ಸಿಬಿಐ ಅಧಿಕಾರಿಗಳು ಸಿಬಿಐ ಕೇಂದ್ರ ಕಚೇರಿ ಮೇಲೆಯೇ ಸೋಮವಾರ ದಾಳಿ ನಡೆಸಿದ್ದಾರೆ. ಸಿಬಿಐನ 6 ದಶಕಗಳ ಇತಿಹಾಸದಲ್ಲಿ ಅದರ ಉನ್ನತ ಅಧಿಕಾರಿಯೊಬ್ಬರ ವಿರುದ್ಧ ಪ್ರಕರಣ ದಾಖಲಾಗಿದ್ದು, ಕೇಂದ್ರ ಕಚೇರಿಯ ಮೇಲೆಯೇ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ ಬೆಳವಣಿಗೆಗಳು ಎಂದೂ ನಡೆದಿರಲಿಲ್ಲ. 

ನವದೆಹಲಿ: ದೇಶದ ಅತ್ಯುನ್ನತ ತನಿಖಾ ಸಂಸ್ಥೆಯಾದ ಸಿಬಿಐ (ಕೇಂದ್ರೀಯ ತನಿಖಾ ದಳ)ನ ಉನ್ನತಾಧಿಕಾರಿಗಳ ನಡುವಣ ಜಗಳ ಮತ್ತಷ್ಟುತಾರಕಕ್ಕೇರಿದೆ. ಸಂಸ್ಥೆಯ ನಂ.2 ಬಾಸ್‌ ರಾಕೇಶ್‌ ಆಸ್ಥಾನ ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲಾದ ಬೆನ್ನಲ್ಲೇ ಸಿಬಿಐ ಅಧಿಕಾರಿಗಳು ಸಿಬಿಐ ಕೇಂದ್ರ ಕಚೇರಿ ಮೇಲೆಯೇ ಸೋಮವಾರ ದಾಳಿ ನಡೆಸಿದ್ದಾರೆ. ಸಿಬಿಐನ 6 ದಶಕಗಳ ಇತಿಹಾಸದಲ್ಲಿ ಅದರ ಉನ್ನತ ಅಧಿಕಾರಿಯೊಬ್ಬರ ವಿರುದ್ಧ ಪ್ರಕರಣ ದಾಖಲಾಗಿದ್ದು, ಕೇಂದ್ರ ಕಚೇರಿಯ ಮೇಲೆಯೇ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ ಬೆಳವಣಿಗೆಗಳು ಎಂದೂ ನಡೆದಿರಲಿಲ್ಲ.

ಈ ನಡುವೆ, ಸಿಬಿಐ ಮುಖ್ಯಸ್ಥ ಅಲೋಕ್‌ ವರ್ಮಾ ಅವರನ್ನು 2 ಕೋಟಿ ರು. ಲಂಚ ಪಡೆದ ಪ್ರಕರಣದಲ್ಲಿ ಸಿಲುಕಿಸುವ ಉದ್ದೇಶದಿಂದ ದಾಖಲೆ ತಿರುಚಿದ ಆರೋಪದ ಮೇರೆಗೆ ನಂ.2 ಬಾಸ್‌ ರಾಕೇಶ್‌ ಆಸ್ಥಾನ ತಂಡದಲ್ಲಿದ್ದ ದೇವೇಂದ್ರ ಕುಮಾರ್‌ ಎಂಬ ತನ್ನ ಡಿವೈಎಸ್ಪಿಯನ್ನು ಸಿಬಿಐ ಬಂಧನ ಮಾಡಿದೆ. ಇದಾದ ಕೆಲವೇ ಗಂಟೆಗಳಲ್ಲಿ ಸಿಬಿಐ ಕೇಂದ್ರ ಕಚೇರಿ ಹಾಗೂ ದೇವೇಂದ್ರ ಕುಮಾರ್‌ಗೆ ಸಂಬಂಧಿಸಿದ ಸ್ಥಳಗಳ ಮೇಲೆ ದಾಳಿ ನಡೆಸಿ, ದಾಖಲೆಗಳನ್ನು ಅಧಿಕಾರಿಗಳು ಜಾಲಾಡಿದ್ದಾರೆ.

ಸಿಬಿಐ ಬಾಸ್‌ಗಳ ನಡುವಣ ತಿಕ್ಕಾಟ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಲೋಕ್‌ ವರ್ಮಾ ಹಾಗೂ ರಾಕೇಶ್‌ ಆಸ್ಥಾನ ಅವರನ್ನು ಕರೆಸಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತುಕತೆ ನಡೆಸಿದ್ದಾರೆ. ಆಸ್ಥಾನ ವಿರುದ್ಧ ಪ್ರಕರಣ ದಾಖಲಾಗುವಂತೆ ಅಲೋಕ್‌ ವರ್ಮಾ ನೋಡಿಕೊಂಡಿದ್ದಾರೆ ಎನ್ನಲಾಗಿದ್ದು, ಅದಕ್ಕೆ ಪ್ರಧಾನಿ ಕಚೇರಿಯಿಂದ ಒಪ್ಪಿಗೆ ಪಡೆದಿರಲಿಲ್ಲ ಎಂದು ಹೇಳಲಾಗುತ್ತಿದೆ.

ಏನಿದು ರಾದ್ಧಾಂತ?: ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಮಾಂಸ ರಫ್ತು ಉದ್ಯಮಿ ಮೊಯಿನ್‌ ಖುರೇಷಿ ವಿರುದ್ಧ ಸಿಬಿಐ ಅಧಿಕಾರಿಗಳು ತನಿಖೆ ಆರಂಭಿಸಿದ್ದರು. ಅದೇ ಪ್ರಕರಣದಲ್ಲಿ ಹೈದರಾಬಾದ್‌ ಮೂಲದ ಉದ್ಯಮಿ ಸತೀಶ್‌ ಸನಾ ಎಂಬುವರ ಬಗ್ಗೆಯೂ ತನಿಖೆ ಆರಂಭವಾಗಿತ್ತು. ಆದರೆ ಅವರ ಹೆಸರನ್ನು ತನಿಖೆಯಿಂದ ಕೈಬಿಡಲು 2 ಕೋಟಿ ರು. ಲಂಚವನ್ನು ಆಸ್ಥಾನ ಪಡೆದಿದ್ದರು ಎಂದು ಪ್ರಕರಣ ದಾಖಲಿಸಲಾಗಿದೆ. 10 ತಿಂಗಳ ಅವಧಿಯಲ್ಲಿ ಆಸ್ಥಾನ ಅವರಿಗೆ ಲಂಚ ತಲುಪಿಸಿದ್ದಾಗಿ ಸನಾ ತಿಳಿಸಿದ್ದಾರೆ ಎಂದು ಹೇಳಲಾಗಿದೆ.

2018ರ ಸೆ.26ರಂದು ಆಸ್ಥಾನ ನೇತೃತ್ವದ ತಂಡ ಸತೀಶ್‌ ಸನಾ ಹೇಳಿಕೆ ದಾಖಲಿಸಿಕೊಂಡಿದೆ ಎಂದು ಡಿವೈಎಸ್ಪಿ ದೇವೇಂದ್ರ ಕುಮಾರ್‌ ವರದಿ ಸಿದ್ಧ ಮಾಡಿದ್ದರು. ಆದರೆ ಅಂದು ಸತೀಶ್‌ ಸನಾ ಹೈದರಾಬಾದ್‌ನಲ್ಲಿದ್ದರು. ಅಲೋಕ್‌ ವರ್ಮಾ ಅವರನ್ನು ಸಿಲುಕಿಸುವ ಉದ್ದೇಶದಿಂದಲೇ ದೇವೇಂದ್ರ ದಾಖಲೆ ತಿರುಚಿದ್ದಾರೆ ಎಂದು ಆರೋಪಿಸಿ, ಅವರನ್ನು ಬಂಧಿಸಲಾಗಿದೆ.

ಆದರೆ, ‘ಅಲೋಕ್‌ ವರ್ಮಾ ಅವರೇ ಸತೀಶ್‌ ಸನಾರಿಂದ ಲಂಚ ಪಡೆದಿದ್ದರು. ಇಂತಹ 10 ಆರೋಪಗಳು ಅವರ ವಿರುದ್ಧ ಇವೆ. ಈ ಬಗ್ಗೆ ದನಿ ಎತ್ತಿದ ಕಾರಣಕ್ಕಾಗಿ ತಮ್ಮ ವಿರುದ್ಧ ಅಲೋಕ್‌ ವರ್ಮಾ ಈ ರೀತಿ ಸೇಡು ತೀರಿಸಿಕೊಳ್ಳುತ್ತಿದ್ದಾರೆ’ ಎಂದು ಕೆಲ ತಿಂಗಳ ಹಿಂದೆ ಸರ್ಕಾರ ಆಸ್ಥಾನ ದೂರು ನೀಡಿದ್ದರು.

ಹಲವು ಹಿರಿಯ ಅಧಿಕಾರಿಗಳನ್ನು ಕಡೆಗಣಿಸಿ, ಗುಜರಾತ್‌ ಕೇಡರ್‌ನ ಐಪಿಎಸ್‌ ಅಧಿಕಾರಿಯಾಗಿರುವ ಆಸ್ಥಾನ ಅವರನ್ನು ಸಿಬಿಐಗೆ ಕರೆತಂದು, ನಂ.2 ಹುದ್ದೆ ನೀಡಿದ ಬಳಿಕ ಇಬ್ಬರೂ ಅಧಿಕಾರಿಗಳ ನಡುವೆ ಕಿತ್ತಾಟ ನಡೆಯುತ್ತಿದೆ ಎಂದು ಹೇಳಲಾಗಿದೆ.