತೆಗೆದುಕೊಂಡಿದ್ದಾರೆ ಎಂದು ಶ್ರೀರಂಗಪಟ್ಟ ಶಾಸಕ ರವೀಂದ್ರ ಶ್ರೀಕಂಠಯ್ಯ ಬೆಂಬಲಿಗರು ಅಸಮಾಧಾನ ಹೊರಹಾಕಿದ್ದಾರೆ. 

ಫೇಸ್ ಬುಕ್ ಪೇಜ್ ಗಳಲ್ಲಿ ಸುಮಲತಾ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದು, ಕನಗನಮರಡಿ ದುರಂತ ನಡೆದಾಗ ಸುಮಲತಾ ಇನ್ನು ಅಧಿಕಾರದಲ್ಲಿ ಇರಲಿಲ್ಲ. ಅದು ಹೇಗೆ ಇವರಿಂದ ಸಹಾಯವಾಗಿದೆ ಎಂದು ಪ್ರಶ್ನೆ ಮಾಡಿದ್ದಾರೆ. 

ಬಸ್ ದುರಂತದ ವೇಳೆ ತಕ್ಷಣ ಸ್ಥಳಕ್ಕೆ ತೆರಳಿ ಸಿಎಂ ಕುಮಾರಸ್ವಾಮಿ ಸಮಸ್ಯೆ ಆಲಿಸಿದ್ದರು. ಅಲ್ಲದೇ ಪರಿಹಾರವನ್ನೂ ನೀಡಿ, ಕೇಂದ್ರದಿಂದ ಪರಿಹಾರ ಒದಗಿಸುವ ಭರವಸೆ ನೀಡಿದ್ದರು. ಆದ್ದರಿಂದ ಕೇಂದ್ರದಿಂದ ಘೋಷಣೆಯಾದ ಪರಿಹಾರದ ಕೀರ್ತಿ ಮುಖ್ಯಮಂತ್ರಿ, ಶಾಸಕರು, ಮಾಜಿ ಸಂಸದ ಶಿವರಾಮೇಗೌಡ, ಹಾಗೂ ಜಿಲ್ಲಾಧಿಕಾರಿಯಾಗಿದ್ದ ಮಂಜುಶ್ರೀ ಅವರಿಗೆ ಸಲ್ಲಬೇಕು ಎಂದು ಹೇಳಿದ್ದಾರೆ. 

ಈಗ ಪರಿಹಾರ ಘೋಷಣೆ ಮಾಡಿದ್ದಕ್ಕೆ ಸುಮಲತಾ  ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳಬಾರದೆಂದು ತಿರುಗೇಟು ನೀಡಿದ್ದಾರೆ.  

 

ಮೋದಿ ಭೇಟಿ ಮಾಡಿ ಪರಿಹಾರದ ಹಣ ಬಿಡುಗಡೆ ಮಾಡಿಸಿದ್ದೇನೆಂದು ಜನರನ್ನು ಮೂಢರನ್ನಾಗಿ ಮಾಡಬೇಡಿ. ಮೋದಿ ಸರ್ಕಾರದಿಂದ ಪರಿಹಾರ ಬಿಡುಗಡೆ ಮಾಡಿಸಿದ್ದಕ್ಕೆ ದಾಖಲೆ ನೀಡುತ್ತೇವೆ.  ನೀವು ಪರಿಹಾರ ಮಂಜೂರು ಮಾಡಿಸಿದ್ದಕ್ಕೆ ದಾಖಲೆ ಕೊಡಿ ಎಂದು ಸವಾಲು ಹಾಕಿದ್ದಾರೆ. 

ಕಳೆದ ವರ್ಷ ನವೆಂಬರ್ 23ರಂದು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕನಗನಮರಡಿಯಲ್ಲಿ ಬಸ್ ನಾಲೆಗೆ ಉರುಳಿ ಸಂಭವಿಸಿದ ದುರಂತದಲ್ಲಿ 30 ಮಂದಿ ಸಾವನ್ನಪ್ಪಿದ್ದರು.