ಕೇಳಿದ್ದು 3 ಸಾವಿರ ಕೋಟಿಗೂ ಜಾಸ್ತಿ ಆದರೆ, ಸಿಕ್ಕಿದ್ದು ಮಾತ್ರ ಬಿಡಿಗಾಸು. ಅಂದರೆ 700 ಕೋಟಿ ರೂಪಾಯಿ ಮಾತ್ರ. ಇದು ರಾಜ್ಯ ಬೆಳೆ ನಷ್ಟ ಪರಿಹಾರವಾಗಿ ಕೇಂದ್ರ ಸರ್ಕಾರ ಘೋಷಿಸಿರುವ ಪರಿಹಾರದ ಹಣ. ಈ ಕುರಿತ ಸಂಪೂರ್ಣ ವಿವರ ರಿಪೋರ್ಟ್​ ಇಲ್ಲಿದೆ..

ನವದೆಹಲಿ(ಜೂ.30): ಕೇಳಿದ್ದು 3 ಸಾವಿರ ಕೋಟಿಗೂ ಜಾಸ್ತಿ ಆದರೆ, ಸಿಕ್ಕಿದ್ದು ಮಾತ್ರ ಬಿಡಿಗಾಸು. ಅಂದರೆ 700 ಕೋಟಿ ರೂಪಾಯಿ ಮಾತ್ರ. ಇದು ರಾಜ್ಯ ಬೆಳೆ ನಷ್ಟ ಪರಿಹಾರವಾಗಿ ಕೇಂದ್ರ ಸರ್ಕಾರ ಘೋಷಿಸಿರುವ ಪರಿಹಾರದ ಹಣ. ಈ ಕುರಿತ ಸಂಪೂರ್ಣ ವಿವರ ರಿಪೋರ್ಟ್​ ಇಲ್ಲಿದೆ.

ಕರ್ನಾಟಕದ ಹಲವು ಭಾಗಗಲ್ಲಿ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ. ಹಿಂಗಾರು ಬೆಳೆ ನಷ್ಟದ ಮಾತೇ ಕೇಳುವ ಹಾಗಿಲ್ಲ. ಹಿಂಗಾರಲ್ಲಿ ಆಗಿರುವ ನಷ್ಟದ ಪರಿಹಾರಕ್ಕಾಗಿ 795.54 ಕೋಟಿ ಹಣವನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿದೆ. ದೆಹಲಿಯಲ್ಲಿ ನಡೆದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯ ಉನ್ನತ ಮಟ್ಟದ ಸಚಿವರ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಹಿಂಗಾರು ಬೆಳೆಗೆ 3320 ಕೋಟಿ ರೂಪಾಯಿ ಪರಿಹಾರ ಕೊಡುವಂತೆ ರಾಜ್ಯ ಸರ್ಕಾರ ಕಳೆದ ೪ ತಿಂಗಳಿನಿಂದ ಕೇಂದ್ರ ಗೃಹ ಇಲಾಖೆಗೆ ಮನವಿ ಸಲ್ಲಿಸಿತ್ತು. ಈ ಸಂಬಂಧ ನಾರ್ತ್​ ಬ್ಲಾಕ್​ನಲ್ಲಿ ಸಭೆ ಸೇರಿದ್ದ ಉನ್ನತ ಮಟ್ಟದ ಸಚಿವರ ಸಮಿತಿ, ಕರ್ನಾಟಕಕ್ಕೆ ಅಂದಾಜು 800 ಕೋಟಿ ಹಣ ಮಂಜೂರು ಮಾಡುವ ತೀರ್ಮಾನ ಕೈಗೊಂಡಿದೆ. ರಾಜ್ಯ ಸರ್ಕಾರ ಕೇಳಿದ್ದ 25 ಪ್ರತಿಶತದಷ್ಟು ಹಣವನ್ನು ಕೇಂದ್ರ ಮಂಜೂರು ಮಾಡಿದೆ.

ಇವತ್ತಿನ ಸಭೆಗೂ ಮುನ್ನ ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರನ್ನ ರಾಜ್ಯದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಮತ್ತು ಕೃಷಿ ಸಚಿವ ಕೃಷ್ಣ ಭೈರೇಗೌಡ ಕೇಂದ್ರ ಭೇಟಿಯಾಗಿದ್ದರು. ಈ ವೇಳೆ ಸರ್ಕಾರ ಕೇವಲ ಹಣವನ್ನ ಮಂಜೂರು ಮಾಡಿದರೆ ಸಾಲದು. ಈ ಕೂಡಲೇ ಬಿಡುಗಡೆ ಮಾಡಬೇಕು ಅಂತ ರಾಜ್ಯದ ಸಂಸದರು ಒತ್ತಡ ಹೇರಬೇಕು ಅಂತ ಮನವಿ ಮಾಡಿದ್ದರು.

ಒಟ್ಟಾರೆ ಮುಂಗಾರು ಹಾನಿಗಾಗಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಬಳಿ೪೭೦೨ ಕೋಟಿ ಪರಿಹಾರ ಕೇಳಿತ್ತು. ಆದರೆ ಕೇಂದ್ರ 1782.44 ಕೋಟಿ ಬಿಡುಗಡೆ ಮಾಡಿತ್ತು. ಈಗ ಹಿಂಗಾರು ಪರಿಹಾರಕ್ಕಾಗಿ ರಾಜ್ಯ ಕೇಳಿದ 3320 ಕೋಟಿ ಹಣದಲ್ಲಿ ಕೇವಲ 795.54 ಕೋಟಿ ಬಿಡುಗಡೆಯಾಗಿದೆ..

ವರದಿ: ಪ್ರಶಾಂತ್ ನಾತು, ಸುವರ್ಣ ನ್ಯೂಸ್, ನವದೆಹಲಿ