ನವದೆಹಲಿ(ಅ. 03): ಕಾವೇರಿ ನದಿ ನೀರು ವಿಚಾರದಲ್ಲಿ ಮೇಲಿಂದ ಮೇಲೆ ಹೊಡೆತ ತಿನ್ನುತ್ತಿರುವ ಕರ್ನಾಟಕಕ್ಕೆ ಇಂದು ಸ್ವಲ್ಪ ಮಟ್ಟಿಗಿನ ನಿರಾಳತೆ ತಂದುಕೊಡುವ ಬೆಳವಣಿಗೆ ನಡೆದಿದೆ. ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡಬೇಕೆನ್ನುವ ಸುಪ್ರೀಂಕೋರ್ಟ್ ಆದೇಶವನ್ನು ಕೇಂದ್ರ ಸರಕಾರ ಪ್ರಶ್ನಿಸಿದೆ. ಮಂಡಳಿ ರಚನೆಗೆ ಆದೇಶಿಸುವ ಅಧಿಕಾರ ಸುಪ್ರೀಂಕೋರ್ಟ್'ಗೆ ಇಲ್ಲ. ಸಂಸತ್ತಿಗೆ ಮಾತ್ರ ಆ ಅಧಿಕಾರ ಇದೆ ಎಂದು ಸುಪ್ರೀಂಕೋರ್ಟ್'ನಲ್ಲಿಂದು ಕೇಂದ್ರದ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ವಾದಿಸಿದ್ದಾರೆ. ಅಲ್ಲದೇ, ಮಂಡಳಿ ರಚನೆಗೆ ಸುಪ್ರೀಂಕೋರ್ಟ್ ಮಾಡಿದ ಆದೇಶವನ್ನು ಮಾರ್ಪಾಡು ಮಾಡುವಂತೆ ಕೇಂದ್ರವು ಅರ್ಜಿ ಸಲ್ಲಿಸಿದೆ. ಇಂದೇ ಈ ಅರ್ಜಿಯ ವಿಚಾರಣೆ ಕೈಗೆತ್ತಿಕೊಳ್ಳಬೇಕೆಂದು ಅಟಾರ್ನಿ ಜನರಲ್ ಮನವಿ ಮಾಡಿಕೊಂಡರಾದರೂ ಸುಪ್ರೀಂಕೋರ್ಟ್ ನಾಳೆ ಮಧ್ಯಾಹ್ನ ವಿಚಾರಣೆ ನಡೆಸಲು ನಿರ್ಧರಿಸಿದೆ.

ಸುಪ್ರೀಂಕೋರ್ಟ್'ಗೆ ಕೇಂದ್ರ ಸರಕಾರ ಸಲ್ಲಿಸಿರುವ ಅಫಿಡವಿಟ್'ನಲ್ಲಿ ಕೆಲವಾರು ಮಹತ್ವದ ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ. ಸರ್ವೋಚ್ಚ ನ್ಯಾಯಾಲಯದ ತ್ರಿಸದಸ್ಯ ಪೀಠ ನೀಡಿದ ಆದೇಶವನ್ನು ದ್ವಿಸದಸ್ಯ ಪೀಠ ತಳ್ಳಿಹಾಕಬಹುದೇ ಎಂದೂ ಕೇಂದ್ರ ಸರಕಾರ ಅನುಮಾನ ವ್ಯಕ್ತಪಡಿಸಿದೆ. ಕಾವೇರಿ ಮೇಲುಸ್ತುವಾರಿ ಸಮಿತಿ ರಚಿಸಲು ತ್ರಿಸದಸ್ಯ ಪೀಠ ಆದೇಶಿಸಿತ್ತು. ಆದರೆ, ದ್ವಿಸದಸ್ಯ ಪೀಠವು ನಿರ್ವಹಣಾ ಮಂಡಳಿ ರಚನೆಗೆ ಹೇಗೆ ಆದೇಶಿಸುತ್ತದೆ ಎಂದು ಅಟಾರ್ನಿ ಜನರಲ್ ಮುಕುಂದ್ ರೋಹ್ಟಗಿಯವರ ವಾದವಾಗಿದೆ.

ಒಟ್ಟಿನಲ್ಲಿ, ಕರ್ನಾಟಕದ ಪಾಲಿಗೆ ಮರಣ ಶಾಸನದಂತಿರುವ ಕಾವೇರಿ ನಿರ್ವಹಣಾ ಮಂಡಳಿಯ ರಚನೆ ತಡೆಯಲು ರಾಜ್ಯದ ಪರ ಕೇಂದ್ರ ನಿಂತಿರುವುದು ಸಮಾಧಾನದ ವಿಷಯವಾಗಿದೆ.

ಮತ್ತೆ ನೀರು ಬಿಡಲು ಆದೇಶ:
ಇದೇ ವೇಳೆ ಕಾವೇರಿ ನೀರು ಬಿಡುವ ವಿಚಾರದಲ್ಲಿ ಕರ್ನಾಟಕವನ್ನು ಸುಪ್ರೀಂಕೋರ್ಟ್ ಮತ್ತೊಮ್ಮೆ ತರಾಟೆಗೆ ತೆಗೆದುಕೊಂಡಿದೆ. ಕೋರ್ಟ್ ಆದೇಶಿಸಿದ್ದರೂ ತಮಿಳುನಾಡಿಗೆ ನೀವ್ಯಾಕೆ ಇನ್ನೂ ನೀರು ಬಿಟ್ಟಿಲ್ಲವೆಂದು ಸುಪ್ರೀಂ ಪೀಠ ಪ್ರಶ್ನಿಸಿದೆ. ಕೋರ್ಟ್ ಆದೇಶ ಪಾಲಿಸದೆಯೇ ಮರುಪರಿಶೀಲನಾ ಅರ್ಜಿ ಹೇಗೆ ಸಲ್ಲಿಸಿದಿರಿ ಎಂದೂ ರಾಜ್ಯಕ್ಕೆ ತಪರಾಕಿ ಹಾಕಿದೆ. ನಾರಿಮನ್ ಅನುಪಸ್ಥಿತಿಯಲ್ಲಿ ರಾಜ್ಯದ ಪರ ವಾದಿಸುತ್ತಿರುವ ರಘುಪತಿಯವರು ಸುಪ್ರೀಂಕೋರ್ಟ್'ನ ಈ ಪ್ರಶ್ನೆಗೆ ನಿರುತ್ತರರಾದರು. ನೀರು ಯಾಕೆ ಬಿಡಲಿಲ್ಲವೆಂದು ಮಂಗಳವಾರ ಮಧ್ಯಾಹ್ನದೊಳಗೆ ಉತ್ತರ ನೀಡಬೇಕೆಂದು ರಾಜ್ಯಕ್ಕೆ ನ್ಯಾಯಾಲಯದ ಗಡುವು ನೀಡಿದೆ. ಜೊತೆಗೆ, ತಮಿಳುನಾಡಿಗೆ ಈಗಲೇ ನೀರು ಬಿಡಬೇಕೆಂದೂ ಆದೇಶ ನೀಡಿದೆ.