ನವದೆಹಲಿ[ಡಿ.10]: ದೇಶಾದ್ಯಂತ ತಾನು ಕೈಗೆತ್ತಿಕೊಳ್ಳುವ ನಿರ್ಮಾಣ ಕಾಮಗಾರಿಗಳಲ್ಲಿ ಮಣ್ಣಿನ ಸುಟ್ಟಇಟ್ಟಿಗೆ ಬಳಸುವುದಕ್ಕೆ ನಿಷೇಧ ಹೇರುವ ಕುರಿತು ಕೇಂದ್ರ ಸರ್ಕಾರ ಗಂಭೀರ ಚಿಂತನೆಯಲ್ಲಿ ತೊಡಗಿದೆ.

ಮಣ್ಣಿನಿಂದ ತಯಾರಿಸಲಾದ ಇಟ್ಟಿಗೆಗಳನ್ನು ಸುಡಲು ಕಲ್ಲಿದ್ದಲು ಬಳಸಲಾಗುತ್ತಿದೆ. ಇದರಿಂದ ರಾಷ್ಟ್ರ ರಾಜಧಾನಿ ವಲಯದಲ್ಲಿ ಈಗಾಗಲೇ ಗಾಳಿ ಹಾಗೂ ನೀರು ಭಾರಿ ಪ್ರಮಾಣದಲ್ಲಿ ಕಲುಷಿತಗೊಂಡಿದೆ. ಮತ್ತೊಂದೆಡೆ ತ್ಯಾಜ್ಯ ವಸ್ತುಗಳನ್ನು ಬಳಸಿಕೊಂಡು ಪರಿಸರಸ್ನೇಹಿಯಾಗಿ ಇಟ್ಟಿಗೆ ತಯಾರಿಸುವ ಸಾಕಷ್ಟುವಿಧಾನಗಳು ಲಭ್ಯ ಇವೆ. ಈ ಹಿನ್ನೆಲೆಯಲ್ಲಿ ತನ್ನ ಕಾಮಗಾರಿಗಳಲ್ಲಿ ಮಣ್ಣಿನ ಸುಟ್ಟಇಟ್ಟಿಗೆಗೆ ನಿಷೇಧ ಹೇರುವ ಕುರಿತು ಸರ್ಕಾರ ಆಲೋಚನೆಯಲ್ಲಿ ಮಗ್ನವಾಗಿದೆ.

ಈ ಸಂಬಂಧ ಕೇಂದ್ರೀಯ ಲೋಕೋಪಯೋಗಿ ಇಲಾಖೆ (ಸಿಪಿಡಬ್ಲ್ಯುಡಿ)ಗೆ ಈಗಾಗಲೇ ಕೇಂದ್ರ ವಸತಿ ಹಾಗೂ ನಗರಾಭಿವೃದ್ಧಿ ಸಚಿವಾಲಯ ನಿರ್ದೇಶನವೊಂದನ್ನು ನೀಡಿದೆ. ಇದರ ಬೆನ್ನಿಗೇ ತನ್ನ ಅಧಿಕಾರಿಗಳಿಗೆ ಡಿ.11ರೊಳಗೆ ಅಭಿಪ್ರಾಯ ಸಲ್ಲಿಸುವಂತೆ ಲೋಕೋಪಯೋಗಿ ಇಲಾಖೆ ಸೂಚನೆ ನೀಡಿದೆ. ಕೇಂದ್ರ ಸರ್ಕಾರದ ಅತಿದೊಡ್ಡ ನಿರ್ಮಾಣ ಸಂಸ್ಥೆಯಾಗಿರುವ ಸಿಪಿಡಬ್ಲ್ಯುಡಿ, ಕೇಂದ್ರ ಸರ್ಕಾರ, ಸ್ವಾಯತ್ತ ಸಂಸ್ಥೆಗಳ ಕಚೇರಿಗಳನ್ನು ನಿರ್ಮಾಣ ಮಾಡುತ್ತದೆ.