ಶಬರಿಮಲೆ[ಜ.05]: ಕೇರಳದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಬರಿಮಲೆ ಅಯ್ಯಪ್ಪ ದೇಗುಲದ 800 ವರ್ಷಗಳ ಸಂಪ್ರದಾಯ ಉಲ್ಲಂಘಿಸಿ ಇಬ್ಬರು ಮಹಿಳೆಯರು ದೇವಸ್ಥಾನ ಪ್ರವೇಶಿಸಿದ್ದರ ವಿರುದ್ಧ ಕೇರಳ ಹೊತ್ತಿ ಉರಿಯುತ್ತಿರುವಾಗಲೇ, ಶ್ರೀಲಂಕಾದ ಮಹಿಳೆಯೊಬ್ಬರು ಗುರುವಾರ ತಡರಾತ್ರಿ ಸದ್ದಿಲ್ಲದೆ ಅಯ್ಯಪ್ಪನ ಗರ್ಭಗುಡಿಗೆ ತೆರಳಿ ದರ್ಶನ ಪಡೆಯುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

ಕೇರಳದವರಾದ ಬಿಂದು ಹಾಗೂ ಕನಕದುರ್ಗ ಎಂಬ ಮಹಿಳೆಯರು ಸಿಬ್ಬಂದಿಯ ಪ್ರವೇಶ ದ್ವಾರದ ಮೂಲಕ ಬುಧವಾರ ನಸುಕಿನ ಜಾವ ಅಯ್ಯಪ್ಪ ದರ್ಶನ ಪಡೆದು ವಿಶ್ವಾದ್ಯಂತ ಸುದ್ದಿಯಾಗಿದ್ದರು. ಆದರೆ ಶಶಿಕಲಾ ಎಂಬ 47 ವರ್ಷದ ಶ್ರೀಲಂಕಾ ಮಹಿಳೆ, ಬರಿಗಾಲಿನಲ್ಲಿ 5.5 ಕಿ.ಮೀ. ದೂರವನ್ನು ಇರುಮುಡಿ ಹೊತ್ತು ಕ್ರಮಿಸಿ, ಪವಿತ್ರ 18 ಮೆಟ್ಟಿಲುಗಳನ್ನು ಹತ್ತಿ ‘ಶಾಸೊತ್ರೕಕ್ತ’ವಾಗಿ ಅಯ್ಯಪ್ಪ ಗರ್ಭಗುಡಿ ಪ್ರವೇಶಿಸಿದ್ದಾರೆ. ತನ್ಮೂಲಕ, ಎಲ್ಲ ವಯೋಮಾನದ ಮಹಿಳೆಯರೂ ಅಯ್ಯಪ್ಪ ದೇಗುಲ ಪ್ರವೇಶಿಸಬಹುದು ಎಂಬ 2018ರ ಸೆ.28ರ ಸುಪ್ರೀಂಕೋರ್ಟ್‌ ತೀರ್ಪಿನ ತರುವಾಯ ಅಯ್ಯಪ್ಪನ ದರ್ಶನ ಪಡೆದ ಮಹಿಳೆಯರ ಸಂಖ್ಯೆ ಮೂರಕ್ಕೇರಿಕೆಯಾಗಿದೆ.

ಗೊಂದಲ:

ಗುರುವಾರ ರಾತ್ರಿ ಪತಿ ಹಾಗೂ ಪುತ್ರನ ಜತೆ, ಪೊಲೀಸರ ನೆರವಿನೊಂದಿಗೆ ಅಯ್ಯಪ್ಪನ ಗರ್ಭಗುಡಿ ಪ್ರವೇಶಿಸಿದ್ದ ಶಶಿಕಲಾ ಬೆಳಗ್ಗೆ ಸುದ್ದಿಗಾರರ ಜತೆ ಮಾತನಾಡಿ, 48 ದಿವಸಗಳ ವ್ರತ ಮಾಡಿ ಅಯ್ಯಪ್ಪ ದರ್ಶನಕ್ಕಾಗಿ 18 ಮೆಟ್ಟಿಲುಗಳ ಬಳಿಗೆ ಹೋಗಿದ್ದೆ. ಆದರೆ ಪೊಲೀಸರು ತಡೆದು ವಾಪಸ್‌ ಕಳುಹಿಸಿದರು ಎಂದು ಹೇಳಿದರು. ಇದರಿಂದಾಗಿ ಶಶಿಕಲಾ ದೇಗುಲ ಪ್ರವೇಶ ಕುರಿತು ಗೊಂದಲಗಳು ಸೃಷ್ಟಿಯಾಗಿದ್ದವು.

ಇದರ ಬೆನ್ನಲ್ಲೇ ಅಯ್ಯಪ್ಪ ದೇಗುಲದ ಗರ್ಭಗುಡಿಯಲ್ಲಿರುವ ಸಿಸಿಟೀವಿ ದೃಶ್ಯಾವಳಿಗಳನ್ನು ಪೊಲೀಸ್‌ ಮೂಲಗಳು ಬಿಡುಗಡೆ ಮಾಡಿದವು. ಅದರಲ್ಲಿ ಗುರುವಾರ ರಾತ್ರಿ 10:46:46ರಿಂದ 10:46:50ರ ಸಮಯದಲ್ಲಿ ಶಶಿಕಲಾ ಅವರು ಅಯ್ಯಪ್ಪ ಗರ್ಭಗುಡಿಯಿಂದ ಹೊರಬರುತ್ತಿರುವ ದೃಶ್ಯ ದಾಖಲಾಗಿತ್ತು. ಇದರೊಂದಿಗೆ ಎಲ್ಲ ಗೊಂದಲಗಳಿಗೂ ತೆರೆಬಿತ್ತು. ಮುಖ್ಯಮಂತ್ರಿಗಳ ಕಚೇರಿ ಹಾಗೂ ಪೊಲೀಸರೂ ಶಶಿಕಲಾ ದರ್ಶನ ಪಡೆದಿರುವುದನ್ನು ಖಚಿತಪಡಿಸಿದರು. ಅಯ್ಯಪ್ಪ ದರ್ಶನ ಪಡೆಯುವ ಮುನ್ನ ಶಶಿಕಲಾ ಅವರು ತಾವು ಗರ್ಭಕೋಶ ತೆಗೆಸಿದ್ದು, ಮುಟ್ಟಾಗುತ್ತಿಲ್ಲ ಎಂಬುದನ್ನು ನಿರೂಪಿಸುವ ವೈದ್ಯಕೀಯ ಪ್ರಮಾಣಪತ್ರಗಳನ್ನು ಪೊಲೀಸರಿಗೆ ತೋರಿಸಿದ್ದರು.

ಶಶಿಕಲಾ ಅವರು ಮೂಲತಃ ಶ್ರೀಲಂಕಾದ ಕಾರೈತೀವುನವರಾದರೂ ಇದೀಗ ಅವರ ಕುಟುಂಬ ಫ್ರಾನ್ಸ್‌ನಲ್ಲಿ ವಾಸಿಸುತ್ತಿದೆ. ಸುರಕ್ಷತೆ ದೃಷ್ಟಿಯಿಂದ ಶಶಿಕಲಾ ಅವರು ದರ್ಶನ ಪಡೆದಿಲ್ಲ ಎಂದು ಪತ್ರಕರ್ತರಿಗೆ ಹೇಳಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಈ ನಡುವೆ, ಶುಕ್ರವಾರ ಬೆಳಗ್ಗೆ ಕಾಯಲ್‌ ಎಂಬ ಮಂಗಳಮುಖಿಯೊಬ್ಬರು ದೇಗುಲ ಪ್ರವೇಶಿಸಲು ಸೀರೆ ಧರಿಸಿ ಬಂದಿದ್ದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಪೊಲೀಸರು ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಶೌಚಾಲಯಕ್ಕೆ ಹೋಗಿ ಪುರುಷರ ವೇಷ ಧರಿಸಿ ಬಂದರು. ಆಗಲೂ ಅವರಿಗೆ ಅವಕಾಶ ಸಿಗಲಿಲ್ಲ. ಇತ್ತೀಚೆಗೆ 4 ಮಂಗಳಮುಖಿಯರು ಅಯ್ಯಪ್ಪ ದರ್ಶನ ಪಡೆದಿದ್ದರು.