Asianet Suvarna News Asianet Suvarna News

ಕೇಂದ್ರದ ಪುರುಷ ನೌಕರರಿಗೂ 2 ವರ್ಷದ ಶಿಶುಪಾಲನೆ ರಜೆ!

ಕೇಂದ್ರ ಸರ್ಕಾರದ ಮಹತ್ವದ ಕೊಡುಗೆ| ಮೊದಲ 365 ದಿನ ಸಂಪೂರ್ಣ ವೇತನ ಸಹಿತ ರಜೆ| ನಂತರದ 365 ದಿನ ಶೇ.20ರಷ್ಟುವೇತನ ಕಡಿತ| ನೌಕರ ಏಕಾಂಗಿ ಪಾಲಕನಾಗಿದ್ದರೆ ಈ ಸವಲತ್ತು

central government single parent employees get 730 days of paid paternity leave
Author
New Delhi, First Published Dec 29, 2018, 10:00 AM IST
  • Facebook
  • Twitter
  • Whatsapp

ನವದೆಹಲಿ[ಡಿ.29]: ಕೇಂದ್ರ ಸರ್ಕಾರದ ನೌಕರರಾಗಿದ್ದುಕೊಂಡು ಮಗುವಿನ ‘ಏಕಾಂಗಿ ಪಾಲಕ’ರಾಗಿದ್ದರೆ ಅಂಥವರಿಗೆ 730 ದಿನಗಳ ಅವಧಿಯ (2 ವರ್ಷದ) ‘ಶಿಶುಪಾಲನಾ ರಜೆ’ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈವರೆಗೆ ಕೇವಲ ಮಹಿಳಾ ನೌಕರರರಿಗೆ ಸೀಮಿತವಾಗಿದ್ದ ಈ ಸವಲತ್ತು ಈಗ ಪುರುಷ ಪಾಲಕರಿಗೂ ಲಭಿಸಲಿದೆ. ಪುರುಷ ಏಕಾಂಗಿ ನೌಕರರನ್ನು ‘ಅವಿವಾಹಿತ, ವಿಧುರ ಹಾಗೂ ವಿಚ್ಛೇದಿತ ಪುರುಷ ನೌಕರ’ ಎಂದು ಗುರುತಿಸಲಾಗಿದ್ದು, ತಮ್ಮ ಇಡೀ ಸೇವಾವಧಿಯಲ್ಲಿ 730 ದಿನಗಳವರೆಗೆ ವೇತನ ಸಹಿತ ಶಿಶುಪಾಲನಾ ರಜೆ ಪಡೆಯಲು ಅವಕಾಶ ನೀಡಲಾಗಿದೆ.

ಈ ರೀತಿಯ ಏಕಾಂಗಿ ಪುರುಷ ನೌಕರರ ಸಂಖ್ಯೆ ಕಮ್ಮಿ ಇರಬಹುದಾದರೂ, ಶಿಶುಪಾಲನೆಗೆ ಸಂಬಂಧಿಸಿದಂತೆ ಕೇವಲ ಮಹಿಳೆಯರಿಗೆ ಮಾತ್ರ ಆದ್ಯತೆ ಎಂಬ ನೀತಿಯನ್ನು ಸರ್ಕಾರ ಬದಲಿಸಿದಂತಿದೆ.

ಇದೇ ವೇಳೆ, ಮಹಿಳಾ ಕೇಂದ್ರ ಸರ್ಕಾರಿ ನೌಕರರಿಗೆ ಇಬ್ಬರು ಮಕ್ಕಳವರೆಗೆ 2 ವರ್ಷದ ಶಿಶುಪಾಲನಾ ರಜೆ ಪಡೆಯಲು ಅವಕಾಶವಿದೆ. ಒಂದು ವರ್ಷದಲ್ಲಿ 3 ಹಂತಗಳಲ್ಲಿ ಈ ರಜೆ ಪಡೆಯಲು ಈವರೆಗೆ ಆಸ್ಪದವಿತ್ತು. ಇದನ್ನು ಈಗ 6 ಹಂತಗಳಿಗೆ ವಿಸ್ತರಿಸಲಾಗಿದೆ. ಈಗಾಗಲೇ ಮಹಿಳೆಯರು 180 ದಿವಸಗಳ ಕಾಲದ ವೇತನ ಸಹಿತ ಹೆರಿಗೆ ರಜೆ ಪಡೆಯುತ್ತಿದ್ದಾರೆ ಹಾಗೂ ಪುರುಷರು 15 ದಿವಸಗಳ ವೇತನ ಸಹಿತ ರಜೆ ಪಡೆಯುತ್ತಿದ್ದಾರೆ.

ದ್ವಿತೀಯಾರ್ಧದಲ್ಲಿ ಶೇ.20 ವೇತನ ಕಡಿತ:

ಮಹಿಳಾ ನೌಕರರು ಹಾಗೂ ಏಕಾಂಗಿ ಪುರುಷ ನೌಕರರು 730 ದಿವಸಗಳ ಅವಧಿಯ ಶಿಶುಪಾಲನಾ ರಜೆಗೆ ಅರ್ಹರಾಗಲಿದ್ದಾರೆ. ಗರಿಷ್ಠ ಎರಡು ಮಕ್ಕಳವರೆಗೆ ಈ ಪ್ರಯೋಜನ ಲಭಿಸಲಿದೆ. ಅನಾರೋಗ್ಯ, ಶಿಕ್ಷಣ ಅಥವಾ ಇತರ ಅವಶ್ಯಕತೆಗಳು ಬಂದಾಗ ಈ ರಜೆ ಪಡೆಯಬಹುದು.

ಏಳನೇ ವೇತನ ಆಯೋಗದ ಶಿಫಾರಸಿನ ಪ್ರಕಾರ ಮೊದಲ 365 ದಿನಗಳ ಅವಧಿಯಲ್ಲಿ ನೌಕರರು ಸಂಪೂರ್ಣ ವೇತನ ಸಹಿತ ರಜೆ ಪಡೆಯಲಿದ್ದಾರೆ. ಆದರೆ ಎರಡನೇ ಹಂತದ 365 ದಿನಗಳಲ್ಲಿ ಶೇ.20ರಷ್ಟುವೇತನ ಕಡಿತವಾಗಲಿದೆ ಎಂದು ಈ ಕುರಿತು ಆದೇಶ ಹೊರಡಿಸಿಸಿರುವ ಕೇಂದ್ರ ಸಿಬ್ಬಂದಿ ಸಚಿವಾಲಯ ಹೇಳಿದೆ.

Follow Us:
Download App:
  • android
  • ios