ಗೌರಿ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನೀಡಿದ ಮಾಹಿತಿ ಮೇರೆಗೆ ಮಹಾರಾಷ್ಟ್ರದಲ್ಲಿ ನಾಲ್ವರು ಆರೋಪಿಗಳನ್ನು ಅಲ್ಲಿನ ಪೊಲೀಸರು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ದಾಭೋಲ್ಕರ್‌ ಪ್ರಕರಣದಲ್ಲಿ ತನಿಖೆ ಚುರುಕುಗೊಳಿಸಿರುವ ಸಿಬಿಐ ತಂಡ ಬಂಧನಕ್ಕೆ ಒಳಗಾಗಿರುವ ವೈಭವ್‌ ರಾವತ್‌, ಸುಧನ್ವ ಗೊಂದಲೇಕರ್‌ ಹಾಗೂ ಶರತ್‌ ಕಸಲ್ಕರ್‌ನನ್ನು ತೀವ್ರ ವಿಚಾರಣೆ ನಡೆಸಿದೆ.

ಬೆಂಗಳೂರು[ಆ.29] ಪತ್ರಕರ್ತೆ ಗೌರಿ ಲಂಕೇಶ್‌ ಹಂತಕರನ್ನು ವಶಕ್ಕೆ ನೀಡುವಂತೆ ಮಹಾರಾಷ್ಟ್ರದ ವಿಚಾರವಾದಿ ನರೇಂದ್ರ ದಾಭೋಲ್ಕರ್‌ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಕೊನೆಗೂ ಇಲ್ಲಿನ ಕೋರ್ಟ್‌ಗೆ ಬಾಡಿ ವಾರೆಂಟ್‌ ಕೋರಿ ಅರ್ಜಿ ಸಲ್ಲಿಸಿದೆ.

ಗೌರಿ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನೀಡಿದ ಮಾಹಿತಿ ಮೇರೆಗೆ ಮಹಾರಾಷ್ಟ್ರದಲ್ಲಿ ನಾಲ್ವರು ಆರೋಪಿಗಳನ್ನು ಅಲ್ಲಿನ ಪೊಲೀಸರು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ದಾಭೋಲ್ಕರ್‌ ಪ್ರಕರಣದಲ್ಲಿ ತನಿಖೆ ಚುರುಕುಗೊಳಿಸಿರುವ ಸಿಬಿಐ ತಂಡ ಬಂಧನಕ್ಕೆ ಒಳಗಾಗಿರುವ ವೈಭವ್‌ ರಾವತ್‌, ಸುಧನ್ವ ಗೊಂದಲೇಕರ್‌ ಹಾಗೂ ಶರತ್‌ ಕಸಲ್ಕರ್‌ನನ್ನು ತೀವ್ರ ವಿಚಾರಣೆ ನಡೆಸಿದೆ. ಈ ವೇಳೆ ಆರೋಪಿಗಳು ಗೌರಿ ಹಂತಕರೊಂದಿಗೆ ನೇರ ಸಂಪರ್ಕದಲ್ಲಿದ್ದ ಮಾಹಿತಿ ತನಿಖೆ ವೇಳೆ ಬೆಳಕಿಗೆ ಬಂದಿದೆ. ಅಲ್ಲದೆ, ಗೌರಿ ಲಂಕೇಶ್‌ ಅವರ ಹತ್ಯೆ ಬಳಿಕ ಶಿವಮೊಗ್ಗದ ಕಪ್ಪನಹಳ್ಳಿಯ ಸುಜೀತ್‌ ಕುಮಾರ್‌ ಪುಣೆಗೆ ತೆರಳಿ ತಲೆಮರೆಸಿಕೊಂಡಿದ್ದ. ಈತನಿಗೆ ಸುಧನ್ವ ಗೊಂದಲೇಕರ್‌ ತನ್ನ ಸ್ನೇಹಿತನ ಮನೆಯೊಂದರಲ್ಲಿ ಇರಲು ಆಶ್ರಯ ಕಲ್ಪಿಸಿದ್ದ.

ಅಲ್ಲದೆ, ಅಮೋಲ್‌ ಕಾಳೆ ದಾಭೋಲ್ಕರ್‌ ಹತ್ಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಆತ ಮುಖ್ಯವಾದ ಆರೋಪಿಯಾಗಿದ್ದಾನೆ. ಆತ ಗೌರಿ ಲಂಕೇಶ್‌ ಹತ್ಯೆ ಪ್ರಕರಣದಲ್ಲಿ ಎಸ್‌ಐಟಿಯಿಂದ ಬಂಧನಕ್ಕೆ ಒಳಗಾಗಿದ್ದಾನೆ. ದಾಭೋಲ್ಕರ್‌ ಮತ್ತು ಗೌರಿ ಹಂತಕರಿಗೂ ನೇರವಾದ ಸಂಬಂಧ ಇದೆ ಎಂದು ಇತ್ತೀಚೆಗೆ ಸಿಬಿಐ ತಂಡ ಪುಣೆ ಕೋರ್ಟ್‌ಗೆ ಹೇಳಿತ್ತು. ಹೀಗಾಗಿ ಗೌರಿ ಹತ್ಯೆಯಲ್ಲಿ ಭಾಗಿಯಾಗಿರುವ 13 ಮಂದಿ ಆರೋಪಿಗಳ ಪೈಕಿ ಮೂವರನ್ನು ವಶಕ್ಕೆ ನೀಡುವಂತೆ ಒಂದನೇ ಜಿಲ್ಲಾ ಸತ್ರ ಮತ್ತು ಪ್ರಧಾನ ನ್ಯಾಯಾಯಲಕ್ಕೆ ಸಿಬಿಐ ಮನವಿ ಮಾಡಿದೆ.

ನರೇಂದ್ರ ದಾಭೋಲ್ಕರ್‌ ಹತ್ಯೆಯಲ್ಲಿ ಗೌರಿ ಹಂತಕರಾದ ಪ್ರಕರಣದ ‘ಮಾಸ್ಟರ್‌ ಮೈಂಡ್‌’ ಪುಣೆಯ ಅಮೋಲ್‌ ಕಾಳೆ ಅಲಿಯಾಸ್‌ ಬಾಯ್‌ಸಾಬ್‌, ಅಮಿತ್‌ ದ್ವೇಗ್ವೇಕರ್‌ ಹಾಗೂ ರಾಜೇಶ್‌ ಬಂಗೇರಾನ ಪಾತ್ರ ಇರುವುದಾಗಿ ಕಂಡು ಬಂದಿದೆ. ಹೀಗಾಗಿ ಈ ಮೂವರು ಆರೋಪಿಗಳನ್ನು ವಶಕ್ಕೆ ನೀಡುವಂತೆ ಅರ್ಜಿಯಲ್ಲಿ ಮನವಿ ಮಾಡಿದೆ. ಅರ್ಜಿ ನಮೂನೆ ಸೂಕ್ತವಾಗಿಲ್ಲ. ಇಲ್ಲಿನ ಅರ್ಜಿ ನಮೂನೆಯಂತೆ ಸೂಕ್ತವಾಗಿ ತುಂಬಿ ಮನವಿ ಸಲ್ಲಿಸುವಂತೆ ಕೋರ್ಟ್‌ ಸೂಚಿಸಿದೆ.

ರಾಜೇಶ್‌ ಬಂಗೇರಾ ಮಡಗಾಂವ್‌ ಸ್ಫೋಟ ಪ್ರಕರಣದ ಆರೋಪಿ ರುದ್ರ ಪಾಟೀಲ್‌, ಸಾರಂಗ್‌ ಅಕೋಲ್ಕರ್‌, ವಿನಯ್‌ ಪವಾರ್‌, ವೀರೇಂದ್ರ ತಾವಡೆ ಹಾಗೂ ಅವರ ಕೆಲ ಸಹಚರರಿಗೆ ಶಸ್ತ್ರಾಸ್ತ್ರ ತರಬೇತಿ ಕೊಟ್ಟಿದ್ದಾಗಿ ಎಸ್‌ಐಟಿ ಅಧಿಕಾರಿಗಳ ಬಳಿ ಹೇಳಿಕೆ ನೀಡಿದ್ದಾನೆ. ದಾಭೋಲ್ಕರ್‌ ಪ್ರಕರಣದಲ್ಲಿ ಶೂಟರ್‌ ಎನ್ನಲಾಗುತ್ತಿರುವ ಅಂದೂರೆ ಕೂಡ ರಾಜೇಶ್‌ ಬಂಗೇರಾನಿಂದ ಶಸ್ತ್ರಾಸ್ತ್ರ ತರಬೇತಿ ಪಡೆದಿರುವ ಶಂಕೆ ಬಲವಾಗಿದೆ. ಈ ಹಿನ್ನೆಲೆಯಲ್ಲಿ ಸಿಬಿಐ ತಂಡ ಆತನನ್ನು ವಶಕ್ಕೆ ಪಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಎಸ್‌ಐಟಿ ಅಧಿಕಾರಿಗಳ ಜತೆ ಚರ್ಚೆ:

ನಗರಕ್ಕೆ ಧಾವಿಸಿರುವ ಸಿಬಿಐನ ಇಬ್ಬರು ಅಧಿಕಾರಿಗಳು ಬಳಿಕ ಗೌರಿ ಹತ್ಯೆಯ ತನಿಖೆ ನಡೆಸುತ್ತಿರುವ ತನಿಖಾ ತಂಡದ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸಿದೆ. ಈ ವೇಳೆ ಕೆಲವೊಂದು ಮಾಹಿತಿಯನ್ನು ವಿನಿಮಯ ಮಾಡಿಕೊಂಡಿದೆ. ಸಿಬಿಐ ಅಧಿಕಾರಿಗಳು ನಗರದಲ್ಲೇ ಮೊಕ್ಕಾಂ ಹೂಡಿದ್ದು, ಬುಧವಾರ ಪುನಃ ಅರ್ಜಿ ಸಲ್ಲಿಸಲಿದ್ದಾರೆ ಎಂದು ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದೆ.

ವರದಿ: ಎನ್. ಲಕ್ಷ್ಮಣ್. ಕನ್ನಡಪ್ರಭ