ಬೆಂಗಳೂರು/ನವದೆಹಲಿ, [ಅ.04]: ಕೇಂದ್ರ ಸರ್ಕಾರ ಅಂತೂ ಇಂತೂ ಕೊನೆಗೂ ರಾಜ್ಯಕ್ಕೆ ನೆರೆ ಪರಿಹಾರದ ಹಣ ಘೋಷಿಸಿದೆ. ಬಿಹಾರದ ಜತೆ ಕರ್ನಾಟಕಕ್ಕೂ ನೆರೆ ಪರಿಹಾರ ಹಣವನ್ನು ಇಂದು  [ಶುಕ್ರವಾರ] ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.

ನೆರೆ ಪರಿಹಾರ ಬಿಡುಗಡೆ ಮಾಡಿಸಿ ಎಂದಿದ್ದಕ್ಕೆ ಯತ್ನಾಳ್​ಗೆ ಸಂಕಷ್ಟ

ಪ್ರವಾಹ ಪೀಡಿತ ಬಿಹಾರ ಮತ್ತು ಕರ್ನಾಟಕ ರಾಜ್ಯಗಳಿಗೆ ಮಧ್ಯಂತರ ಪರಿಹಾರ ಹಣವನ್ನಾಗಿ ಬಿಹಾರಕ್ಕೆ 400 ಕೋಟಿ ರೂ. ಮತ್ತು ಕರ್ನಾಟಕಕ್ಕೆ 1200 ಕೋಟಿ ರೂ. ಅನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಶುಕ್ರವಾರ ಅನುಮತಿ ನೀಡಿದೆ.

ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ (ಎನ್​ಡಿಆರ್​ಎಫ್​) ಒಟ್ಟು 1813.75 ಕೋಟಿ ರೂ. ಮಧ್ಯಂತರ ಹಣವನ್ನು ಬಿಡುಗಡೆ ಮಾಡಲಾಗಿದೆ. ಅದರಲ್ಲಿ, ಬಿಹಾರಕ್ಕೆ 400 ಕೋಟಿ ಹಣ ಮಂಜೂರು ಮಾಡಿದರೆ, ಕರ್ನಾಟಕ ನೆರೆ ಪರಿಹಾರಕ್ಕೆ 1200 ಕೋಟಿ ನೀಡಲಾಗಿದೆ.

ರಾಜ್ಯದಲ್ಲಿ ಪ್ರವಾಹದಿಂದ  ಒಟ್ಟಾರೆ 38 ಸಾವಿರ ಕೋಟಿ ರೂ. ನಷ್ಟ ಆಗಿದೆ ಎಂದು ಕೇಂದ್ರಕ್ಕೆ ವರದಿ ನೀಡಲಾಗಿತ್ತು. ಈ ಪೈಕಿ ತುರ್ತಾಗಿ 3800 ಕೋಟಿ ರೂ. ಪರಿಹಾರ ನೀಡುವಂತೆ ರಾಜ್ಯ ಸರ್ಕಾರ ಮನವಿ ಮಾಡಿತ್ತು.  ಆದ್ರೆ ಕೇಂದ್ರ ಸರ್ಕಾರ ಸದ್ಯಕ್ಕೆ 1200 ಕೋಟಿ ರೂ. ಮಧ್ಯಂತರ ಪರಿಹಾರವನ್ನು ಮಾತ್ರ ಘೋಷಣೆ ಮಾಡಿದೆ.

ಬಿಹಾರ ಪ್ರವಾಹದ ಬಗ್ಗೆ ಪ್ರಧಾನಿ ಟ್ವೀಟ್​ ಮಾಡಿದ ಬಳಿಕ ರಾಜ್ಯದ ಕೆಂಗಣ್ಣಿಗೆ ಬಿಜೆಪಿ ಗುರಿಯಾಗಿತ್ತು. ರಾಜ್ಯದ ವಿರುದ್ಧ ಬಿಜೆಪಿ ಮಲತಾಯಿ ಧೋರಣೆ ತೋರುತ್ತಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ನಡುವೆ ರಾಜ್ಯ ಸರ್ಕಾರ ಪ್ರವಾಹದ ನಷ್ಟ ಕುರಿತು ಸಲ್ಲಿಸಿದ್ದ ವರದಿಯನ್ನು ಇಂದು ಬೆಳಗ್ಗೆ ತಿರಸ್ಕರಿಸಿ ಮತ್ತೊಮ್ಮೆ ಪರಿಶೀಲಿಸಿ ವರದಿ ಸಲ್ಲಿಸಿ ಎಂದು ಹೇಳಿತ್ತು. ಇದು ರಾಜ್ಯದ ಜನರ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು.

ಇನ್ನೇನು ಜನರು ಬೀದಿಗಿಳಿಯಲು ಸಜ್ಜಾಗುತ್ತಿದ್ದಂತೆಯೇ ಕೇಂದ್ರ ಸರ್ಕಾರ ಮಧ್ಯಂತರ ಪರಿಹಾರ ಘೋಷಣೆ ಮಾಡಿ ಬೀಸೋ ದೊಣ್ಣೆಯಿಂದ ಪಾರಾಗಿದೆ.