"ಭಾರತ ಈ ಮೊದಲು ಜಗತ್ತಿನ ಜ್ಞಾನ ಕೇಂದ್ರವಾಗಿದ್ದು, ಶಿಕ್ಷಣ ವ್ಯವಸ್ಥೆ ನಮ್ಮ ಶಕ್ತಿಯಾಗಿತ್ತು. ಈ ಶಕ್ತಿಯನ್ನು ಕಾಲ ಕಾಲಕ್ಕೆ ವ್ಯವಸ್ಥಿತವಾಗಿ ಕುಗ್ಗಿಸುತ್ತ ಬರಲಾಯಿತು. ಇಂದು ವಿಶ್ವದ ಅತ್ಯುತ್ತಮ ಗುಣಮಟ್ಟದ ವಿವಿಗಳ ಪಟ್ಟಿಯಲ್ಲಿ ಭಾರತದ ಒಂದೂ ವಿವಿ ಇಲ್ಲ."
ಬೆಂಗಳೂರು: ದೇಶದಲ್ಲಿ ಒಟ್ಟು 20 ವಿಶ್ವದರ್ಜೆಯ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವುದಾಗಿ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಘೋಷಿಸಿದ್ದಾರೆ. ಈ ವಿವಿಗಳ ಆರಂಭದ ಕುರಿತಂತೆ ಮಾರ್ಗದರ್ಶಿ ಸೂತ್ರಗಳು ಸಿದ್ಧಗೊಂಡಿವೆ ಎಂದೂ ಅವರು ತಿಳಿಸಿದ್ದಾರೆ.
ಬೆಂಗಳೂರಿನ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ನಡೆಯುತ್ತಿರುವ ಪ್ರವಾಸಿ ಭಾರತೀಯ ದಿವಸದ ಮೊದಲ ದಿನದ ವಿಶೇಷ ಯುವಪ್ರವಾಸಿ ಭಾರತೀಯ ದಿವಸ್'ನಲ್ಲಿ ಆಯೋಜಿಸಲಾಗಿದ್ದ "ಭಾರತದ ಯುವರಾಯಭಾರಿಗಳ ಪೋಷಣೆ- ಹೊರದೇಶದ ಭಾರತೀಯ ವಿದ್ಯಾರ್ಥಿಗಳು-ಭಾರತದಲ್ಲಿರುವ ಅನಿವಾಸಿ ಮತ್ತು ವಿದೇಶಿ ವಿದ್ಯಾರ್ಥಿಗಳು"ಗಳು ಎಂಬ ಗೋಷ್ಠಿಯಲ್ಲಿ ಬಂದ ಹತ್ತಾರು ಸಲಹೆಗಳ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡಿದ್ದಾರೆ.
ಭಾರತ ಈ ಮೊದಲು ಜಗತ್ತಿನ ಜ್ಞಾನ ಕೇಂದ್ರವಾಗಿದ್ದು, ಶಿಕ್ಷಣ ವ್ಯವಸ್ಥೆ ನಮ್ಮ ಶಕ್ತಿಯಾಗಿತ್ತು. ಈ ಶಕ್ತಿಯನ್ನು ಕಾಲ ಕಾಲಕ್ಕೆ ವ್ಯವಸ್ಥಿತವಾಗಿ ಕುಗ್ಗಿಸುತ್ತ ಬರಲಾಯಿತು. ಇಂದು ವಿಶ್ವದ ಅತ್ಯುತ್ತಮ ಗುಣಮಟ್ಟದ ವಿವಿಗಳ ಪಟ್ಟಿಯಲ್ಲಿ ಭಾರತದ ಒಂದೂ ವಿವಿ ಇಲ್ಲ. ಹೀಗಾಗಿ ಭಾರತದಲ್ಲಿ ವಿಶ್ವ ದರ್ಜೆಯ 20 ವಿವಿಗಳನ್ನು ಆರಂಭಿಸಲಾಗುವುದು. 10 ಖಾಸಗಿ ಮತ್ತು 10 ಸರ್ಕಾರಿ ಸ್ವಾಮ್ಯದ ವಿವಿಗಳು ವಿಶ್ವದ ಅತ್ಯುತ್ತಮ ವಿವಿಗಳ ಸಾಲಿನಲ್ಲಿ ನಿಲ್ಲಲಿದೆ ಎಂದರು. ಉತ್ತಮ ವಿವಿಗಳಿರುವ ದೇಶ ಮಾತ್ರ ಅಭಿವೃದ್ಧಿ ಸಾಧಿಸಬಲ್ಲದು. ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬಲ್ಲದು ಎಂದು ಜಾವಡೇಕರ್ ಅಭಿಪ್ರಾಯಪಟ್ಟರು.
ದಾಖಲೆಗಳ ಡಿಜಿಟಲೀಕರಣ: ವಿದೇಶಕ್ಕೆ ವ್ಯಾಸಂಗಕ್ಕೆ ತೆರಳುವ ಭಾರತೀಯ ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲೆಗಳ ಕ್ರೋಢೀಕರಣ ಮತ್ತು ಮಾನ್ಯತೆ ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಮೂರರಿಂದ ನಾಲ್ಕು ತಿಂಗಳ ಕಾಲ ತಗಲುತ್ತಿದೆ ಎಂದು ಗೋಷ್ಠಿಯಲ್ಲಿ ವ್ಯಕ್ತವಾದ ಅಭಿಪ್ರಾಯದ ಕುರಿತು ಪ್ರತಿಕ್ರಿಯಿಸಿದ ಸಚಿವರು, ವಿದ್ಯಾರ್ಥಿಗಳ ಎಲ್ಲ ದಾಖಲೆಗಳನ್ನು ಡಿಜಿಟಲೀಕರಿಸುವ ರಾಷ್ಟ್ರೀಯ ಅಕಡೆಮಿಕ್ ಡಿಪಾಸಿಟ್ ಯೋಜನೆ ಮೂರ್ನಾಲ್ಕು ತಿಂಗಳಲ್ಲೇ ಆರಂಭಗೊಳ್ಳಲಿದೆ ಎಂದರು. ಎಲ್ಲ ವಿದ್ಯಾರ್ಥಿಗಳ ಶಿಕ್ಷಣ, ಅವರ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ ಸೇರಿದಂತೆ ಎಲ್ಲ ದಾಖಲೆಗಳು ಬೆರಳ ತುದಿಯಲ್ಲೇ ಸಿಗುವಂತಾಗಲಿದೆ. ಕೇವಲ ಒಂದು ದಿನದಲ್ಲೇ ಅವರ ಎಲ್ಲ ದಾಖಲೆಗಳ ದೃಢೀಕರಣವೂ ಆಗುವ ವ್ಯವಸ್ಥೆಯಾಗಲಿದ್ದು ವಿದೇಶಕ್ಕೆ ವ್ಯಾಸಂಗಕ್ಕೆ ತೆರಳಬೇಕಾದ ವಿದ್ಯಾರ್ಥಿಗಳ ಬಹುದೊಡ್ಡ ಸಮಸ್ಯೆ ನಿವಾರಣೆ ಆಗಲಿದೆ ಎಂದು ಹೇಳಿದರು.
ರೂ.1 ಲಕ್ಷ ವಿದ್ಯಾರ್ಥಿ ವೇತನ: ವಿದೇಶದಲ್ಲಿ ಉನ್ನತ ಮಟ್ಟದ ಶೋಧನೆ, ಸಂಶೋಧನೆಗಳಲ್ಲಿ ತೊಡಗುವ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಒಂದು ಲಕ್ಷ ರು. ವಿದ್ಯಾರ್ಥಿ ವೇತನ ನೀಡಲಾಗುವುದು. ಈ ಉದ್ದೇಶಕ್ಕಾಗಿಯೇ 3 ಬಿಲಿಯನ್ ಡಾಲರ್ ಮೀಸಲಿರಿಸಲಾಗಿದೆ ಎಂದು ಜಾವಡೇಕರ್ ತಿಳಿಸಿದರು. ವಿದೇಶಕ್ಕೆ ವ್ಯಾಸಂಗಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ಅನೇಕ ಏಜೆಂಟರು, ಏಜೆನ್ಸಿಗಳು ವಂಚಿಸುತ್ತಿವೆ. ಹೀಗಾಗಿ ಇಂತಹ ಸಂಸ್ಥೆಗಳಿಗೆ ಅಧಿಕೃತ ಮಾನ್ಯತೆ ನೀಡಬೇಕಿದೆ. ಈ ಏಜೆನ್ಸಿಗಳ ಮೇಲೆ ನಿಯಂತ್ರಣ ಹೊಂದುವ ವ್ಯವಸ್ಥೆ ರೂಪಿತವಾಗಬೇಕಿದೆ. ಭಾರತೀಯ ಶಿಕ್ಷಣ ವ್ಯವಸ್ಥೆ ವಿದೇಶಿ ಶಿಕ್ಷಣ ವ್ಯವಸ್ಥೆಗೆ ಹೊಂದಾಣಿಕೆಯಾಗುವಂತೆ ಕ್ಯಾಲೆಂಡರ್ ರೂಪಿಸಬೇಕಿದೆ. ಇಲ್ಲಿನ ಗ್ರೇಡಿಂಗ್/ರಾರಯಂಕಿಂಗ್ ವ್ಯವಸ್ಥೆಯೂ ಅಲ್ಲಿನ ವ್ಯವಸ್ಥೆಗೆ ಸರಿಹೊಂದುವಂತೆ ಅದೇ ಮಟ್ಟದಲ್ಲಿ ನೀಡಬೇಕಿದೆ ಎಂದರು.
ಭಾರತದಲ್ಲಿ ವಿದೇಶಿ ವಿದ್ಯಾರ್ಥಿಗಳಿಗೆ ಕೆಲವೊಂದು ಶಿಕ್ಷಣ ಸಂಸ್ಥೆಗಳಲ್ಲಿ ಅತಿ ಹೆಚ್ಚು ಶುಲ್ಕ ವಸೂಲಿ ಮಾಡಲಾಗುತ್ತಿದೆ. ಇದಕ್ಕೂ ಕಡಿವಾಣ ಹಾಕಬೇಕೆಂಬ ಅಭಿಪ್ರಾಯ ವ್ಯಕ್ತವಾಯಿತು. ವಿದೇಶಗಳಲ್ಲಿ ಅಧ್ಯಯನ ನಡೆಸುವ ವಿದ್ಯಾರ್ಥಿಗಳ ಖರ್ಚು ವೆಚ್ಚ ಅತ್ಯಂತ ದುಬಾರಿ ಆಗಿರುವುದರಿಂದ ವಿದ್ಯಾರ್ಥಿವೇತನ ಪ್ರಮಾಣವನ್ನು ಹೆಚ್ಚಿಸಬೇಕೆಂಬ ಆಗ್ರಹವೂ ವ್ಯಕ್ತವಾಯಿತು. ಈ ಎಲ್ಲ ಬೇಡಿಕೆಗಳನ್ನೂ ಪರಿಶೀಲಿಸುವುದಾಗಿ ಸಚಿವ ಪ್ರಕಾಶ್ ಜಾವಡೇಕರ್ ಭರವಸೆ ನೀಡಿದರು.
ವಿದೇಶಗಳಲ್ಲೂ ಭಾರತೀಯ ವಿಶ್ವವಿದ್ಯಾಲಯಗಳು ಆರಂಭವಾಗ ಬೇಕು. ಅಲ್ಲಿನ ವಿವಿಗಳಲ್ಲಿ ಅಧ್ಯಯನ ಮಾಡಿದರೂ ಭಾರತೀಯ ಮೂಲದವರೆಂದರೆ ಸುಲಭವಾಗಿ ಉದ್ಯೋಗ ಸಿಗುವುದಿಲ್ಲ. ಅಲ್ಲಿ ಶಿಕ್ಷಣ ವೆಚ್ಚ ಕೂಡ ಹೆಚ್ಚುತ್ತಿದ್ದು ಅನಿವಾಸಿ ಭಾರತೀಯ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡುವುದು ಕಷ್ಟವಾಗುತ್ತಿದೆ.
- ಕೆರಿಷಾ ಮುಂಷಿ, ಡರ್ಬನ್, ದಕ್ಷಿಣ ಆಫ್ರಿಕಾ
ಭಾರತದ ವಿದ್ಯಾರ್ಥಿಗಳು ದಕ್ಷಿಣ ಆಫ್ರಿಕಾದಂತಹ ದೇಶಗಳಲ್ಲಿ ಇನ್ನೂ ವರ್ಣಭೇದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇಲ್ಲಿನ ಶಿಕ್ಷಣ ವೆಚ್ಚ ಕೂಡ ವಿಪರೀತವಾಗಿದೆ. ಭಾರತೀಯರಿಗೆ ಇಂತಹ ದೇಶಗಳಲ್ಲಿ ಉದ್ಯೋಗಾ ವಕಾಶಗಳಲ್ಲೂ ಆದ್ಯತೆ ನೀಡಲಾಗುತ್ತಿಲ್ಲ.
- ಇಶಾ ರಣ್'ಚೋಡ್, ಪೋರ್ಟ್ ಎಲಿಜಬೆತ್, ದಕ್ಷಿಣ ಆಫ್ರಿಕಾ
ಪ್ರವಾಸಿ ಭಾರತೀಯ ದಿವಸ್ ಅತ್ಯಂತ ಅಚ್ಚುಕಟ್ಟಾಗಿ ಆಯೋಜಿಸಲಾಗಿದೆ. ಇಲ್ಲಿನ ವ್ಯವಸ್ಥೆ ಉತ್ತಮವಾಗಿದೆ. ಭಾರತವನ್ನು ತಿಳಿಯಿರಿ ಕಾರ್ಯಕ್ರಮದಲ್ಲಿ ಇಲ್ಲಿಗೆ ಬಂದಿರುವ ನಾವು ದೇಶದ ಕುರಿತು ಹೆಚ್ಚು ಹೆಚ್ಚು ತಿಳಿದುಕೊಳ್ಳುವಂತಾಗಿದೆ.
- ಪ್ರೇಯೇಷ್ ಪ್ರಿಟೋರಿಯಾ (ದಕ್ಷಿಣ ಆಫ್ರಿಕಾ)
(ಕನ್ನಡಪ್ರಭ ವಾರ್ತೆ)
epaper.kannadaprabha.in
