ಬೆಂಗಳೂರು [ಅ.05]:  ಪ್ರತಿಪಕ್ಷಗಳ ಮುಖಂಡರು, ಸಾರ್ವಜನಿಕರಷ್ಟೇ ಅಲ್ಲದೆ ಸ್ವಪಕ್ಷೀಯರೂ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ ಬಳಿಕ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರ ರಾಜ್ಯದ ನೆರೆ ಪರಿಹಾರಕ್ಕಾಗಿ 1,200 ಕೋಟಿ ರು. ಬಿಡುಗಡೆ ಮಾಡುವುದಾಗಿ ಘೋಷಿಸಿರುವುದರಿಂದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ತುಸು ನಿಟ್ಟುಸಿರು ಬಿಟ್ಟಿದೆ.

ಇದೇ ತಿಂಗಳ 10ರಿಂದ ಆರಂಭವಾಗಲಿರುವ ವಿಧಾನಮಂಡಲದ ಉಭಯ ಸದನಗಳ ಅಧಿವೇಶನದಲ್ಲಿ ಆಡಳಿತಾರೂಢ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ತಮ್ಮದೇ ರೀತಿಯಲ್ಲಿ ರಣತಂತ್ರ ರೂಪಿಸುವಲ್ಲಿ ನಿರತವಾಗಿದ್ದವು. ಅಧಿವೇಶನ ಹೇಗೆ ಎದುರಿಸುವುದು ಎಂಬ ಚಿಂತೆಯಲ್ಲಿದ್ದ ಯಡಿಯೂರಪ್ಪ ಅವರು ಈಗ ಒಂದಿಷ್ಟುನಿರಾಳರಾಗಿದ್ದಾರೆ. ಪ್ರತಿಪಕ್ಷಗಳನ್ನು ಸಮರ್ಥವಾಗಿಯೇ ಎದುರಿಸಲು ಸಜ್ಜಾಗಲಿದ್ದಾರೆ.

ಕಳೆದ ಹಲವು ದಿನಗಳಿಂದ ರಾಜ್ಯದಲ್ಲಿ ನೆರೆ ಪರಿಹಾರ ಬಿಡುಗಡೆ ಬಗ್ಗೆಯೇ ಪರ- ವಿರೋಧದ ಹೇಳಿಕೆಗಳು, ಆರೋಪ-ಪ್ರತ್ಯಾರೋಪಗಳು, ವಾದ-ಪ್ರತಿವಾದಗಳು ಕೇಳಿಬರುತ್ತಿದ್ದವು. ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷದ ಸರ್ಕಾರಗಳು ಅಸ್ತಿತ್ವದಲ್ಲಿ ಇರದೇ ಇದ್ದಿದ್ದರೆ ಈ ಚರ್ಚೆ ತಾರಕಕ್ಕೇರುತ್ತಿರಲಿಲ್ಲ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರ ನಡೆಸುತ್ತಿರುವುದರಿಂದ ಸಹಜವಾಗಿಯೇ ಜನರು ತಕ್ಷಣ ಪರಿಹಾರ ಬಿಡುಗಡೆಯಾಗುವ ನಿರೀಕ್ಷೆ ಹೊಂದಿದ್ದರು. ಆದರೆ, ಯಾವಾಗ ಆ ನಿರೀಕ್ಷೆ ಹುಸಿಯಾಗತೊಡಗಿತೊ ಜನರ ಸಹನೆಯ ಕಟ್ಟೆಯಲಾರಂಭಿಸಿತು. ಸಾಮಾಜಿಕ ಜಾಲತಾಣಗಳಲ್ಲಿ ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರದ ಗೃಹ ಸಚಿವ ಅಮಿತ್‌ ಶಾ ವಿರುದ್ಧ ಟೀಕೆಗಳ ಸುರಿಮಳೆಯೇ ಶುರುವಾಯಿತು.

ಅತ್ತ ದರಿ ಇತ್ತ ಪುಲಿ:  ಬಿಜೆಪಿ ಸರ್ಕಾರಕ್ಕೆ ಮತ್ತು ಪಕ್ಷಕ್ಕೆ ಅಕ್ಷರಶಃ ಈ ಸನ್ನಿವೇಶ ಅತ್ತ ದರಿ ಇತ್ತ ಪುಲಿ ಎಂಬಂತಾಗಿತ್ತು. ನೆರೆ ಪರಿಹಾರ ನೀಡಿಲ್ಲ ಎಂದು ಕೇಂದ್ರ ಸರ್ಕಾರವನ್ನು ದೂರುವಂತಿಲ್ಲ. ಪರಿಹಾರ ನೀಡದಿರುವುದನ್ನು ಜನರ ಬಳಿ ಸಮರ್ಥಿಸಿಕೊಳ್ಳುವಂತೆಯೂ ಇರಲಿಲ್ಲ.

ಬ್ರೇಕಿಂಗ್: ಅಂತೂ ಇಂತು ರಾಜ್ಯಕ್ಕೆ ನೆರೆ ಪರಿಹಾರ ಘೋಷಿಸಿದ ಕೇಂದ್ರ ಸರ್ಕಾರ...

ಮುಖ್ಯಮಂತ್ರಿ ಯಡಿಯೂರಪ್ಪ ಅವರು ‘ಇನ್ನೆರಡು ದಿನಗಳಲ್ಲಿ ಕೇಂದ್ರದಿಂದ ನೆರೆ ಪರಿಹಾರ ಬಿಡುಗಡೆಯಾಗಲಿದೆ’ ಎಂಬ ಹೇಳಿಕೆಗಳನ್ನು ಕಳೆದ ಹಲವು ದಿನಗಳಿಂದ ಪುನರುಚ್ಚರಿಸಿ ಸುಸ್ತಾಗಿದ್ದರು. ಕೊನೆಗೆ ಯಡಿಯೂರಪ್ಪ ಅವರ ಹೇಳಿಕೆಯನ್ನು ಜನರು ಲೇವಡಿ ಮಾಡುವ ಹಂತವೂ ಬಂದಿತ್ತು.

ಯಡಿಯೂರಪ್ಪ ಸಂಪುಟದ ಸಚಿವರು, ಆಡಳಿತಾರೂಢ ಬಿಜೆಪಿ ಸಂಸದರು ಹಾಗೂ ಶಾಸಕರಿಗೆ ರಾಜ್ಯದ ವಿವಿಧ ಪ್ರದೇಶಗಳಿಗೆ ಅದರಲ್ಲೂ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡುವುದೇ ದುಸ್ತರವಾಗಿತ್ತು. ಯಾರೊಬ್ಬರಿಗೂ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಮನವಿ ಸಲ್ಲಿಸುವ ಅಥವಾ ಬಹಿರಂಗವಾಗಿ ಆಗ್ರಹಿಸುವ ಸ್ಥೈರ್ಯ ಪ್ರದರ್ಶಿಸಲು ಸಜ್ಜಾಗಲಿಲ್ಲ. ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಧೈರ್ಯ ಮಾಡಿ ಹೇಳಿಕೆ ನೀಡಿದರೂ ಅಂತಿಮವಾಗಿ ಪಕ್ಷದ ಶಿಸ್ತು ಸಮಿತಿಯಿಂದ ನೋಟಿಸ್‌ ಪಡೆದುಕೊಳ್ಳಬೇಕಾಯಿತು.